ಸಿಪಿ ಬಜಾರದಲ್ಲಿ ಪಾರ್ಕಿಂಗ್‌ ವ್ಯವಸ್ಥೆಗೆ ಕಟ್ಟುನಿಟ್ಟಿನ ಕ್ರಮ

KannadaprabhaNewsNetwork |  
Published : Sep 03, 2025, 01:02 AM IST
ಪೊಟೋ2ಎಸ್.ಆರ್.ಎಸ್6 ( ನಗರದ ಸಿಪಿ ಬಜಾರ್‌ ನಲ್ಲಿ ಪೊಲೀಸ್‌ ಇಲಾಖೆ, ಸ್ಥಳೀಯರೊಂದಿಗೆ ಶಾಸಕ ಭೀಮಣ್ಣ ನಾಯ್ಕ ಚರ್ಚಿಸಿದರು.) ಪೊಟೋ2ಎಸ್.ಆರ್.ಎಸ್6 ( ನಗರದ ಸಿಪಿ ಬಜಾರ್‌ ನಲ್ಲಿ ಪೊಲೀಸ್‌ ಇಲಾಖೆ, ಸ್ಥಳೀಯರೊಂದಿಗೆ ಶಾಸಕ ಭೀಮಣ್ಣ ನಾಯ್ಕ ಚರ್ಚಿಸಿದರು.)  | Kannada Prabha

ಸಾರಾಂಶ

ನಗರದ ಉಳಿದ ರಸ್ತೆಗಳಂತೆ ಇಕ್ಕಟ್ಟಾಗೇ ಇದ್ದ ಸಿಪಿ ಬಜಾರದ ರಸ್ತೆ ಕೆಲ ವರ್ಷಗಳ ಹಿಂದೆ ವಿಸ್ತರಿಸಲಾಗಿದೆ

ಶಿರಸಿ: ಜನದಟ್ಟಣೆಯಿಂದ ಕೂಡಿರುವ ನಗರದ ಸಿಪಿ ಬಜಾರದಲ್ಲಿ ಒಂದೂವರೆ ತಾಸಿಗಿಂತ ಹೆಚ್ಚು ವಾಹನ ಪಾರ್ಕಿಂಗ್ ಮಾಡಿದರೆ ವಾಹನವನ್ನು ಪೊಲೀಸರು ವಶಪಡಿಸಿಕೊಳ್ಳಲಿದ್ದು, ವಾಹನ ಮಾಲೀಕರು ತಮ್ಮ ವಾಹನವನ್ನು ಸಂಚಾರಿ ಪೊಲೀಸ್ ಠಾಣೆಗೆ ತೆರಳಿಯೇ ಬಿಡಿಸಿಕೊಳ್ಳಬೇಕಾಗಲಿದೆ.

