ಔಷಧಿ ಅಂಗಡಿ, ಡಯಾಗ್ನೋಸ್ಟಿಕ್‌ ಸೆಂಟರ್ ಗಳ ನ್ಯೂನ್ಯತೆ

KannadaprabhaNewsNetwork |  
Published : Dec 14, 2023, 01:30 AM IST
13ಕೆಎಂಎನ್ ಡಿ20,21ನಾಗಮಂಗಲ ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ಮೆಡಿಕಲ್ ಸ್ಟೋರ್‌ನಲ್ಲಿ ತಹಸೀಲ್ದಾರ್ ನಯೀಂ ಉನ್ನೀಸಾ ನೇತೃತ್ವದ ತಾಲೂಕು ಜಾಗೃತ ದಳದ ಅಧಿಕಾರಿಗಳು ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಔಷಧಿ ಅಂಗಡಿ, ಡಯಾಗ್ನೋಸ್ಟಿಕ್‌ ಸೆಂಟರ್ ಗಳ ನ್ಯೂನ್ಯತೆಸರಿಪಡಿಸಿಕೊಳ್ಳದಿದ್ದರೆ ನೋಟಿಸ್ ಜಾರಿ, ಕಾನೂನು ಕ್ರಮ ತಹಸೀಲ್ದಾರ್ ಎಚ್ಚರಿಕೆ

- ಸರಿಪಡಿಸಿಕೊಳ್ಳದಿದ್ದರೆ ನೋಟಿಸ್ ಜಾರಿ, ಕಾನೂನು ಕ್ರಮ ತಹಸೀಲ್ದಾರ್ ಎಚ್ಚರಿಕೆ ಕನ್ನಡಪ್ರಭ ವಾರ್ತೆ ನಾಗಮಂಗಲ

ಔಷಧಿ ಅಂಗಡಿ ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ಗಲ್ಲಿರುವ ನ್ಯೂನ್ಯತೆಗಳನ್ನು ಶೀಘ್ರ ಸರಿಪಡಿಸಿಕೊಳ್ಳದಿದ್ದಲ್ಲಿ ನೋಟಿಸ್ ಜಾರಿಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ನಯೀಂ ಉನ್ನೀಸಾ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿರುವ ಮೂರು ಮೆಡಿಕಲ್ ಶಾಪ್‌ಗಳು ಮತ್ತು ಎರಡು ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೆ ತಾಲೂಕು ಜಾಗೃತ ದಳದ ಅಧಿಕಾರಿಗಳ ತಂಡದೊಂದಿಗೆ ದಿಢೀರ್ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

ಕೆಲ ಮೆಡಿಕಲ್ ಸ್ಟೋರ್‌ಗಳಲ್ಲಿ ಸೂಕ್ತ ದಾಖಲೆಯಿಲ್ಲದಿರುವುದು, ಅವಧಿ ಮೀರಿದ ಮಾತ್ರೆ ಔಷಧಿಗಳನ್ನು ಮಾರಾಟಕ್ಕಿಟ್ಟಿರುವುದು ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ಗಳಲ್ಲಿನ ನ್ಯೂನ್ಯತೆಗಳನ್ನು ಕಂಡು ಗರಂ ಆದರು.

ಲಕ್ಷ್ಮೀ ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ಕಾವೇರಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ರಕ್ತ ಪರೀಕ್ಷೆ ನಡೆಸುವ ಪ್ರಯೋಗಾಲಯ ಮತ್ತು ಎಕ್ಸರೇ ಘಟಕಗಳನ್ನು ಪರಿಶೀಲಿಸಿದ ಜಾಗೃತ ದಳದ ಅಧಿಕಾರಿಗಳು, ದಾಖಲಾತಿ ನಿರ್ವಹಣೆ ಲೋಪ ಹಾಗೂ ತ್ಯಾಜ್ಯ ವಸ್ತು ವಿಲೇವಾರಿಯಲ್ಲಿನ ದೋಷವನ್ನು ಕಂಡು ಈ ಅವ್ಯವಸ್ಥೆಯನ್ನು ಶೀಘ್ರದಲ್ಲಿ ಸರಿಪಡಿಸಿಕೊಳ್ಳುವಂತೆ ಸೂಚಿಸಿದರು.

