ಕುಷ್ಟಗಿ:
ಸತತವಾಗಿ ಎಂಟು ದಿನ ಕೇಸೂರು ಗ್ರಾಮದ ವಿರುಪಾಕ್ಷಯ್ಯಜ್ಜನ ಗದ್ದುಗೆಯಲ್ಲಿ ಅನ್ನದಾಸೋಹ ನಡೆಸುತ್ತಿರುವ ಯುವಕರ ತಂಡ, ನಿತ್ಯವೂ ಒಂದು ಒಂದು ಬಗೆಯ ಅನ್ನದಾಸೋಹ ಮಾಡಿದೆ. ಇದೀಗ 9ನೇ ದಿನವಾದ ಶನಿವಾರ ಪಲ್ಲಕ್ಕಿ ಉತ್ಸವದೊಂದಿಗೆ ಶುಖಮುನಿ ತಾತನ ಜಾತ್ರೆಗೆ ತೆರೆ ಬೀಳಲಿದ್ದು ಶೇಂಗಾ ಹೋಳಿಗೆ ನೀಡಲು ಮುಂದಾಗಿದ್ದಾರೆ.
ಸುಮಾರು 40 ಜನರು ಹೋಳಿಗೆ ಮಾಡುವ ಕಾರ್ಯದಲ್ಲಿ ತೊಡಗಿದ್ದು ಐವರು ಹೋಳಿಗೆ ಬೇಯಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ದಾಸೋಹ ಕಾರ್ಯಕ್ರಮದಲ್ಲಿ 40ಕ್ಕೂ ಅಧಿಕ ಜನರು ಸೇವೆ ಸಲ್ಲಿಸಿದ್ದಾರೆ.ಯುವಕರ ಕಾರ್ಯಕ್ಕೆ ಮೆಚ್ಚುಗೆ:
ಧಾರ್ಮಿಕ ಕಾರ್ಯಕ್ರಮದಲ್ಲಿ ಯುವಕರು ಪಾಲ್ಗೊಳ್ಳದ ದಿನಗಳಲ್ಲಿ ಇಲ್ಲಿನ ಯುವಕರು ಸಹಾಯ, ಸಹಕಾರ ಪಡೆದುಕೊಳ್ಳುವ ಮೂಲಕ ಪ್ರತಿದಿನವೂ ಪಲ್ಲಕ್ಕಿಯ ಉತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆವಿಶೇಷ ಭೋಜನದ ವ್ಯವಸ್ಥೆ ಕಲ್ಪಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನು ಕೇಸೂರು ಹಾಗೂ ದೋಟಿಹಾಳ ಗ್ರಾಮಸ್ಥರು ಶ್ಲಾಘಿಸಿದ್ದಾರೆ.ಕಳೆದ ಮೂರ್ನಾಲ್ಕು ವರ್ಷಗಳಿಂದ ಶುಖಮುನಿ ತಾತನ ಭಕ್ತರ ಸಹಕಾರದಿಂದ ಅನ್ನದಾಸೋಹ ಮಾಡಲು ಸಾಧ್ಯವಾಗಿದೆ. ಈ ವರ್ಷ ಎರಡು ದಿನದ ಪ್ರಸಾದದಲ್ಲಿ ಹೋಳಿಗೆ ವಿತರಿಸಲಾಗಿದೆ. ಮುಂದಿನ ವರ್ಷ ಮತ್ತಷ್ಟು ವಿಶೇಷವಾಗಿ ದಾಸೋಹ ವ್ಯವಸ್ಥೆ ಮಾಡಲಾಗುವುದು ಎಂದು ಕೇಸೂರು ಗದ್ದುಗೆ ಬಾಯ್ಸ್ ಹೇಳಿದ್ದಾರೆ.