ನಗೆಗಡಲಲ್ಲಿ ತೇಲಿಸಿದ ಶ್ರೀಕೃಷ್ಣ ಸಂಧಾನ ನಾಟಕ

KannadaprabhaNewsNetwork | Published : Jul 22, 2024 1:16 AM

ಸಾರಾಂಶ

ಸಿರುಗುಪ್ಪ ತಾಲೂಕಿನ ಶಿರಿಗೇರಿಯ ಧಾತ್ರಿ ರಂಗ ಸಂಸ್ಥೆಯ ‘ಶ್ರೀ ಕೃಷ್ಣ ಸಂಧಾನ’ ಹಾಸ್ಯ ನಾಟಕ ಪ್ರೇಕ್ಷಕರ ನಗುವಿನ ಕಡಲಲ್ಲಿ ತೇಲಿಸಿತು.

ಬಳ್ಳಾರಿ: ಜಿಲ್ಲೆಯ ಸ್ಥಳೀಯ ಮಟ್ಟದ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲ್ಲಿನ ಸಾಂಸ್ಕೃತಿಕ ಸಮುಚ್ಚಯದ ಡಾ. ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ "ತಿಂಗಳ ಸೊಬಗು " ಕಾರ್ಯಕ್ರಮ ಕಲಾಪ್ರೇಕ್ಷಕರನ್ನು ಹಿಡಿದುಕೊಟ್ಟುವಲ್ಲಿ ಯಶಸ್ವಿಯಾಯಿತು.

ಖ್ಯಾತ ಜಾದೂ ಕಲಾವಿದ ಪ್ರಕಾಶ್ ಹೆಮ್ಮಾಡಿ ತಮ್ಮ ಕೈಚಳಕದ ಮೂಲಕ ಗಮನ ಸೆಳೆದರೆ, ಸಿರುಗುಪ್ಪ ತಾಲೂಕಿನ ಶಿರಿಗೇರಿಯ ಧಾತ್ರಿ ರಂಗ ಸಂಸ್ಥೆಯ ‘ಶ್ರೀ ಕೃಷ್ಣ ಸಂಧಾನ’ ಹಾಸ್ಯ ನಾಟಕ ಪ್ರೇಕ್ಷಕರ ನಗುವಿನ ಕಡಲಲ್ಲಿ ತೇಲಿಸಿತು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಜಿಲ್ಲೆಯ ಸ್ಥಳೀಯ ಮಟ್ಟದ ಕಲಾ ಪ್ರತಿಭೆಗಳನ್ನು ಗುರುತಿಸಿ, ಅವರ ಸಾಧನೆಯ ಬೆಳವಣಿಗೆ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಮೂರನೆಯ ಶನಿವಾರ ‘ತಿಂಗಳ ಸೊಬಗು’ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸ್ಥಳೀಯ ಕಲಾವಿದರು ಈ ವೇದಿಕೆಯನ್ನು ಬಳಸಿಕೊಂಡು ಮುಂದಿನ ಹಂತದ ಕಲಾ ಪ್ರಗತಿ ಕಂಡುಕೊಳ್ಳಬೇಕು ಎಂದರು.

ಶಿರಿಗೇರಿಯ ಧಾತ್ರಿ ರಂಗ ಸಂಸ್ಥೆಯ ‘ಶ್ರೀ ಕೃಷ್ಣ ಸಂಧಾನ’ ಹಾಸ್ಯ ನಾಟಕ ಈಗಾಗಲೇ ಸಾಕಷ್ಟು ಪ್ರದರ್ಶನಗಳನ್ನು ಕಂಡಿದ್ದು, ಪ್ರೇಕ್ಷಕ ವರ್ಗದಿಂದ ಸೈ ಎನಿಸಿಕೊಂಡಿದೆ. ತಂಡದ ಕಲಾವಿದರು ಪ್ರತಿಭಾನ್ವಿತರಿದ್ದು, ಸಂಸ್ಥೆಯ ಮುಖ್ಯಸ್ಥ ಮಂಜುನಾಥ ಅವರು ತಂಡ ಮುನ್ನಡೆಸುತ್ತಿದ್ದಾರೆ ಎಂದರು.

ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್. ಜುಬೇರ್, ಅಬಕಾರಿ ಇಲಾಖೆಯ ಉಪ ಆಯುಕ್ತ ಮಂಜುನಾಥ ಹಾಗೂ ನಗರದ ಗಣ್ಯರು, ನೂರಾರು ಪ್ರೇಕ್ಷಕರು ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ಬಳ್ಳಾರಿಯ ಸಾಂಸ್ಕೃತಿಕ ಸಮುಚ್ಚಯದ ಬಯಲು ರಂಗಮಂದಿರದಲ್ಲಿ ಜರುಗಿದ ತಿಂಗಳ ಸೊಬಗು ಕಾರ್ಯಕ್ರಮದಲ್ಲಿ ಶಿರಿಗೇರಿಯ ಧಾತ್ರಿ ರಂಗ ಸಂಸ್ಥೆಯ ಕಲಾವಿದರು ‘ಶ್ರೀ ಕೃಷ್ಣ ಸಂಧಾನ’ ಹಾಸ್ಯ ನಾಟಕ ಪ್ರದರ್ಶನ ನೀಡಿದರು.

ಬಳ್ಳಾರಿಯ ಸಾಂಸ್ಕೃತಿಕ ಸಮುಚ್ಚಯದ ಬಯಲು ರಂಗಮಂದಿರದಲ್ಲಿ ಜರುಗಿದ ತಿಂಗಳ ಸೊಬಗು ಕಾರ್ಯಕ್ರಮದಲ್ಲಿ ಪ್ರಕಾಶ್ ಹೆಮ್ಮಾಡಿ ಜಾದೂ ಪ್ರದರ್ಶನ ನೀಡಿದರು.

Share this article