ಶೂದ್ರರಿಗೆ ಮೊದಲು ಶಿಕ್ಷಣದ ಹಕ್ಕಿರಲಿಲ್ಲ: ಮೋಹನ್ ರಾಜ್

KannadaprabhaNewsNetwork |  
Published : Sep 03, 2025, 01:02 AM IST
9ಎಚ್‌ಪಿಟಿ2- ಹೊಸಪೇಟೆಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪಾಲ್ಗೊಳ್ಳಲು ಆಗಮಿಸಿದ್ದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಡಾ.ಆರ್. ಮೋಹನ್ ರಾಜ್ ಅವರನ್ನು ಬರಮಾಡಿಕೊಳ್ಳಲಾಯಿತು. | Kannada Prabha

ಸಾರಾಂಶ

ಭಾರತದಲ್ಲಿ ಮೊದಲು ಶಿಕ್ಷಣ ಕೇವಲ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ಮೀಸಲಿತ್ತು. ಆ ಕಾಲಘಟ್ಟದಲ್ಲಿ ಶೂದ್ರರಿಗೆ ಶಿಕ್ಷಣದ ಹಕ್ಕು ಇರಲಿಲ್ಲ.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಭಾರತದಲ್ಲಿ ಮೊದಲು ಶಿಕ್ಷಣ ಕೇವಲ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ಮೀಸಲಿತ್ತು. ಆ ಕಾಲಘಟ್ಟದಲ್ಲಿ ಶೂದ್ರರಿಗೆ ಶಿಕ್ಷಣದ ಹಕ್ಕು ಇರಲಿಲ್ಲ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಡಾ.ಆರ್. ಮೋಹನ್ ರಾಜ್ ಹೇಳಿದರು.

ಇಲ್ಲಿನ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಮಾತನಾಡಿದ ಅವರು, ಮೊದಲು ಬ್ರಿಟಿಷ್ ಸರ್ಕಾರ ಮ್ಯಾಕ್ ಡೊನಾಲ್ಡೋ ಇವರ ನೇತೃತ್ವದಲ್ಲಿ 1813ರಲ್ಲಿ ಚಾರ್ಟೆಡ್ ಆಕ್ಟ್ ಪಾಸ್ ಮಾಡಿ ಲಂಡನ್‌ನಿಂದ ಮಿಷನರಿಗಳು ಭಾರತಕ್ಕೆ ಬಂದು ಶೂದ್ರರಿಗೆ ಶಿಕ್ಷಣವನ್ನು ಕೊಡಲು ಆರಂಭಿಸಿದವು. ನಂತರ ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿರುವ ಪಶು, ಪ್ರಾಣಿಗಳಂತೆ ಬದುಕುತ್ತಿರುವ ಶೂದ್ರರಿಗೆ ವಿದ್ಯೆ ಕೊಡುವುದರ ಮೂಲಕ ಇವರನ್ನು ಸಮಾನತೆ ಪಡೆಯುವಂತೆ ಮಾಡಬೇಕೆಂಬ ಅಚಲ ಮನಸ್ಸಿನಿಂದ ಸಮ ಸಮಾಜವನ್ನು ನಿರ್ಮಾಣ ಮಾಡುವ ದಿಟ್ಟ ಛಲದಿಂದ 1848 ಜನವರಿ ಒಂದರಂದು ಭಾರತದಲ್ಲಿ ಪ್ರಪ್ರಥಮವಾಗಿ ಶೂದ್ರಾತಿ ಶೂದ್ರರ ಮಕ್ಕಳಿಗಾಗಿ ಪಾಠಶಾಲೆಯನ್ನು ತೆರೆದು ಢಣ ಢಣ ಗಂಟೆ ಬಾರಿಸಿ ಅಂಧಕಾರದಲ್ಲಿ ಮುಳುಗಿದ್ದ ಶೂದ್ರರನ್ನು ಬೆಳಕಿನ ಕಡೆಗೆ ತಂದಿದ್ದು ಕ್ರಾಂತಿ ಸೂರ್ಯ ಜ್ಯೋತಿಬಾಫುಲೆ ಅವರಾಗಿದ್ದಾರೆ ಎಂದರು.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಉಪಾಧ್ಯಕ್ಷ ರಾಜು ಎಂ. ತಳವಾರ ಮಾತನಾಡಿ, ನಮ್ಮ ಜನ ಸೌಲಭ್ಯಗಳನ್ನು ಯಾರಿಂದ ಪಡೆಯಬೇಕು ಎನ್ನುವ ಮಾಹಿತಿ ಇಲ್ಲದೆ ಬಳಲುತ್ತಿರುವುದನ್ನು ಕಂಡು ಕರುಳು ಕಿತ್ತಿಬಂದಂತಾಗುತ್ತದೆ. ಯಾಕೆಂದರೆ ಇವರು ಅಮಾಯಕರು. ಇದಕ್ಕೆ ಬಹು ಮುಖ್ಯ ಕಾರಣ ಶಿಕ್ಷಣದ ಕೊರತೆ ಮತ್ತು ಹಸಿವಿನ ಬವಣೆ. ಸಂಘದ ಪದಾಧಿಕಾರಿಗಳಿಗೆ ಮೂಲಸೌಕರ್ಯಗಳನ್ನು ಕೇಳುವುದಕ್ಕಿಂತ ತಾವೇ ರಾಜಕೀಯ ಅಧಿಕಾರ ಪಡೆದುಕೊಂಡು ದಲಿತ ಸಮುದಾಯಗಳಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಕೊಡಬಹುದಾಗಿದೆ. ಸಂಘಟನೆಯಿಂದ ರಾಜಕೀಯ ಅಧಿಕಾರದ ಕಡೆಗೆ ಹೋಗಲು ಪ್ರಯತ್ನಿಸಬೇಕು ಮತ್ತು ಡಾ. ಬಾಬಾ ಸಾಹೇಬ್ ನೀಡಿರುವ ನಮ್ಮ ಅಮೂಲ್ಯವಾದ ಮತವನ್ನು ಯಾರಿಗೂ ಮಾರಿಕೊಳ್ಳಬಾರದು. ಗ್ರಾಮ ಪಂಚಾಯಿತಿಯಿಂದ ಶಾಸನ ಸಭೆಗಳಿಗೆ ಹೋಗಲು ಪ್ರಯತ್ನಿಸಬೇಕು ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಶಿವಕುಮಾರ್ ಮಾತನಾಡಿ, ಸಂಘಟನೆಯನ್ನು ಎಲ್ಲರೂ ಒಗ್ಗಟ್ಟಾಗಿ ಪಾರದರ್ಶಕವಾಗಿ ಕಟ್ಟಬೇಕು. ಡಾ. ಬಾಬಾ ಸಾಹೇಬರ ಸಿದ್ದಾಂತವನ್ನು ಅಳವಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಎ. ಚಿದಾನಂದ, ವಿಜಯನಗರ ಜಿಲ್ಲಾ ಸಂಚಾಲಕ ಹನುಮಂತಪ್ಪ ಚಿನ್ನು, ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಸುಮಲತಾ, ಜಿಲ್ಲಾ ಸಂಘಟನಾ ಸಂಚಾಲಕಿ ಸಾವಿತ್ರಿ ದೀಪ್ ಮತ್ತಿತರರಿದ್ದರು.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