ಶ್ರೀರಾಮನಾಮ ಜಪ: ಭಕ್ತರ ಹರ್ಷೋದ್ಘಾರ

KannadaprabhaNewsNetwork | Published : Jan 23, 2024 1:45 AM

ಸಾರಾಂಶ

ಗ್ರಾಮೀಣ ಪ್ರದೇಶದ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ಭಜನೆ ಹಾಗೂ ಪ್ರಸಾದ ವಿತರಣೆ ನಡೆದವು.

ಕೆ.ಎಂ. ಮಂಜುನಾಥ್

ಬಳ್ಳಾರಿ: ಅಯೋಧ್ಯೆಯ ರಾಮಮಂದಿರದಲ್ಲಿ ಸೋಮವಾರ ಬಾಲರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆ

ನೆರವೇರುತ್ತಿದ್ದಂತೆಯೇ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ರಾಮಭಕ್ತರ ಹರ್ಷೋದ್ಘಾರ ಮುಗಿಲುಮುಟ್ಟಿತ್ತು. ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ರಾಮಮಂದಿರದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದ್ದರೆ, ಇತ್ತ ಜಿಲ್ಲೆಯಲ್ಲಿ ವಿವಿಧ ದೇವಸ್ಥಾನಗಳು, ಪೂಜಾ ಮಂದಿರಗಳಲ್ಲಿ ರಾಮಭಜನೆ, ರಾಮಘೋಷಣೆ, ಹೋಮ, ಹವನಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.

ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಶ್ರೀರಾಮೋತ್ಸವ ಕಂಡುಬಂತು. ಗ್ರಾಮೀಣ ಪ್ರದೇಶದ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ಭಜನೆ ಹಾಗೂ ಪ್ರಸಾದ ವಿತರಣೆ ನಡೆದವು.

ಪ್ರಾಣ ಪ್ರತಿಷ್ಠಾಪನೆ ನೇರ ಪ್ರಸಾರ: ನಗರದ ಕನಕ ದುರ್ಗಮ್ಮ, ಕೋಟೆ ಮಲ್ಲೇಶ್ವರ ಸ್ವಾಮಿ, ಕುಮಾರಸ್ವಾಮಿ ದೇವಸ್ಥಾನ ಸೇರಿದಂತೆ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಪ್ರಮುಖ ದೇವಾಲಯಗಳಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು.

ರಾಮನಾಮ ಜಪ, ಶ್ರೀರಾಮಪಾರಾಯಣ, ಗೋಪೂಜೆ, ಹೋಮ- ಹವನ, ದೀಪೋತ್ಸವ ನಡೆದವು. ನಗರದ ಶ್ರೀರಾಮಾಂಜನೇಯ ಹಾಗೂ ಶ್ರೀರಾಮ ದೇವಸ್ಥಾನಗಳಲ್ಲಿ ಹೆಚ್ಚಿನ ಭಕ್ತಸ್ತೋಮ ಕಂಡುಬಂತು. ಶ್ರೀರಾಮಾಂಜನೇಯ ಹಾಗೂ ಶ್ರೀರಾಮದೇವಸ್ಥಾನಗಳಲ್ಲಿ ವಿವಿಧ ವಿದ್ಯುತ್ ದೀಪಗಳು ಹಾಗೂ ಹೂವುಗಳಿಂದ ಅಲಂಕೃತಗೊಳಿಸಲಾಗಿತ್ತು. ಭಕ್ತರಿಗೆ ಪಾನಕ ಹಾಗೂ ಅನ್ನಸಂತರ್ಪಣೆ ನಡೆಯಿತು. ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ನಗರದ ವಿವಿಧೆಡೆ ಎಲ್‌ಇಡಿ ಪರದೆ ಹಾಕಲಾಗಿತ್ತು.

ಇಲ್ಲಿನ ಮೇದಾರ ಓಣಿಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ನಡೆಸಲಾಯಿತು. ರಾಘವೇಂದ್ರ ಕಾಲನಿಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಶ್ರೀರಾಮನಾಮ ಜಪ ಹಾಗೂ ಶ್ರೀರಾಮನ ವಿಗ್ರಹಕ್ಕೆ ಅಭಿಷೇಕ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಗವಿಯಪ್ಪ ವೃತ್ತದಲ್ಲಿನ ಶ್ರೀರಾಮ ದೇವಾಲಯ ಭಕ್ತರಿಂದ ತುಂಬಿಕೊಂಡಿತ್ತು. ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ಶ್ರೀರಾಮ ಘೋಷ ಮೊಳಗಿಸಿದರು.

