25 ವರ್ಷಗಳ ನಂತರ ಕಾಂಗ್ರೆಸ್ ಜಯ । ಕೊನೆಯ ಬಾರಿ ೧೯೯೪ರಲ್ಲಿ ಗೆಲುವು ಕಂಡಿದ್ದ ಪಕ್ಷದ ದಿ.ಜಿ.ಪುಟ್ಟಸ್ವಾಮಿಗೌಡ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಜಿಲ್ಲೆಯಲ್ಲಿ ೨೫ ವರ್ಷಗಳ ನಂತರ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ.ಪಟೇಲ್ ವಿಜಯ ಸಾಧಿಸಿ ಲೋಕಸಭೆ ಪ್ರವೇಶಿಸುತ್ತಿದ್ದು, ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು ನೇತೃತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಹಾಸನ ಲೋಕಸಭಾ ಕ್ಷೇತ್ರದಲ್ಲಿ ೧೯೯೪ ರ ಚುನಾವಣೆಯಲ್ಲಿ ದಿ.ಜಿ.ಪುಟ್ಟಸ್ವಾಮಿಗೌಡ ಗೆಲವು ಸಾಧಿಸಿದ್ದರು. ೨೦೦೬ರಲ್ಲಿ ಅವರ ನಿಧನದ ನಂತರ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುತೇಕ ನೆಲಕಚ್ಚುವ ಜತೆಗೆ ನಿಷ್ಠಾವಂತ ಕಾರ್ಯಕರ್ತರಲ್ಲಿ ಮುಂದೇನು ಎಂಬ ಪ್ರಶ್ನೆ ಉತ್ತರ ದೊರೆಯದೇ, ವಿರೋಧಿಗಳ ಏಕಚಕ್ರಾಧಿಪತಿ ಆಡಳಿತದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಅನುಭವಿಸಿದ್ದರು. ಜತೆಗೆ ಸಮರ್ಥ ನಾಯಕನಿಗಾಗಿ ಕಾದು ಕುಳಿತಿದ್ದರು. ಹೊಳೆನರಸೀಪುರ ವಿಧಾನಸಭೆ ಕ್ಷೇತ್ರದಿಂದ ದಿ.ಜಿ.ಪುಟ್ಟಸ್ವಾಮಿಗೌಡರ ಸೊಸೆ ಅನುಪಮಾ ಮಹೇಶ್ ೨ ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ೨೦೧೯ರಲ್ಲಿ ಕಾಂಗ್ರೆಸ್ ಪಕ್ಷದಿಂದ ಬಾಗೂರು ಮಂಜೇಗೌಡ ಅವರು ವಿಧಾನಸಭಾ ಚುನಾವಣಾ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆಡಿಎಸ್ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡುವ ಜತೆಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಗೆಲವು ಸಾಧಿಸುತ್ತದೆ ಎಂಬ ಆತ್ಮವಿಶ್ವಾಸವನ್ನು ಹುಟ್ಟು ಹಾಕಿದ್ದರು.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆಗೆ ಉತ್ತಮ ಒಡನಾಟ ಹೊಂದಿದ್ದ ಜತೆಗೆ ಹೊಳೆನರಸೀಪುರ ವಿಧಾನಸಭೆ ಕ್ಷೇತ್ರದ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷದ ಸಕಲ ತಂತ್ರಗಾರಿಕೆಯನ್ನು ಅರಿತು ರಾಜಕಾರಣ ಮಾಡುತ್ತಿದ್ದ ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು ವೈಯಕ್ತಿಕ ಕಾರಣಗಳಿಂದ ಜೆಡಿಎಸ್ ಪಕ್ಷದಿಂದ ದೂರು ಸರಿದು ಕಾಂಗ್ರೆಸ್ ಪಕ್ಷದ ಶ್ರೇಯಸ್ ಎಂ. ಪಟೇಲ್ ಜತೆ ಕೈಜೋಡಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು ಜತೆಗಾರನಾಗಿ ಕೈ ಜೋಡಿಸಿದ ನಂತರ ಫಿನಿಕ್ಸ್ ಪಕ್ಷಿಯಂತೆ ಮೇಲೆದ್ದು, ಕ್ಷೇತ್ರದ ಗ್ರಾಮೀಣ ಪ್ರದೇಶದ ಹಳ್ಳಿ ಜನರನ್ನು ಭೇಟಿ ಮಾಡಿ ಉತ್ತಮ ಬುನಾಧಿ ಹಾಕಿಕೊಳ್ಳುತ್ತ ಶ್ರೇಯಸ್ ಸಾಗಿದರು. ಆದರೆ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಬಹಳ ಕಡಿಮೆ ಅಂತರದಿಂದ ಶ್ರೇಯಸ್ ಎಂ.ಪಟೇಲ್ ಪರಾಭವಗೊಂಡರು. ಆದರೆ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಹಾಸನ ಜಿಲ್ಲೆಯಲ್ಲಿ ನೆಲಕಚ್ಚಿರುವ ಕಾಂಗ್ರೆಸ್ ಪಕ್ಷ ಚೇತರಿಸಿಕೊಳ್ಳಲು ಶ್ರೇಯಸ್ ಎಂ.ಪಟೇಲ್ ನಾಯಕತ್ವದ ಅಗತ್ಯವಿದೆ ಎಂದು ಅರಿತು ೨೦೨೪ರ ಲೋಕಸಭಾ ಚುನಾವಣೆಯ ಟಿಕೆಟ್ ನೀಡಿದ್ದರು. ಶ್ರೇಯಸ್ ಎಂ.ಪಟೇಲ್ ಅವರ ಸರಳತನ ಹಾಗೂ ಮುಗ್ದತೆ ಜತೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೇರು ಮಟ್ಟದಲ್ಲಿ ನಡೆಸಿದ ಪ್ರಚಾರ, ತೋರಿದ ಉತ್ಸವ ಕಾಂಗ್ರೆಸ್ ಪಕ್ಷ ೨೫ ವರ್ಷಗಳ ನಂತರ ೪೩೭೩೮ ಅಂತರದ ಮತಗಳಿಂದ ವಿಜಯೋತ್ಸವ ಆಚರಿಸಲು ಸಾಧ್ಯವಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.