ಶಾಸಕ ಭೀಮಣ್ಣ ನಾಯ್ಕ, ಡಿವೈಎಸ್ಪಿ ಗೀತಾ ಪಾಟೀಲ ಹಾಗೂ ಸ್ಥಳೀಯ ವರ್ತಕರೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಇಲ್ಲಿಯ ಜಿ.ಜಿ.ಹೆಗಡೆ ಕಡೆಕೋಡಿ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಚೆನ್ನಪಟ್ಟಣ ಬಜಾರಿನಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಹೆಣಗಾಡುತ್ತಿರುವ ಬಗ್ಗೆ ವಿವರಿಸಿದರು. ನಗರದ ಉಳಿದ ರಸ್ತೆಗಳಂತೆ ಇಕ್ಕಟ್ಟಾಗೇ ಇದ್ದ ಸಿಪಿ ಬಜಾರದ ರಸ್ತೆ ಕೆಲ ವರ್ಷಗಳ ಹಿಂದೆ ವಿಸ್ತರಿಸಲಾಗಿದೆ. ನಗರದ ವಾಣಿಜ್ಯ ಪ್ರದೇಶವೂ ಇದಾಗಿರುವುದರಿಂದ ಪೊಲೀಸ್ ಇಲಾಖೆ ವಾಹನ ಪಾರ್ಕಿಂಗ್‌ಗೂ ಮಾರ್ಕಿಂಗ್ ಮಾಡಿದೆ. ಆದರೆ, ನಗರದ ನಟರಾಜ ರಸ್ತೆ, ಶ್ರದ್ಧಾನಂದ ಗಲ್ಲಿ ಸೇರಿದಂತೆ ಎಲ್ಲ ಕಡೆ ಪಾರ್ಕಿಂಗ್ ಮಾಡಬೇಕಾದ ವಾಹನ ಚೆನ್ನಪಟ್ಟಣ ಬಜಾರಕ್ಕೆ ತಂದು ನಿಲ್ಲಿಸಿ ಹೋಗಲಾಗುತ್ತಿದೆ. ಇದರಿಂದ ಇಲ್ಲಿಯ ಅಂಗಡಿಗಳಿಗೆ ಬರುವ ಸಾರ್ವಜನಿಕರ ವಾಹನ ಪಾರ್ಕಿಂಗ್ ಮಾಡಲು ಸಾಧ್ಯವಾಗದೇ ರಸ್ತೆ ಮೇಲೆ ನಿಲ್ಲಿಸಿ ಸಾಮಾನು ಸರಂಜಾಮು ಖರೀದಿಸತೊಡಗುತ್ತಾರೆ. ವಾಹನ ಸಂಚಾರ ನಿಂತು ಪ್ರತಿ ದಿನ ಸಮಸ್ಯೆ ಆಗುತ್ತಿದೆ. ಕೆಲವರು ಚೆನ್ನ ಪಟ್ಟಣ ಬಜಾರದಲ್ಲಿ ಕಾರ್ ನಿಲ್ಲಿಸಿ ಕಾರವಾರ, ಹುಬ್ಬಳ್ಳಿಗೆ ತಮ್ಮ ಕೆಲಸ ಕಾರ್ಯಕ್ಕೂ ತೆರಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಬಹು ಮಹಡಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಗರಸಭೆಯಿಂದ ಅನುಮೋದನೆ ಪಡೆಯುವಾಗ ನೆಲ ಮಹಡಿ ಪಾರ್ಕಿಂಗ್ ಜಾಗ ಎಂದು ಗುರುತಿಸಿ ಅನುಮತಿ ಪಡೆದಿದ್ದಾರೆ. ಆದರೆ, ನಾಲ್ಕಾರು ತಿಂಗಳಿನಲ್ಲಿ ಈ ನೆಲ ಮಹಡಿಗಳಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಬಾಡಿಗೆ ಕೊಡಲಾಗುತ್ತಿದೆ. ಇದರಿಂದ ಸಾರ್ವಜನಿಕರು ತಮ್ಮ ವಾಹನ ರಸ್ತೆ ಬದಿ ನಿಲ್ಲಿಸಬೇಕಾಗಿದೆ. ಚೆನ್ನ ಪಟ್ಟಣ ಬಜಾರದ ಆರಂಭದಲ್ಲಿ ಕೆಲ ಬ್ಯಾಂಕ್ ಸಿಬ್ಬಂದಿ ಎಲ್ಲರೂ ತಮ್ಮ ಕಾರುಗಳನ್ನು ಸಾರ್ವಜನಿಕರಿಗೆ ಮೀಸಲಿಟ್ಟ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿಟ್ಟು ಹೋಗುವುದು ಗಮನಕ್ಕೆ ಬಂದಿದೆ. ಹೀಗಾಗಿ ಎಲ್ಲ ವಾಣಿಜ್ಯ ಮಳಿಗೆಗಳ ಕಟ್ಟಡ ಪರವಾನಗಿ ಪರಿಶೀಲಿಸಲಾಗುವುದು. ಪಾರ್ಕಿಂಗ್ ಜಾಗವನ್ನು ಅವರು ವಾಣಿಜ್ಯ ಮಳಿಗೆಯಾಗಿ ಪರಿವರ್ತಿಸಿದ್ದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ ಎಂದರಲ್ಲದೇ, ಪೌರಾಯುಕ್ತ ಶಿವರಾಜ್ ಅವರಿಗೆ ತಕ್ಷಣವೇ ಎಲ್ಲ ಬಹು ಮಹಡಿ ಕಟ್ಟಡಗಳ ನಕ್ಷೆಯನ್ನು ಪೊಲೀಸ್ ಇಲಾಖೆ ಹಾಗೂ ನನಗೆ ಹಸ್ತಾಂತರಿಸಿ. ಒಂದೊಮ್ಮೆ ನಿಮ್ಮಿಂದ ಕ್ರಮ ಕೈಗೊಳ್ಳಲಾಗದಿದ್ದರೆ ನಾನೇ ಮುಂದೇನು ಎಂದು ನೋಡುತ್ತೇನೆ. ನಗರಸಭೆ ಅಧಿಕಾರಿಗಳು ಇಂತಹ ಕಟ್ಟಡದ ಮಾಲೀಕರಿಗೆ ನೋಟಿಸ್ ನೀಡಿ ಸುಮ್ಮನಾಗಬಾರದು ಎಂದು ಎಚ್ಚರಿಸಿದರು.

