ಮುಂದಿನ ಪೀಳಿಗೆಗೆ ಯಕ್ಷಗಾನ ಅವಕಾಶ: ಎಡನೀರುಶ್ರೀ ಶ್ಲಾಘನೆ

KannadaprabhaNewsNetwork |  
Published : Jul 22, 2024, 01:15 AM ISTUpdated : Jul 22, 2024, 01:16 AM IST
ಶಕಂತುಲಾ ಭಟ್‌ ಕುಂಚಿನಡ್ಕಗೆ ಗಡಿನಾಡ ಸಿರಿಬಾಗಿಲು ವೆಂಕಪ್ಪಯ್ಯ ಪ್ರಶಸ್ತಿ ಪ್ರದಾನ  | Kannada Prabha

ಸಾರಾಂಶ

ಕನ್ನಡ ಅಭಿಮಾನಿಗಳಾದ ಮಂಡ್ಯ ಹಾಗೂ ಬೆಂಗಳೂರಿನ ಸುಲ್ತಾನ್ ಗೌಡ ಮತ್ತು ಷಣ್ಮುಖಂ ಅವರು ಪ್ರತಿಷ್ಠಾನದ ಚಟುವಟಿಕೆಗಳನ್ನು ಗಮನಿಸಿ ಅಧ್ಯಕ್ಷ ರಾಮಕೃಷ್ಣಯ್ಯ ಅವರನ್ನು ಗೌರವಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಗಡಿನಾಡು ಕಾಸರಗೋಡಿನ ಸಿರಿಬಾಗಿಲಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ನಾಲ್ಕು ದಿನಗಳ ಸಾಂಸ್ಕೃತಿಕ ಉತ್ಸವ ಶನಿವಾರ ಸಂಪನ್ನಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಮತ್ತು ಉಪ್ಪಳ ಕೊಂಡೆಯೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

ಸಿರಿಬಾಗಿಲು ಯಕ್ಷವೈಭವದಲ್ಲಿ 25 ತಂಡಗಳಿಂದ ನಡೆದು ಕಾಸರಗೋಡಿನ ಚರಿತ್ರೆಯಲ್ಲಿ ಪ್ರಥಮ. ಈ ಹಿಂದೆ ಹಲವು ಕಡೆಗಳಲ್ಲಿ ಸೀಮಿತ ತಂಡಗಳ ಯಕ್ಷಗಾನ ಸ್ಪರ್ಧೆ ನಡೆದಿದೆ. ಆದರೆ ಇದು ಸ್ಪರ್ಧೆಯಲ್ಲ, ಅಲ್ಲದೆ ಹವ್ಯಾಸಿ ವಲಯದ ಕಲಾವಿದರು, ಯಕ್ಷಗಾನ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸಿದ ಪ್ರತಿಷ್ಠಾನದ ಯೋಜನೆ ನಿಜವಾಗಿ ಮೆಚ್ಚುವಂಥದ್ದು. ಈ ಪ್ರತಿಷ್ಠಾನ ಇನ್ನೂ ಮುಂದೆ ಇಂತಹ ಚಟುವಟಿಕೆ ನಡೆಸಿ ಲೋಕ ಪ್ರಸಿದ್ಧಿ ಪಡೆಯಲಿ, ಯಕ್ಷಗಾನ ಬೆಳೆಯಲಿ. ಮುಂದಿನ ಪೀಳಿಗೆಗೆ ಹಸ್ತಾಂತರವಾಗಲಿ ಎಂದು ಎಡನೀರು ಶ್ರೀಗಳು ಆಶೀರ್ವದಿಸಿದರು.

ಹಂಗಾರಕಟ್ಟೆ ಯಕ್ಷಗಾನ ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಮಾತನಾಡಿ, ಗ್ರಾಮೀಣ ಪ್ರದೇಶವಾದ ಸಿರಿಬಾಗಿಲಿನಲ್ಲಿ ಇಂತಹ ಯೋಜನೆ ಕಲ್ಪಿಸಿದ ಪ್ರತಿಷ್ಠಾನವನ್ನು ಶ್ಲಾಘಿಸಿದರು.

ಇದೇ ಸಂದರ್ಭ ಪ್ರತಿಷ್ಠಾನದ ಸದಸ್ಯತ್ವ ನೋಂದಾವಣೆಯ ಅಭಿಯಾನದ ದ್ವಿತೀಯ ಮಹಾಪೋಷಕರು ಸದಸ್ಯತ್ವವನ್ನು ಬೆಂಗಳೂರಿನ ಟಿ. ಎಂ. ಸತೀಶ್ ಅವರಿಗೆ ನೀಡಿ ಗೌರವಿಸಲಾಯಿತು.