ಯಾವ ಪರೀಕ್ಷೆಗೆ ಎಷ್ಟು ಶುಲ್ಕ ಎಂಬುದರ ದರ ಪಟ್ಟಿಯನ್ನು ಜನರಿಗೆ ಕಾಣುವಂತೆ ದೊಡ್ಡದಾಗಿ ಹಾಕಿಸಬೇಕು. ಯಾವುದೇ ಪರೀಕ್ಷೆಗೊಳಪಡುವ ರೋಗಿಗಳನ್ನು ಅನಾವಶ್ಯಕವಾಗಿ ಕೇಂದ್ರಗಳಲ್ಲಿ ಹೆಚ್ಚು ಕಾಲ ಕಾಯಿಸಬಾರದು. ನಿಗಧಿತ ಸಮಯದೊಳಗೆ ಅವರ ಪರೀಕ್ಷಾ ವರದಿ ಕೊಟ್ಟು ಕಳಿಸಬೇಕು. ನಿಗಧಿತ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಸ್ಕ್ಯಾನಿಂಗ್‌ಗೆ ಸಂಬಂಧಿಸಿದ ದಾಖಲಾತಿ ಪುಸ್ತಕ ಪರಿಶೀಲಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ, ಕಳೆದ ವಾರವಷ್ಟೇ ಸ್ಕ್ಯಾನಿಂಗ್ ಮಾಡಿಸಿಕೊಂಡು ಹೋಗಿದ್ದ ಇಬ್ಬರು ಗರ್ಭಿಣಿಯರಿಗೆ ದೂರವಾಣಿ ಕರೆ ಮಾಡಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ ವೈದ್ಯರು, ಆಶಾ ಕಾರ್ಯಕರ್ತೆಯರ ವಿವರ ಮತ್ತು ತಾಯಿ ಕಾರ್ಡ್ ಪಡೆದಿರುವ ಕುರಿತು ಮಾಹಿತಿ ಪಡೆದುಕೊಂಡರು.

ಆರತಿ ಮೆಡಿಕಲ್ ಸ್ಟೋರ್‌ನಲ್ಲಿ ಅವಧಿ ಮೀರಿದ ಮಾತ್ರೆ ಮತ್ತು ಔಷಧಿಗಳನ್ನು ಮಾರಾಟಕ್ಕಿಟ್ಟಿರುವುದನ್ನು ಪತ್ತೆ ಹಚ್ಚಿದ ಅಧಿಕಾರಿಗಳು, ಇಂತಹ ಮಾತ್ರೆ ಮತ್ತು ಔಷಧಿಗಳನ್ನು ಮಾರಾಟ ಮಾಡಬಾರದೆಂದು ಗೊತ್ತಿಲ್ಲವೆ? ಅವಧಿ ಮೀರಿ ಐದಾರು ತಿಂಗಳು ಕಳೆದಿದ್ದರೂ ಸಹ ಅಂತಹ ಮಾತ್ರೆಗಳನ್ನು ಮಾರಕ್ಕಿಟ್ಟಿರುವುದಾದರೂ ಏಕೆ ಎಂದು ತರಾಟೆಗೆ ತೆಗೆದುಕೊಂಡರು. ಸೂಕ್ತ ಸಮಜಾಯಿಷಿ ನೀಡಲು ಅಂಗಡಿ ಮಾಲೀಕರು ತಡಬಡಾಯಿಸಿದರು.

ಶ್ರೀ ಅನ್ನಪೂರ್ಣೇಶ್ವರಿ ಮೆಡಿಕಲ್ಸ್, ಆರತಿ ಮೆಡಿಕಲ್ಸ್ ಮತ್ತು ಶ್ರೀ ವೀರಭದ್ರೇಶ್ವರ ಮೆಡಿಕಲ್ಸ್ ಸ್ಟೋರ್ಸ್ ಗಳಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ನಿಮ್ಮಲ್ಲಿರುವ ಲೋಪ ದೋಷಗಳನ್ನು ಒಂದೆರಡು ದಿನಗಳಲ್ಲಿ ಸರಿಪಡಿಸಿಕೊಂಡು ಸೂಕ್ತ ದಾಖಲಾತಿಗಳೊಂದಿಗೆ ನಿಯಮಾನುಸಾರವೇ ಔಷಧಿ ಅಂಗಡಿಗಳನ್ನು ನಡೆಸಬೇಕು. ಇಲ್ಲದಿದ್ದರೆ ನೋಟೀಸ್ ಜಾರಿಗೊಳಿಸಿ ಅಂಗಡಿ ಮುಚ್ಚಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದರು.

ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ, ಪ್ರೊಬೆಷನರಿ ತಹಸೀಲ್ದಾರ್‌ಗಳಾದ ಸುಪ್ರಿತ, ಚಂದ್ರಶೇಖರ್, ಸಿಡಿಪಿಓ ಕೃಷ್ಣಮೂರ್ತಿ, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್, ಎಎಸ್‌ಐ ರವಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಿಕ್ಕಸ್ವಾಮಿ, ಲ್ಯಾಬ್ ಟಿಕ್ನಿಷಿಯನ್ ಅವಿನಾಶ್ ಇದ್ದರು.

---------

13ಕೆಎಂಎನ್ ಡಿ20,21

ನಾಗಮಂಗಲ ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ಮೆಡಿಕಲ್ ಸ್ಟೋರ್‌ನಲ್ಲಿ ತಹಸೀಲ್ದಾರ್ ನಯೀಂ ಉನ್ನೀಸಾ ನೇತೃತ್ವದ ತಾಲೂಕು ಜಾಗೃತ ದಳದ ಅಧಿಕಾರಿಗಳು ಪರಿಶೀಲನೆ ನಡೆಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