ಜೈನ್ ಮಾರುಕಟ್ಟೆ, ವಿದ್ಯಾನಗರ, ರೇಡಿಯೋ ಪಾರ್ಕ್‌ನ ಗಣೇಶ ದೇವಾಲಯ ಬಳಿ ಶ್ರೀರಾಮ ಭಜನೆ ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಣೆ ನಡೆಯಿತು. ತಾಳೂರು ರಸ್ತೆಯಲ್ಲಿ ಬಿಜೆಪಿ ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್ ಅವರಿಂದ ಅನ್ನದಾನ ಹಾಗೂ ಪಾನಕ ವಿತರಣೆಯಿತ್ತು. ರಾಯಲ್ ಕಾಲನಿಯ ಕೃಷ್ಣಮಂದಿರ, ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದಲ್ಲಿ ಮಹಿಳೆಯರಿಂದ ಭಜನೆ ಹಾಗೂ ಶ್ರೀರಾಮನಾಮ ಜಪ ಜರುಗಿತು. ನಗರದ 19ನೇ ವಾರ್ಡ್‌ ನಲ್ಲಿ ಮಹಿಳೆಯರಿಗೆ ಚುಕ್ಕಿ ರಂಗೋಲಿ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

ಯುವಕರ ಬೈಕ್ ರ್ಯಾಲಿ: ಇಡೀ ನಗರ ಕೇಸರಿಮಯವಾಗಿತ್ತು. ನಗರದ ರಸ್ತೆಗಳು ಹಾಗೂ ಪ್ರಮುಖ ವೃತ್ತಗಳಲ್ಲಿ ಕೇಸರಿ ಬಾವುಟ ಹಾಗೂ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಹಿಂದೂಪರ ಸಂಘಟನೆಗಳು ರಾಮಪ್ರತಿಷ್ಠಾಪನೆಗೆ ಶುಭಕೋರುವ ಫೆಕ್ಸ್‌ಗಳನ್ನು ನಗರದ ನಾನಾ ಕಡೆ ಅಳವಡಿಸಿದ್ದರು. ನಗರದಲ್ಲಿ ನೂರಾರು ಯುವಕರು ಬೈಕ್ ರ್ಯಾಲಿ ನಡೆಸಿದರು. ಶ್ರೀರಾಮ ನಾಮಹೊತ್ತ ಕೇಸರಿ ಧ್ವಜಗಳನ್ನು ಹಿಡಿದಿದ್ದ ಯುವಕರು ಜಯಘೋಷಣೆಗಳ ಮೂಲಕ ನಗರದ ನಾನಾ ಬೀದಿಗಳಲ್ಲಿ ರ್ಯಾಲಿ ಮಾಡಿದರು. ನಗರದ ರಾಯಲ್ ವೃತ್ತದ ಬಳಿ ಬೈಕ್ ರ್ಯಾಲಿ ಹೊರಟ ಯುವಕರನ್ನು ಪೊಲೀಸರು ತಡೆದು, ಅನುಮತಿ ಇಲ್ಲದೆ ರ್ಯಾಲಿ ಮಾಡುವಂತಿಲ್ಲ ಎಂದು ಸೂಚನೆ ನೀಡುತ್ತಿರುವ ದೃಶ್ಯ ಕಂಡುಬಂತು. ಪೊಲೀಸರ ಕಿರಿಕಿರಿ ನಡುವೆ ನೂರಾರು ಯುವಕರು ನಗರದಲ್ಲಿ ಬೈಕ್ ರ್ಯಾಲಿ ನಡೆಸಿ, ಜೈ ಶ್ರೀರಾಮ ಘೋಷಣೆಗಳನ್ನು ಕೂಗಿದರು.ಬಿಕೋ ಎಂದ ರಸ್ತೆಗಳು: ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ವೀಕ್ಷಿಸಲು ನಗರದ ಜನರು ಟಿವಿ ಹಾಗೂ ಮೊಬೈಲ್‌ಗಳ ಮೊರೆ ಹೋಗಿದ್ದರು. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರು ಹೊರಗಡೆ ಕಂಡುಬರಲಿಲ್ಲ. ಹೀಗಾಗಿ ನಗರದ ಪ್ರಮುಖ ರಸ್ತೆಗಳು ಬಿಕೋ ಎಂದವು. ನಗರದ ವಾಣಿಜ್ಯ ಕೇಂದ್ರಗಳಲ್ಲಿ ಗ್ರಾಹಕರಿಲ್ಲದ ಭಣಗುಟ್ಟುತ್ತಿದ್ದವು.

ಆಟೋ ಚಾಲಕರು ಹಾಗೂ ಸರ್ಕಾರ ಕಚೇರಿಗಳಲ್ಲಿನ ಸಿಬ್ಬಂದಿ ಮೊಬೈಲ್‌ನಲ್ಲಿಯೇ ನೇರ ಪ್ರಸಾರ ವೀಕ್ಷಿಸಿದರು.

Share this article