ಬಡ ಕುಟುಂಬಗಳ ಆರ್ಥಿಕ ಚೇತರಿಕೆಗೆ ಸ್ತ್ರೀ ಶಕ್ತಿ ಸಂಘಗಳು ಸಹಕಾರಿ

KannadaprabhaNewsNetwork | Published : Sep 30, 2024 1:27 AM

ಸಾರಾಂಶ

ನಗರದ ತುಳಸಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ಡಾ.ಡಿ. ಧರಣೇಂದ್ರಯ್ಯ ಉದ್ಘಾಟನೆ ಮಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಬಡ ಕುಟುಂಬಗಳು ಸ್ತ್ರೀ ಶಕ್ತಿ ಸಂಘಗಳ ಸಾಲ ಸೌಲಭ್ಯದಿಂದಾಗಿ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವಾಣಿ ಕಾಲೇಜಿನ ಪ್ರಾಧ್ಯಾಪಕ ಡಾ.ಡಿ.ಧರಣೇಂದ್ರಯ್ಯ ಅಭಿಪ್ರಾಯಪಟ್ಟರು.

ನಗರದ ತುಳಸಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕಾಗಿ ಧರ್ಮಸ್ಥಳ ಸ್ವ ಸಹಾಯ ಸಂಘಗಳು ಬೆನ್ನೆಲುಬಾಗಿ ನಿಂತಿವೆ. ಸ್ತ್ರೀ ಶಕ್ತಿ ಸಂಘಗಳ ಮುಖಾಂತರ ಸಾಲ ಸೌಲಭ್ಯ ಪಡೆದ ಕುಟುಂಬಗಳು ಆರ್ಥಿಕವಾಗಿ ಸಬಲರಾಗುತ್ತಿವೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಲವಾರು ಜನಪರ ಯೋಜನೆಗಳನ್ನು ರೂಪಿಸುತ್ತಿದ್ದು ಸ್ತ್ರೀ ಸಬಲೀಕರಣ, ಸ್ವ ಉದ್ಯೋಗ, ಹೊಲಿಗೆ ತರಬೇತಿ, ವಿದ್ಯಾರ್ಥಿ ವೇತನ ಯೋಜನೆ, ಮಧ್ಯವರ್ಜನಾ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಪೌಷ್ಟಿಕ ಆಹಾರ ಮತ್ತು ಸಿರಿಧಾನ್ಯ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಭಾಗದ ಆಶಕ್ತ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಜೀವನಾಡಿಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಆರಂಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯು ಸಣ್ಣ ಸಣ್ಣ ಉಳಿತಾಯ ಮಾಡುವ ಮೂಲಕ 33 ಸಾವಿರ ಕೋಟಿಯಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ಹಲವಾರು ಜನಪರ ಯೋಜನೆಗಳಿಗೆ ಸಾಕ್ಷಿಯಾಗಿ ನಿಂತಿರುವುದು ಅಭಿನಂದನಾರ್ಹ ಎoದರು.

ಪತ್ರಕರ್ತ ಆಲೂರು ಹನುಮಂತರಾಯಪ್ಪ ಮಾತನಾಡಿ, ಗ್ರಾಮೀಣ ಕುಟುಂಬಗಳಿಗೆ ಧರ್ಮಸ್ಥಳ ಸ್ವಸಹಾಯ ಸಂಘಗಳಿಂದ ನೀಡಲಾಗುವ ಸಾಲ ಸೌಲಭ್ಯಗಳು ವರದಾನವಾಗಿದ್ದು, ಸದಸ್ಯರ ಆರ್ಥಿಕ ಸಬಲತೆಗೆ ಮುಖ್ಯ ಕಾರಣವಾಗಿವೆ. ಆಡು ಮುಟ್ಟದ ಸೊಪ್ಪಿಲ್ಲ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡದೆ ಇರುವಂತಹ ಕಾರ್ಯವಿಲ್ಲ ಎಂಬಂತೆ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢವಾಗುವ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದೆ ಎಂದು ಹೇಳಿದರು.

ಈ ವೇಳೆ ಬ್ಯಾಂಕ್ ಆಫ್ ಬರೋಡ ಶಾಖೆಯ ಸಹಾಯಕ ಪ್ರಬಂಧಕ ವಿಶ್ವನಾಥ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಕಚೇರಿ ನಿರ್ದೇಶಕ ವಿನಯ್ ಕುಮಾರ್, ಯೋಜನಾಧಿಕಾರಿಗಳಾದ ಅನಿಲ್, ಹರಿಪ್ರಸಾದ್ ರೈ ಹಾಗೂ ಸ್ವ ಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Share this article