ಕುಟುಂಬದೊಂದಿಗೆ ಮತ ಹಾಕಿದ ಶ್ರೇಯಸ್‌

ಹೊಳೆನರಸೀಪುರ ಪಟ್ಟಣದ ಮಹಾರಾಜ ಪಾರ್ಕ್ ಹಿಂಭಾಗದ ಮತಗಟ್ಟೆ ಸಂಖ್ಯೆ ೨೭೭ರಲ್ಲಿ ತಾಯಿ ಅನುಪಮಾ ಮಹೇಶ್ ಅವರ ಆಶೀರ್ವಾದ ಪಡೆದು, ಸಹೋದರಿ ಶಾಂತಿಪ್ರಿಯ (ಡಾಲಿ), ಪತ್ನಿ ಅಕ್ಷತಾ ಜೊತೆ ಆಗಮಿಸಿ, ಶ್ರೇಯಸ್‌ ಪಟೇಲ್‌ ಮತ ಚಲಾಯಿಸಿದರು.

KannadaprabhaNewsNetwork | Published : Apr 26, 2024 7:48 PM IST

ಹೊಳೆನರಸೀಪುರ: ಜಿಲ್ಲೆಯ ಜನತೆ ಸ್ವಯಂಪ್ರೇರಣೆಯಿಂದ ಬದಲಾವಣೆ ಬಯಸಿ, ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸುವ ಇಂಗಿತವನ್ನು ಕ್ಷೇತ್ರದಲ್ಲಿ ಪ್ರವಾಸ ಮಾಡಿದಾಗ ತಿಳಿದು ಬಂದಿದ್ದು, ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ. ಪಟೇಲ್ ತಿಳಿಸಿದರು.

ಪಟ್ಟಣದ ಮಹಾರಾಜ ಪಾರ್ಕ್ ಹಿಂಭಾಗದ ಮತಗಟ್ಟೆ ಸಂಖ್ಯೆ ೨೭೭ರಲ್ಲಿ ತಾಯಿ ಅನುಪಮಾ ಮಹೇಶ್ ಅವರ ಆಶೀರ್ವಾದ ಪಡೆದು, ಸಹೋದರಿ ಶಾಂತಿಪ್ರಿಯ (ಡಾಲಿ), ಪತ್ನಿ ಅಕ್ಷತಾ ಜೊತೆ ಆಗಮಿಸಿ, ಮತ ಚಲಾಯಿಸಿದ ನಂತರ ಮಾತನಾಡಿದರು. ಕ್ಷೇತ್ರದಲ್ಲಿ ಶೇ. ೧೦೦ ರಷ್ಟು ಮತದಾನ ಆಗಬೇಕು ಎಂದು ಆಶಿಸುತ್ತೇವೆ. ಜಿಲ್ಲೆಯ ಜನತೆಯ ಆಶೀರ್ವಾದದಿಂದ ಜಯಗಳಿಸುತ್ತೇವೆ ಎಂದರು.ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ನಡುವೆ ಮಾರಾಮಾರಿ

ಹೊಳೆನರಸೀಪುರ: ತಾಲೂಕಿನ ಕೆ.ಬಿ.ಪಾಳ್ಯ ಗ್ರಾಮದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರಿಗೆ ಪೆಟ್ಟಾಗಿದೆ. ಇಬ್ಬರನ್ನೂ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕಿನ ಹಳೇಕೋಟೆ ಹೋಬಳಿಯ ಕೆ.ಬಿ.ಪಾಳ್ಯ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಸದಸ್ಯೆ ಅನುಪಮಾ ಮಹೇಶ್ ಅವರು ಮತಗಟ್ಟೆ ಸಂಖ್ಯೆ ೨೪೯ಕ್ಕೆ ಭೇಟಿ ನೀಡಿ, ತೆರಳಿದ ನಂತರ ಕ್ಷುಲಕ ಕಾರಣಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು, ಗಲಾಟೆ ಪ್ರಾರಂಭವಾದಾಗ ಜೆಡಿಎಸ್ ಕಾರ್ಯಕರ್ತರಾದ ಸಾಗರ್, ಗೌತಮ್ ಹಾಗೂ ಪ್ರದೀಪ ಎಂಬುವರು ಮೋಹನ ಕುಮಾರ್ ಎಂಬುವರ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದರು. ಪರಿಣಾಮ ತಲೆಗೆ ರಕ್ತಗಾಯವಾಗಿದ್ದು, ಗಿರೀಶ ಹಾಗೂ ಮಂಜುನಾಥ ಎಂಬುವರಿಗೆ ಪೆಟ್ಟಾಗಿದೆ. ಗಾಯಳುಗಳಿಗೆ ಪಟ್ಟಣದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹಾಸನ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Share this article