ಕನ್ನಡಪ್ರಭ ವಾರ್ತೆ ರಾಮದುರ್ಗ
ರಾಜ್ಯದಲ್ಲಿ ಬಹುತೇಕ ಸಹಕಾರಿ ರಂಗದ ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿಸಿ ಸಾಲದ ಸುಳಿಯಲ್ಲಿ ನರಳುತ್ತಿವೆ. ಆದರೆ, ಶ್ರೀ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಸಾಲಮುಕ್ತವಾಗಿ ಪ್ರತಿವರ್ಷ ₹ 6.31 ಕೋಟಿ ಲಾಭದಲ್ಲಿದೆ ಎಂದು ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಹೇಳಿದರು.ಮಂಗಳವಾರ ಖಾನಪೇಟೆಯ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ 2023-24ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಸಿ ಮಾತನಾಡಿದ ಅವರು, ಕಾರ್ಖಾನೆ ತನ್ನ ಎಲ್ಲ ಸಾಲ ತೀರಿಸಿ ಋಣಮುಕ್ತ ಕಾರ್ಖಾನೆಯಾಗಿ ಹೊರಹೊಮ್ಮಿದೆ. ಕಾರ್ಖಾನೆ ಲಾಭಾಂಶದಲ್ಲಿ ಎಲ್ಲ ಷೇರುದಾರರಿಗೆ ರಿಯಾಯ್ತಿ ದರದಲ್ಲಿ ಸಕ್ಕರೆ ವಿತರಣೆ ಮಾಡುತ್ತಿದೆ ಎಂದು ತಿಳಿಸಿದರು.ಕಬ್ಬು ಆಯುಕ್ತರ ಪರವಾನಗಿ ಪಡೆದು ಲಾಭಾಂಶದ ₹1.51 ಕೋಟಿ ಹಣದಲ್ಲಿ ಒಟ್ಟು 5100 ಚದರ ಅಡಿಯಲ್ಲಿ ನೂತನ ಆಡಳಿತ ಭವನ ನಿರ್ಮಾಣ ಮಾಡಲಾಗುತ್ತಿದೆ. ಒಟ್ಟು ₹8 ಕೋಟಿ ಹಣದಲ್ಲಿ ರಿಯಾಯ್ತಿ ದರದಲ್ಲಿ ಪ್ರತಿ ಷೇರದಾರರಿಗೆ ಒಂದು ಕ್ವಿಂಟಲ್ ಸಕ್ಕರೆ ನೀಡಲಾಗುತ್ತಿದೆ ಎಂದು ಹೇಳಿದರು.ಪ್ರತಿ ವಾರ್ಷಕ ಸಭೆಯಲ್ಲಿ ಕೆಲವರು ಇಲ್ಲಸಲ್ಲದ ಆರೋಪ ಮಾಡಿ ಗದ್ದಲ ಎಬ್ಬಿಸುತ್ತಿದ್ದರು. ಇದೇ ಪ್ರಥಮ ಬಾರಿಗೆ ಒಂದೂ ಆರೋಪ ಇಲ್ಲದೆಯೇ ಸರ್ವ ಸಾಧಾರಣ ಸಭೆ ನಡೆದಿರುವುದು ಸಂತಸ ತಂದಿದೆ ಎಂದು ನಿರ್ದೇಶಕ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಹರ್ಷ ವ್ಯಕ್ತ ಪಡಿಸಿದರು.ತೊರಗಲ್ ಗಚ್ಚಿನ ಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಉಪಾಧ್ಯಕ್ಷ ಬಸನಗೌಡ ದ್ಯಾಮನಗೌಡ ಸ್ವಾಗತಿಸಿದರು. ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕಿ ಶಾಹೀನ್ ಅಖ್ತಾರ, ಆಡಳಿತ ಮಂಡಳಿ ಸದಸ್ಯರು, ಪ್ಯಾರಿ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಶಿವಸುಬ್ರಹ್ಮಣ್ಯ, ಸಿಬ್ಬಂದಿ ಇದ್ದರು.ಷೇರುದಾರರ ಕಬ್ಬು ಕಟಾವು ಮಾಡದೇ ಬೇರೆಯವರ ಕಬ್ಬು ಕಟಾವಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸ್ವತಃ ರೈತರೇ ಕಬ್ಬು ಕಟಾವು ಮಾಡಲೂ ಅವಕಾಶ ನೀಡುತ್ತಿಲ್ಲ. ಬೇರೆ ಕಡೆಯಿಂದ ಕಬ್ಬು ಆಮದು ಮಾಡಿಕೊಳ್ಳಲಾಗುತ್ತಿದೆ. ಸ್ಥಳೀಯ ರೈತರ ಕಬ್ಬು ಲಾವಣಿ ಪ್ರಕಾರ ಕಟಾವು ಮಾಡಲು ಲೀಜ್ ಪಡೆದಿರುವ ಪ್ಯಾರಿ ಕಂಪನಿಗೆ ಆಡಳಿತ ಮಂಡಳಿ ಸೂಚನೆ ನೀಡಬೇಕು ಎಂದು ಷೇರುದಾರರು ಒತ್ತಾಯಿಸಿದರು.
ಸುತ್ತಮುತ್ತಲಿನ ಕಾರ್ಖಾನೆಗಳಲ್ಲಿ ನೀಡುವ ದರವನ್ನು ಪ್ಯಾರಿ ಕಂಪನಿ ನೀಡಬೇಕು. ಷೇರುದಾರ ಮಕ್ಕಳಿಗೆ ಉನ್ನತ ಶಿಕ್ಷಣದ ತರಬೇತಿ ನೀಡಬೇಕು. ದಬ್ಬಾಳಿಕೆ ನಡೆಸುವ ಮೇಲ್ವಿಚಾರಕ ಸಿಬ್ಬಂದಿಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದು ಆಗ್ರಹಿಸಿದರು.