ಮಾಂಡೋವಿ ಮೋಟಾರ್ಸ್‌ ಮೆನೇಜರ್‌ ಶಶಿಧರ ಕಾರಂತ, ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡು ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತೋಡಿ, ಕರ್ಣಾಟಕ ಬ್ಯಾಂಕಿನ ಸುಜಿತ್, ಶೀನ ಶೆಟ್ಟಿ ಕಜೆ, ಸಿರಿಬಾಗಿಲು ವೆಂಕಪ್ಪಯ್ಯನವರ ಹಿರಿಯ ಪುತ್ರಿ ಮಂಗಳ ಗೌರಿ ಕುದ್ರೆಪ್ಪಾಡಿ ಇದ್ದರು.

ಈ ಸಂದರ್ಭ ಗಡಿನಾಡ ಸಂಗೀತ ವಿದುಷಿ ಶಕುಂತಲಾ ಕೆ. ಭಟ್ ಕುಂಚಿನಡ್ಕ ಇವರಿಗೆ ‘ಸಿರಿಬಾಗಿಲು ವೆಂಕಪ್ಪಯ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಪ್ರತಿಷ್ಠಾನಕ್ಕೆ ಹಲವು ವಿಧದಲ್ಲಿ ಸಹಕರಿಸಿದ ಎಂಜಿನಿಯರ್‌ ಶಿವಶಂಕರ ಜಿ.ಎನ್, ರಾಘವೇಂದ್ರ ಉಡುಪ, ಡಾ.ಸತ್ಯನಾರಾಯಣ, ಶ್ರುತಕೀರ್ತಿರಾಜ್ ಗೌರವಿಸಲಾಯಿತು.

ಕನ್ನಡ ಅಭಿಮಾನಿಗಳಾದ ಮಂಡ್ಯ ಹಾಗೂ ಬೆಂಗಳೂರಿನ ಸುಲ್ತಾನ್ ಗೌಡ ಮತ್ತು ಷಣ್ಮುಖಂ ಅವರು ಪ್ರತಿಷ್ಠಾನದ ಚಟುವಟಿಕೆಗಳನ್ನು ಗಮನಿಸಿ ಅಧ್ಯಕ್ಷ ರಾಮಕೃಷ್ಣಯ್ಯ ಅವರನ್ನು ಗೌರವಿಸಿದರು.

ಅದಕ್ಕೂ ಮೊದಲು ಪ್ರತಿಷ್ಠಾನ ಪ್ರಕಾಶಿಸಿದ ಏಳು ಕೃತಿಗಳ ಬಗ್ಗೆ ವಿಚಾರ ಸಂಕಿರಣ ನಡೆಯಿತು. ವಿಚಾರ ಸಂಕಿರಣದಲ್ಲಿ ರಾಧಾಕೃಷ್ಣ ಕಲ್ಚಾರ್ ವಿಟ್ಲ, ಡಾ. ನಾಗವೇಣಿ ಮಂಚಿ,, ಉದಯವಾಣಿ ಪತ್ರಿಕೆಯ ಲಕ್ಷ್ಮೀ ಮಚ್ಚಿನ. ರಾಘವೇಂದ್ರ ಉಡುಪ ನೇರಳೆಕಟ್ಟೆ,,ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಮುಂತಾದವರು ಭಾಗವಹಿಸಿದರು.ಹವ್ಯಾಸಿ ತಂಡಗಳಲ್ಲಿ 22 ತೆಂಕುತಿಟ್ಟಿನ ತಂಡಗಳು ಹಾಗೂ ಪ್ರಥಮವಾಗಿ ಮೂರು ಬಡಗುಟ್ಟಿನ ತಂಡಗಳು ಭಾಗವಹಿಸಿರುತ್ತದೆ. ಪಾರ್ತಿಸುಬ್ಬನ ಜನ್ಮನಾಡಾದ ಕಾಸರಗೋಡು ಭಾಗದಲ್ಲಿ ಬಡಗು ತಿಟ್ಟಿನ ಪ್ರದರ್ಶನಗಳು ಅತಿ ವಿರಳ. ಉತ್ತಮ ಪ್ರದರ್ಶನ ನೀಡಿ ತಂಡಗಳು ಜನ ಮೆಚ್ಚುಗೆಗೆ ಪಾತ್ರರಾದವು. ಹೆಚ್ಚಿನ ಎಲ್ಲಾ ತಂಡಗಳು ವೃತ್ತಿ ಮೇಳಕ್ಕೆ ತಾವು ಸರಿ ಸಮಾನವೆಂದು ಮೆರೆದರು. ಡಾ. ಶ್ರುತ ಕೀರ್ತಿರಾಜ್ ಉಜಿರೆ ನಿರೂಪಿಸಿದರು ಹಾಗೂ ಪ್ರಸನ್ನ ಕಾರಂತ ದೇಶಮಂಗಲ ಧನ್ಯವಾದವಿತ್ತರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