ಕ್ರಿಸ್ಮಸ್ ರಜೆ ರದ್ದುಗೊಳಿಸಲು ಶ್ರೀರಾಮಸೇನೆ ಆಗ್ರಹ

KannadaprabhaNewsNetwork | Published : Oct 8, 2024 1:19 AM

ಸಾರಾಂಶ

ಹಾಸನ: ಹಿಂದೂಗಳ ಪವಿತ್ರ ದಸರಾ ಹಬ್ಬದ ವೇಳೆ ರಜೆ ನೀಡದೆ ತರಗತಿ, ಪರೀಕ್ಷೆ ನಡೆಸುತ್ತಿರುವ ಶಾಲೆಗಳಿಗೆ ಬೀಗ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ, ಕ್ರಿಸ್ಮಸ್‌ನಲ್ಲಿ ರಜೆ ನೀಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ, ಶ್ರೀರಾಮಸೇನಾ ಕರ್ನಾಟಕ ಜಿಲ್ಲಾ ಘಟಕದಿಂದ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಹಾಸನ: ಹಿಂದೂಗಳ ಪವಿತ್ರ ದಸರಾ ಹಬ್ಬದ ವೇಳೆ ರಜೆ ನೀಡದೆ ತರಗತಿ, ಪರೀಕ್ಷೆ ನಡೆಸುತ್ತಿರುವ ಶಾಲೆಗಳಿಗೆ ಬೀಗ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ, ಕ್ರಿಸ್ಮಸ್‌ನಲ್ಲಿ ರಜೆ ನೀಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ, ಶ್ರೀರಾಮಸೇನಾ ಕರ್ನಾಟಕ ಜಿಲ್ಲಾ ಘಟಕದಿಂದ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಶ್ರೀರಾಮಸೇನಾ ಜಿಲ್ಲಾ ಘಟಕದ ಅಧ್ಯಕ್ಷ ಹೇಮಂತ್ ಜಾನೆಕೆರೆ ಮಾಧ್ಯಮದೊಂದಿಗೆ ಮಾತನಾಡಿ, ಹಲವಾರು ವರ್ಷಗಳಿಂದ ಇಡೀ ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳು ದಸರಾ ನಿಮಿತ್ತ ರಜೆ ನೀಡುವುದು ಪರಂಪರೆಯಿಂದ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿಗೆ ಕೆಲವು ಶಾಲೆಗಳು ದಸರಾ ರಜೆ ಕೊಡದೇ ಕ್ರಿಸ್ಮಸ್ ರಜೆ ಕೊಡುತ್ತಿರುವುದು ಉದ್ದೇಶಪೂರ್ವಕವಾಗಿ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸದಂತೆ ತಡೆಯೋಕೆ ಮಾಡಿದ ಷಡ್ಯಂತ್ರ ಅನ್ನುವ ಅಭಿಪ್ರಾಯ ಇಡೀ ಹಿಂದೂ ಸಮಾಜ ಹಾಗೂ ಪಾಲಕರು, ಪೋಷಕರು ಹಾಗೂ ಮಕ್ಕಳಲ್ಲಿ ಬಲವಾಗಿ ಮೂಡುತ್ತಿದೆ. ಸಾಕಷ್ಟು ಪೋಷಕರು ಇದರ ಬಗ್ಗೆ ನಮ್ಮ ಸಂಘಟನೆಗೆ ಅಳಲು ತೋಡಿಕೊಂಡಿದ್ದಾರೆ ಎಂದರು.

ಮೇಲ್ನೋಟಕ್ಕೆ ಇದು ಸತ್ಯ ಸಹ ಅನ್ನಿಸುತ್ತಿದೆ. ಇಂತಹ ಧರ್ಮ ವಿರೋಧಿ ನೀತಿ ಪ್ರಜಾಪ್ರಭುತ್ವ, ಸಂವಿಧಾನದತ್ತ ಅಧಿಕಾರದ ಹನನವಾಗಿದೆ. ಮಕ್ಕಳು ಸ್ವಚ್ಛಂದವಾಗಿ ಹಬ್ಬದ ಧಾರ್ಮಿಕ, ಆಧ್ಯಾತ್ಮಿಕ, ಕೌಟುಂಬಿಕ, ಸಾಂಸ್ಕೃತಿಕ ಮೌಲ್ಯ, ಸಂತಸ ಅನುಭವಿಸಲು ಅವಕಾಶ ನೀಡುತ್ತಿಲ್ಲ. ಹೀಗಾಗಿ ತಕ್ಷಣವೇ ಎಲ್ಲ ಶಾಲೆಗಳಿಗೆ ಕಟ್ಟುನಿಟ್ಟಿನ ರಜೆ ಘೋಷಣೆ ಮಾಡಬೇಕು. ಯಾರಾದ್ರೂ ಉಲ್ಲಂಘಿಸಿದ್ರೆ ಮುಲಾಜಿಲ್ಲದೆ ಶಾಲೆಯ ಅನುಮತಿ ರದ್ದು ಮಾಡಬೇಕು ಎಂದು ಆಗ್ರಹಿಸುತ್ತೇವೆ. ಜೊತೆಗೆ ಕ್ರಿಸ್ಮಸ್ ರಜೆ ಎಲ್ಲ ಶಾಲೆಗಳಿಗೆ ಕೊಡುವ ಉದ್ದೇಶ ಏನು? ಕ್ರಿಶ್ಚಿಯನ್ ಶಾಲೆಯಲ್ಲಿ ೯೫% ಹಿಂದೂ ಮಕ್ಕಳು ಓದುತ್ತಿದ್ದು, ಯಾಕೆ ೧೦ ದಿವಸ ರಜೆ ನೀಡುವುದು? ಇದು ನಿಜಕ್ಕೂ ಧರ್ಮದ ವಿಷಯದಲ್ಲಿ ದೊಡ್ಡ ಘೋರ ಪಿತೂರಿ ನಡೆಯುತ್ತಿದ್ದು, ತಕ್ಷಣವೇ ದಸರಾ ರಜೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಹಾಗೂ ಕ್ರಿಸ್ಮಸ್ ರಜೆ ರದ್ದುಗೊಳಿಸಲು ಈ ಮೂಲಕ ಆಗ್ರಹಿಸುತ್ತೇವೆ. ಇಲ್ಲದಿದ್ರೆ ಯಾವ ಶಾಲೆಗಳು ಪ್ರಾರಂಭ ಇರುತ್ತವೆಯೋ ಅವುಗಳಿಗೆ ಬೀಗ ಜಡಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತೇವೆ ಎಂದು ಹೇಳಿದರು.

ಇದೇ ವೆಳೆ ಶ್ರೀರಾಮ ಸೇನಾದ ಗೌರವಾಧ್ಯಕ್ಷ ಎಡೆಯೂರು ಕುಮಾರ್‌, ತಾಲೂಕು ಅಧ್ಯಕ್ಷ ಪ್ರದೀಪ್, ಜಿಲ್ಲಾ ಕಾರ್ಯದರ್ಶಿ ಧರ್ಮ, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article