ಶ್ಯಾವಿಗೆ ಯಂತ್ರಕ್ಕೆ ಶುಕ್ರದೆಸೆ ಆರಂಭ

KannadaprabhaNewsNetwork |  
Published : Apr 07, 2024, 01:58 AM ISTUpdated : Apr 07, 2024, 08:02 AM IST
ಫೋಟೋವಿವರ- (6ಎಂಎಂಎಚ್‌1) ಮರಿಯಮ್ಮನಹಳ್ಳಿಯ ಪೊಲೀಸ್‌ ಠಾಣೆಯ ಬಳಿ ಇರುವ ಅಕ್ಕಮಹಾದೇವಿ ಅವರ ನಿವಾಸದಲ್ಲಿ ಶ್ಯಾವಿಗೆ ಹಾಕಿಸಿಕೊಂಡು ಬಿಸಿಲಿಗೆ ಒಣಿಸಿರುವುದು.  | Kannada Prabha

ಸಾರಾಂಶ

ಹೋಳಿ ಹುಣ್ಣಿಮೆಯಿಂದ ಹಿಡಿದು ಯುಗಾದಿವರೆಗೆ ಮಾತ್ರ ಶಾವಿಗೆ ಮಾಡುವ ಯಂತ್ರಗಳನ್ನು ಹೊಂದಿರುವವರಿಗೆ ಇದು ದುಡಿಮೆಯ ಕಾಲ. ಮಹಿಳೆಯರು ಕುಟುಂಬದ ಸದಸ್ಯರ ಸಂಖ್ಯೆಗೆ ತಕ್ಕಂತೆ ಶ್ಯಾವಿಗೆಯನ್ನು ಇಡೀ ವರ್ಷಕ್ಕಾಗುವಷ್ಟು ತಯಾರಿಸಿಕೊಳ್ಳುತ್ತಿದ್ದಾರೆ.

ಸಿ.ಕೆ. ನಾಗರಾಜ ದೇವನಕೊಂಡ

ಮರಿಯಮ್ಮನಹಳ್ಳಿ: ಒಬ್ಬರು ತಿಕ್ಕಿದರೆ, ಇನ್ನೊಬ್ಬರು ಶ್ಯಾವಿಗೆ ಎಳೆಗಳನ್ನು ಸಂಗ್ರಹಿಸಿ ಒಂದು ಕೋಲಿನ ಮೇಲೆ ಹರಡಿ ಬಿಸಿಲಿಗೆ ಒಣಗಿಸುತ್ತಿದ್ದರು. ಶ್ಯಾವಿಗೆ ಹೊಸೆಯುತ್ತ ಜನಪದ ಹಾಡು ಹೇಳುತ್ತ ಖುಷಿಪಡುತ್ತಿದ್ದರು. ಇಂದು ಆಧುನಿಕ ಭರಾಟೆಯಲ್ಲಿ ಆ ತಾಳ್ಮೆ ಇಲ್ಲದೇ ಶ್ಯಾವಿಗೆ ತಯಾರಿಸುವ ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಶ್ಯಾವಿಗೆ ಯಂತ್ರಗಳ ಮಾಲೀಕರಿಗೆ ಶುಕ್ರದೆಸೆ ಆರಂಭವಾಗಿದೆ.

ಇಲ್ಲಿನ ಪೊಲೀಸ್‌ ಠಾಣೆ ಬಳಿಯ ಅಕ್ಕಮಹಾದೇವಿ ನಿವಾಸದಲ್ಲಿ ನಿತ್ಯ ಶ್ಯಾವಿಗೆ ಹಾಕಿಸಲು ಜನರು ಗುಂಪು ಗುಂಪಾಗಿ ಸೇರಿರುತ್ತಾರೆ. ಅದರಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚಿರುತ್ತದೆ. ಪಟ್ಟಣದಲ್ಲಿ ಕಳೆದ 15 ದಿನಗಳಿಂದ ಶ್ಯಾವಿಗೆ ಸುಗ್ಗಿ ಆರಂಭವಾಗಿದೆ. ಈಗ ಶ್ಯಾವಿಗೆ ಸಿದ್ಧಪಡಿಸುವ ಗಿರಣಿಗಳಿಗೆ ಬಿಡುವಿಲ್ಲದ ಕೆಲಸ ಆರಂಭವಾಗಿದೆ.

ಹೋಳಿ ಹುಣ್ಣಿಮೆಯಿಂದ ಹಿಡಿದು ಯುಗಾದಿವರೆಗೆ ಮಾತ್ರ ಶಾವಿಗೆ ಮಾಡುವ ಯಂತ್ರಗಳನ್ನು ಹೊಂದಿರುವವರಿಗೆ ಇದು ದುಡಿಮೆಯ ಕಾಲ. ಮಹಿಳೆಯರು ಕುಟುಂಬದ ಸದಸ್ಯರ ಸಂಖ್ಯೆಗೆ ತಕ್ಕಂತೆ ಶ್ಯಾವಿಗೆಯನ್ನು ಇಡೀ ವರ್ಷಕ್ಕಾಗುವಷ್ಟು ತಯಾರಿಸಿಕೊಳ್ಳುತ್ತಿದ್ದಾರೆ. ಕನಿಷ್ಠ 5-10 ಕೆಜಿ ಶ್ಯಾವಿಗೆ ಹಾಕಿಸಿಕೊಳ್ಳಲು ಬೆಳಗ್ಗೆ ಬಂದು ಮಧ್ಯಾಹ್ನದ ವೇಳೆಗೆ ಬಿಸಿಲಿಗೆ ಒಣಗಿಸಿಕೊಂಡು ತೆರಳುತ್ತಾರೆ. ಪಟ್ಟಣದಲ್ಲಿ ಬಿಸಿಲಿಗೆ ಒಣಗಲು ಹಾಕಿರುವ ಶ್ಯಾವಿಗೆ ಎಳೆಗಳನ್ನು ನಾವು ಕಾಣಬಹುದು.

