ಸಂಡೂರು: ಭಾರತ ಪುಣ್ಯಭೂಮಿ. ಭಾರತ ಎಲ್ಲ ಧರ್ಮಗಳಿಗೂ ಆಶ್ರಯ ನೀಡಿದೆ. ಕೆಲವು ಮತಾಂಧರಿಂದ ಇಲ್ಲಿನ ಸಾಮರಸ್ಯಕ್ಕೆ ಧಕ್ಕೆಯುಂಟಾಗುತ್ತಿದೆ. ಭಾರತೀಯ ಸಂಸ್ಕೃತಿ ಹಾಗೂ ಹಿಂದೂ ಧರ್ಮದ ರಕ್ಷಣೆಗಾಗಿ ಜನತೆ ಕಂಕಣಬದ್ಧರಾಗಬೇಕಿದೆ ಎಂದು ಸಂಡೂರಿನ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ವಿಠಲ ಮಂದಿರದಲ್ಲಿ ಶುಕ್ರವಾರ ಶ್ರೀರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅಯೋಧ್ಯೆಯಿಂದ ಬಂದ ಅಕ್ಷತೆ ಹಾಗೂ ಕಳಶ ವಿತರಣೆ ಹಾಗೂ ಶ್ರೀರಾಮನ ಭಾವಚಿತ್ರದ ತಾಲೂಕು ಮಟ್ಟದ ಶೋಭಾಯಾತ್ರೆ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ಶ್ರೀರಾಮನ ಮೂರ್ತಿ ಕರ್ನಾಟಕದ ಕೊಡುಗೆಯಾಗಿದೆ. ತ್ರೇತಾಯುಗದ ಶ್ರೀರಾಮನಿಗೂ ರಾಜ್ಯಕ್ಕೂ ಸಂಬಂಧವಿದೆ. ಶ್ರೀರಾಮನ ಭಕ್ತ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ಇರುವುದು ನಮ್ಮ ರಾಜ್ಯದಲ್ಲಿ. ಸಂಡೂರಿನ ಶ್ರೀಕುಮಾರಸ್ವಾಮಿ ದೇವಸ್ಥಾನದಲ್ಲಿಯೂ ಶ್ರೀರಾಮ, ಲಕ್ಷ್ಮಣ ಹಾಗೂ ಸೀತೆಯ ಮೂರ್ತಿಗಳಿವೆ. ಶ್ರೀರಾಮ ಮತ್ತು ರಾಮಾಯಣ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಇಲ್ಲಿ ಮತಾಂತರ ಹೆಚ್ಚುತ್ತಿದ್ದು, ಅದನ್ನು ತಡೆದು, ಮತಾಂತರಗೊಂಡವರನ್ನು ಪುನಃ ಹಿಂದು ಧರ್ಮಕ್ಕೆ ಕರೆತರುವ ಕೆಲಸವಾಗಬೇಕಿದೆ ಎಂದರು.ಸುಮಾರು ೫೦೦ ವರ್ಷಗಳ ತರುವಾಯ ಶ್ರೀರಾಮನ ಜನ್ಮಸ್ಥಳದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೊಳ್ಳುತ್ತಿರುವುದು ಮಹತ್ವದ ಕಾರ್ಯಕ್ರಮವಾಗಿದೆ. ಶ್ರೀರಾಮ ಜನ್ಮಭೂಮಿಗಾಗಿ ಹೋರಾಟ ನಡೆಸಿ, ಪಾದಯಾತ್ರೆಯ ಮೂಲಕ ಜಾಗೃತಿ ಮೂಡಿಸಿದ್ದ ಎಲ್.ಕೆ. ಅಡ್ವಾಣಿ ಅವರನ್ನು ಜನವರಿಯಲ್ಲಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ಮೂರ್ತಿ ಪ್ರತಿಷ್ಠಾಪನ ಕಾರ್ಯಕ್ಕೆ ಆಹ್ವಾನಿಸದಿರುವುದು ಅವರಿಗೆ ಮಾಡುತ್ತಿರುವ ಅಪಮಾನವಾಗಿದೆ. ಈ ಕುರಿತು ಕಾರ್ಯಕ್ರಮದ ಆಯೋಜಕರು ಚಿಂತನೆ ನಡೆಸಬೇಕಿದೆ. ಭಾರತದಲ್ಲಿ ಬಹುಸಂಖ್ಯಾತರ ಧರ್ಮಕ್ಕೆ ಗೌರವ ಕೊಡುವಂತಾಗಬೇಕು ಎಂದರು. ಪರಿಸರ ಸಂರಕ್ಷಣಾ ಗತಿ ವಿಧಿ ಪ್ರಚಾರಕ ಜಯರಾಂ ಮಾತನಾಡಿ, ರಾಮಭಕ್ತಿ ರಾಷ್ಟ್ರಶಕ್ತಿಯಾಗಬೇಕಿದೆ. ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾದರೆ, ಇಲ್ಲಿನ ಹಿಂದೂ ಧರ್ಮ, ಸಂಸ್ಕೃತಿ ಉಳಿಯುವುದಾದರೂ ಹೇಗೆ? ಅದರ ರಕ್ಷಣೆ ಹೇಗೆ ಎಂದು ಪ್ರಶ್ನಿಸಿದ ಅವರು, ಪ್ರತಿ ಮನೆಯಲ್ಲಿ ಕನಿಷ್ಠ ಮೂರು ಮಕ್ಕಳಾದರೂ ಇರಬೇಕು. ಹಿಂದೂಗಳು ಒಂದಾಗಿ ಇಲ್ಲಿನ ಸನಾತನ ಪರಂಪರೆಯನ್ನು ಎತ್ತಿಹಿಡಿಯಬೇಕಿದೆ ಎಂದರು.
ಧರ್ಮ ಜಾಗರಣಾ ವಿಭಾಗ ಸಂಯೋಜಕ ಸೋಮಶೇಖರ್ ಹಿರೇಮಠ, ಸಾನ್ನಿಧ್ಯವಹಿಸಿದ್ದ ಯಶವಂತನಗರದ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದ ಗಂಗಾಧರ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶ್ರೀರಾಮನ ಭಾವಚಿತ್ರದ ಶೋಭಾಯಾತ್ರೆ ಜರುಗಿತು.ಕಾರ್ಯಕ್ರಮದಲ್ಲಿ ಅಯೋಧ್ಯೆಯಿಂದ ತಂದಿದ್ದ ಅಕ್ಷತೆ ಹಾಗೂ ಕಳಶವನ್ನು ತಾಲೂಕಿನ ೨೨ ಮಂಡಳಗಳ ಮುಖಂಡರಿಗೆ ತಲುಪಿಸಿ, ಅದನ್ನು ಜನತೆಗೆ ತಲುಪಿಸಲು ತಿಳಿಸಲಾಯಿತು.
ಮುಖಂಡರಾದ ಔದುಂಬರಭಟ್, ಕರಡಿ ಯರಿಸ್ವಾಮಿ, ಪ್ರಶಾಂತ್ ಹಿರೇಮಠ್, ವಿ.ಎಸ್. ಶಂಕರ್, ಯು. ಕಿನ್ನೂರೇಶ್ವರ, ವಿನಾಯಕ ಜೋಷಿ, ದರೋಜಿ ರಮೇಶ್, ರಾಮರಾವ್, ತಾಯಪ್ಪ ಮುಂತಾದವರು ಉಪಸ್ಥಿತರಿದ್ದರು.