ಶಾಸಕ ಭೀಮಣ್ಣ ನಾಯ್ಕ ಅವರು ಈ ವೇಳೆ ಸ್ಥಳೀಯರೊಂದಿಗೆ ಚರ್ಚಿಸಿ, ಚೆನ್ನಪಟ್ಟಣ ಬಜಾರದಲ್ಲಿ ವರ್ತಕರಿಗೆ ಲಾರಿಗಳಿಂದ ಸಾಮಾನು ಸರಂಜಾಮುಗಳನ್ನು ಇಳಿಸಿಕೊಳ್ಳಲು ಐದು ಕಡೆ ಜಾಗ ಗುರುತಿಸಲಾಗಿತ್ತು. ಈ ಜಾಗದಲ್ಲಿ ಯಾವುದೇ ವಾಹನ ಪಾರ್ಕಿಂಗ್ ಗೆ ಅವಕಾಶ ಮಾಡಿಕೊಡದಿರಲು ಸೂಚಿಸಲಾಗಿದೆ. ಈ ಐದು ಸ್ಥಳಗಳಲ್ಲಿ ಇನ್ನು ಮುಂದೆಯೂ ಪಾರ್ಕಿಂಗ್ ಗೆ ಅವಕಾಶ ಮಾಡಿಕೊಡುವುದಿಲ್ಲ ಎಂದರು.

ಡಿವೈ ಎಸ್ಪಿ ಗೀತಾ ಪಾಟೀಲ್ ಅವರಿಗೆ ಸೂಚನೆ ನೀಡಿ ಅನಗತ್ಯವಾಗಿ ಪಾರ್ಕಿಂಗ್ ಮಾಡಿ ಎಲ್ಲಿಗೋ ತೆರಳುವವರ ಮೇಲೆ ನಿಯಂತ್ರಣ ಹೇರಿ, ಚೆನ್ನಪಟ್ಟಣ ಬಜಾರಿನಲ್ಲಿ ಒಂದುವರೆ ತಾಸಿಗೂ ಅಧಿಕ ಪಾರ್ಕಿಂಗ್ ಮಾಡುವ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಿ ಎಂದು ಸೂಚಿಸಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ದೀಪಕ ದೊಡ್ಡೂರು, ಸಂತೋಷ ಪಂಡಿತ ಮತ್ತಿತರರು ಇದ್ದರು.

ನಗರದ ಬನವಾಸಿ ರಸ್ತೆ ಇಕ್ಕಟ್ಟಾಗಿದ್ದು,ಇಲ್ಲಿ ವಾಹನ ಸಂಚಾರ ಕಷ್ಟ.ಈ ರಸ್ತೆ ವಿಸ್ತರಣೆಯ ಬಗ್ಗೆ ಈಗ ಚಿಂತನೆ ನಡೆದಿದೆ. ಮಾರಿಕಾಂಬಾ ದೇವಾಲಯದ ಎದುರು ಸರ್ಕಲ್ ಮಾಡಿ ವಾಹನ ಸಂಚಾರಕ್ಕೆ ಅವಕಾಶ ನೀಡಲಿದ್ದೇವೆ. ಇಲ್ಲಿಯ ಪೊಲೀಸ್ ಠಾಣೆಯನ್ನೂ ಸಹ ಸ್ಥಳಾಂತರಿಸಲಾಗುತ್ತದೆ. ನಗರದಲ್ಲಿ ಒಟ್ಟೂ 16 ಕಡೆಗಳಲ್ಲಿ ಆಟೋ ನಿಲ್ದಾಣಗಳಿವೆ. ವಾಹನ ಸಂಚಾರಕ್ಕೆ ಸಮಸ್ಯೆ ಆಗದ ರೀತಿಯಲ್ಲಿ ಅವುಗಳಿಗೆ ಸೂಕ್ತ ಸ್ಥಳ ನೀಡಬೇಕು. ಈ ವರ್ಷ ಮಾರಿಕಾಂಬಾ ದೇವಿ ಜಾತ್ರೆಯೂ ನಡೆಯಲಿರುವ ಕಾರಣ ನಗರದ ಸಂಚಾರ ವ್ಯವಸ್ಥೆ ಸಮರ್ಪಕಗೊಳಿಸಬೇಕಿದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದ್ದಾರೆ.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