ಶ್ಯಾವಿಗೆ ಯಂತ್ರಗಳಿಗೆ ಮೂರು ತಿಂಗಳು ಶುಕ್ರದೆಸೆ. ಶ್ಯಾವಿಗೆ ಹಿಟ್ಟನ್ನು ಮನೆಯಿಂದ ತರುವ ಗ್ರಾಹಕರ ಒಂದು ಕೆ.ಜಿ. ಶ್ಯಾವಿಗೆಗೆ ತಯಾರಿಸಲು ₹20 ತೆಗೆದುಕೊಳ್ಳಲಾಗುತ್ತದೆ. ಹಿಟ್ಟು ಸಮೇತ ಯಂತ್ರದವರೆ ಶ್ಯಾವಿಗೆ ತಯಾರಿಸಿ ಕೊಡಲು ಒಂದು ಕೆ.ಜಿ.ಗೆ ₹65. ಈಗಾಗಲೇ ಸಿದ್ಧಪಡಿಸಿರುವ ಶ್ಯಾವಿಗೆ ಕೆಜಿಗೆ ₹75ರಂತೆ ಮಾರಾಟ ಸಹ ಮಾಡಲಾಗುತ್ತದೆ.

ಈಗ ಯುಗಾದಿ, ರಂಜಾನ್‌ಗಾಗಿ ಮತ್ತು ಒಂದು ವರ್ಷಕ್ಕೆ ಬೇಕಾಗುವಷ್ಟು ಶ್ಯಾವಿಗೆ ಸಿದ್ಧಪಡಿಸಿಕೊಳ್ಳುವುದರಲ್ಲಿ ಮರಿಯಮ್ಮನಹಳ್ಳಿ ಹೋಬಳಿಯ 33 ಹಳ್ಳಿಗಳ ಮಹಿಳೆಯರು ಗುಂಪು ಗುಂಪಾಗಿ ಶ್ಯಾವಿಗೆ ಯಂತ್ರಗಳ ಮೊರೆ ಹೋಗಿ ಶ್ಯಾವಿಗೆ ಹಾಕಿಸಿಕೊಳ್ಳುತ್ತಿದ್ದಾರೆ.

ವರ್ಷದಲ್ಲಿ ಎರಡು ತಿಂಗಳು ಮಾತ್ರ ಶ್ಯಾವಿಗೆ ತಯಾರಿಸುವ ಕೆಲಸ ಮಾಡುತ್ತೇವೆ. ಒಂದು ಕೆಜಿಗೆ ₹20ಯಂತೆ ಶ್ಯಾವಿಗೆ ಹಾಕಿಕೊಡುತ್ತೇವೆ. ದಿನಕ್ಕೆ ಸುಮಾರು ಒಂದು ಕ್ವಿಂಟಲ್‌ನಷ್ಟು ಶ್ಯಾವಿಗೆಯನ್ನು ಯಂತ್ರದಿಂದ ತಯಾರಿಸಲಾಗುತ್ತದೆ. ಕುಟುಂಬದ ಸದಸ್ಯರೆಲ್ಲ ಶ್ಯಾವಿಗೆ ಹಾಕುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ಮೊದಲು ನಮ್ಮ ತಾಯಿ ಅಕ್ಕಮಹಾದೇವಿ ಇದನ್ನು ನೋಡಿಕೊಳ್ಳುತ್ತಿದ್ದರು. ಈಗ ನಾವು ನೋಡಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಶ್ಯಾವಿಗೆ ಯಂತ್ರದ ಮಾಲೀಕ ವೀರೇಂದ್ರ ಪ್ರಸಾದ್‌.

ನಾವು ಚಿಕ್ಕವರಿದ್ದಾಗ ನಮ್ಮ ಅಕ್ಕಪಕ್ಕದ ಮನೆಯ ಎಲ್ಲ ಮಹಿಳೆಯರು ಸೇರಿ ಗೋದಿ ಹದಗೊಳಿಸಿ, ಬೀಸುಕಲ್ಲಿನಲ್ಲಿ ಬೀಸಿ, ನಂತರ ಹಿಟ್ಟು ಸೋಸಿ ಮನೆಯ ಕಟ್ಟೆ ಮೇಲೆ ಶ್ಯಾವಿಗೆ ಮಣೆ ಇಟ್ಟು ಶ್ಯಾವಿಗೆ ಹೊಸೆಯುತ್ತಿದ್ದೆವು. ಈಗ ಅದು ನೆನಪು ಮಾತ್ರ ಎನ್ನುತ್ತಾರೆ ಮರಿಯಮ್ಮನಹಳ್ಳಿ ನಿವಾಸಿ ಕೊಟ್ಗಿ ರಾಚಮ್ಮ.

PREV

Recommended Stories

‘ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ತನ್ನಿ’ : ನಾರಾಯಣಗೌಡ
ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ: ಡಿಕೆಶಿ