ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯಲ್ಲಿ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ದಿವ್ಯಾಪ್ರಭು ಕಿಡಿಜಿಲ್ಲಾಧಿಕಾರಿ ಕತ್ತಲಲ್ಲಿಟ್ಟು ಅನುದಾನ ನಿರ್ವಹಣೆ । ಲೆಕ್ಕ ಪತ್ರ ಪರಿಶೀಲನೆಗೆ ಜಿಪಂ ಮುಖ್ಯ ಲೆಕ್ಕಾಧಿಕಾರಿ ನೇಮಕ.ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣ ಅವ್ಯವಸ್ಥೆ ಆಗರವಾಗಿರುವುದರ ಬಗ್ಗೆ ಮಾಧ್ಯಮಗಳು ಡಿಸೆಂಬರ್ 5 ರಂದು ವರದಿ ಮಾಡಿದ್ದವು. ಈ ಬಗ್ಗೆ ವಾಯುವಿಹಾರಿಗಲು ಜಿಲ್ಲಾಧಿಕಾರಿಗಳ ಭೇಟಿಯಾಗಿ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಾಯವಿಹಾರಿಗಳು ಹಾಗೂ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಯಾವುದೇ ಮಾನದಂಡಗಳ ಅನುಸರಿಸದೆ ಅನುದಾನ ಬಳಕೆ ಮಾಡಿರುವುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. ಪ್ರತಿ ಹಂತದಲ್ಲಿಯೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಹಾರಿಕೆ ಉತ್ತರ ನೀಡಿದ್ದು ದಿವ್ಯಾಪ್ರಭು ಅವರಿಗೆ ಕೋಪ ತರಿಸಿತು. ನಾನೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಎಲ್ಲ ಹೆಡ್ ಆಫ್ ಅಕೌಂಟ್ ಗಳು ಗೊತ್ತು. ಮೀಟಿಂಗ್ ಗೆ ಬರುವಾಗ ತಯಾರಾಗಿ ಬರಬೇಕು ಎಂಬ ಪ್ರಜ್ಞೆ ಬೇಡವಾ ಎಂದು ಪ್ರಶ್ನಿಸಿದರು. ಅನುದಾನ ಬಳಕೆ ಮಾಡಿರುವ ಬಗ್ಗೆ ನನಗೆ ಅಕೌಂಟ್ ಡೀಟೈಲ್ಸ್, ಯಾವ ಬ್ಯಾಂಕ್ ನಲ್ಲಿ ಹಣ ಇಡಲಾಗಿದೆ ಎಂಬ ಬಗ್ಗೆ ಪಾಸ್ ಬುಕ್ ಸೇರಿದಂತೆ ಎಲ್ಲ ಮಾಹಿತಿ ಬೇಕು ಎಂದರು.
ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿ ವಾಯು ವಿಹಾರಿಗಳ ಪರವಾಗಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಜೆ.ಯಾದವರೆಡ್ಡಿ, ಇಡೀ ಕ್ರೀಡಾಂಗಣ ಅವ್ಯವಸ್ಥೆಯಿಂದ ಕೂಡಿದೆ. ಹಾವುಗಳು ಹರಿದಾಡುತ್ತಿವೆ, ಕುಡಿಯಲು ನೀರಿಲ್ಲ, ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದರೆ ಅನುದಾನವಿಲ್ಲವೆಂದು ಹೇಳಲಾಗುತ್ತಿದೆ ಎಂದರು.ಇಲಾಖೆಯಲ್ಲಿ ಐವತ್ತು ಲಕ್ಷ ರುಪಾಯಿ ಅನುದಾನವಿದ್ದು ದಸರಾ ಕ್ರೀಡಾಕೂಟ ಸೇರಿದಂತೆ ಜಿಲ್ಲಾ ಮಟ್ಟದ ಇತರೆ ಕ್ರೀಡೆಗಳಿಗೆ 35 ಲಕ್ಷ ವೆಚ್ಚವಾಗಿದ್ದು 15 ಲಕ್ಷ ಉಳಿದಿದೆ. ಕಳೆದ ವರ್ಷ ಅನುದಾನ ಬಳಕೆ ಮಾಡಿಕೊಳ್ಳದ ಕಾರಣ ಲ್ಯಾಪ್ಸ್ ಆಗಿತ್ತೆಂಬ ಸಂಗತಿಯ ಕ್ರೀಡಾ ಅಧಿಕಾರಿ ಸಭೆ ಗಮನಕ್ಕೆ ತಂದರು.
ಕ್ರೀಡಾಂಗಣ ದುರಸ್ತಿಗೆ ಬೇಕಾದ ಅನುದಾನದ ಬಗ್ಗೆ ತಮ್ಮ ಗಮನಕ್ಕೆ ತಂದಿದ್ದರೆ ಸಿಎಸ್ ಆರ್ ಇಲ್ಲವೆ ಡಿಎಂಎಫ್ ಫಂಡ್ ನಲ್ಲಿ ಅವಕಾಶ ಮಾಡಿಕೊಳ್ಳಬಹುದಿತ್ತು. ಇಂತಹ ಯಾವ ಪ್ರಯತ್ನ ಮಾಡಿಯೇ ಇಲ್ಲ. ಈ ಹಿಂದಿನ ಅಧಿಕಾರಿ ಸಸ್ಪೆಂಡ್ ಆಗಿದ್ದರು ಎಂಬುದು ನೆನೆಪಿರಲಿ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿ, ಕ್ರೀಡಾಂಗಣ ನಿರ್ವಹಣೆಗೆ ವಾರ್ಷಿಕವಾಗಿ ಎಷ್ಟು ಅನುದಾನ ಬೇಕಾಗುತ್ತದೆ, ಸ್ವಿಮ್ಮಿಂಗ್ ಫೂಲ್, ಸೆಟಲ್ ಕೋರ್ಟ್, ಸೇರಿದಂತೆ ವಿವಿದ ಬಾಬತ್ತುಗಳಿಂದ ಎಷ್ಟು ಹಣ ಸಂಗ್ರಹವಾಗುತ್ತದೆ ಎಂಬಿತ್ಯಾದಿ ಮಾಹಿತಿಗಳೇ ಇಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು. ಅಂತಿಮವಾಗಿ ಲೆಕ್ಕಪತ್ರಗಳ ಪರಿಶೀಲನೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗೆ ಜವಾಬ್ದಾರಿ ವಹಿಸಲಾಯಿತು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್, ನಗರಸಭೆ ಪೌರಾಯುಕ್ತೆ ರೇಣುಕಾ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.