ವಕ್ಫ್‌ ಅದಾಲತ್‌ ಬಂದ್‌ ಮಾಡಿ: ಜೋಶಿ

KannadaprabhaNewsNetwork |  
Published : Nov 01, 2024, 12:06 AM IST
454 | Kannada Prabha

ಸಾರಾಂಶ

ರೈತರ ಪಹಣಿಗಳ ಕಾಲಂ ನಂ. 11ರಲ್ಲಿ ವಕ್ಫ್‌ ಹೆಸರು ಎಂಟ್ರಿ ಮಾಡಲು ಸಚಿವ ಜಮೀರ್‌ ಅಹ್ಮದ್‌ ಒತ್ತಡ ಹೇರಿದ್ದರಿಂದ ಈ ರೀತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಆದರೆ, ಜಮೀರ್‌ ಅಹ್ಮದ್‌ ಅವರು ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಈ ಎಂಟ್ರಿ ಮಾಡಿಸಲಾಗಿದೆ ಎಂದು ಹೇಳುತ್ತಿದ್ದಾರೆ.

ಹುಬ್ಬಳ್ಳಿ:

ರಾಜ್ಯದಲ್ಲಿ ಸಚಿವ ಜಮೀರ್‌ ಅಹ್ಮದ್‌ ನಡೆಸುತ್ತಿರುವ ವಕ್ಫ್‌ ಅದಾಲತ್‌ನಿಂದಲೇ ರೈತರ, ಮಠಗಳ ಹಾಗೂ ಸರ್ಕಾರ ಆಸ್ತಿಗಳ ಪಹಣಿಯಲ್ಲಿ ವಕ್ಫ್‌ ಹೆಸರು ಸೇರಿಸಲಾಗುತ್ತಿದೆ. ಕೂಡಲೇ ರಾಜ್ಯದಲ್ಲಿ ವಕ್ಫ್‌ ಅದಾಲತ್‌ನ್ನು ಬಂದ್‌ ಮಾಡಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಒತ್ತಾಯಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜಮೀರ್‌ ಅಹ್ಮದ್‌ ಅವರು 1974ರ ವಕ್ಫ್ ಗೆಜೆಟ್‌ ಇಟ್ಟುಕೊಂಡು ವಕ್ಫ್‌ ಅದಾಲತ್‌ ನಡೆಸುತ್ತಿದ್ದಾರಲ್ಲದೇ, ಅಧಿಕಾರಿಗಳ ಮೇಲೆ ಒತ್ತಡ ಹೇರಿ ರೈತರ ಪಹಣಿಗಳಲ್ಲಿ ವಕ್ಫ್‌ ಎಂದು ಎಂಟ್ರಿ ಮಾಡಿಸುತ್ತಿದ್ದಾರೆ. ಕೇವಲ ರೈತರ ಪಹಣಿಯಲ್ಲಿ ಅಷ್ಟೇ ಅಲ್ಲದೇ ವಿಜಯಪುರ ಎಸ್‌ಪಿ ಮನೆ, ಸಿವಿಲ್‌ ಆಸ್ಪತ್ರೆ, ಯರಗಲ್‌ ಮಠ, ಸರ್ಕಾರದ ಜಾಗದಲ್ಲಿಯೂ ವಕ್ಫ್‌ ಹೆಸರು ಸೇರಿಸಲಾಗಿದೆ ಎಂದು ಆರೋಪಿಸಿದರು.

ರೈತರ ಪಹಣಿಗಳ ಕಾಲಂ ನಂ. 11ರಲ್ಲಿ ವಕ್ಫ್‌ ಹೆಸರು ಎಂಟ್ರಿ ಮಾಡಲು ಸಚಿವ ಜಮೀರ್‌ ಅಹ್ಮದ್‌ ಒತ್ತಡ ಹೇರಿದ್ದರಿಂದ ಈ ರೀತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಆದರೆ, ಜಮೀರ್‌ ಅಹ್ಮದ್‌ ಅವರು ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಈ ಎಂಟ್ರಿ ಮಾಡಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಈ ಎಲ್ಲ ಪ್ರಕ್ರಿಯೆ ಮುಖ್ಯಮಂತ್ರಿಗಳ ಅಣತಿ ಮೇಲೆಯೇ ನಡೆದಿದೆಯೇ? ಇಲ್ಲವಾದರೆ, ತಮ್ಮ ಹೆಸರು ಬಳಕೆ ಮಾಡುತ್ತಿರುವ ಜಮೀರ್‌ ಮೇಲೆ ಸಿಎಂ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನಿಸಿದರು.

ಹೆಸರು ತೆಗೆದು ಹಾಕಬೇಕು:

ರೈತರಿಗೆ ನೀಡಿರುವ ನೋಟಿಸ್‌ ವಾಪಸ್‌ ಪಡೆಯುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಕೇವಲ ನೋಟಿಸ್‌ ಹಿಂಪಡೆದರೆ ಸಾಲದು, ಪಹಣಿಯಲ್ಲಿ ಎಂಟ್ರಿ ಆಗಿರುವ ವಕ್ಫ್‌ ಹೆಸರನ್ನು ಸಂಪೂರ್ಣವಾಗಿ ತೆಗೆಸಬೇಕು. ಹಾಗೊಂದು ವೇಳೆ ವಕ್ಫ್‌ ಹೆಸರು ಪಹಣಿಯಿಂದ ತೆಗೆಯದಿದ್ದರೆ ರೈತರೇ ರಾಜ್ಯ ಸರ್ಕಾರದ ವಿರುದ್ಧ ದಂಗೆ ಏಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಸರ್ವರ್‌ ಡೌನ್‌:

ರೈತರ ಪಹಣಿಗಳಲ್ಲಿ ವಕ್ಫ್‌ ಹೆಸರು ಸೇರ್ಪಡೆಗೊಂಡ ನಂತರ ರೈತರು ಆತಂಕಗೊಂಡಿದ್ದಾರೆ. ಬಹುತೇಕ ರೈತರು ಪಹಣಿ ಪರಿಶೀಲಿಸಲು ಮುಂದಾಗುತ್ತಿದ್ದಾರೆ. ಆದರೆ, ಸರ್ಕಾರ ರೈತರಿಗೆ ಪಹಣಿಯ ಯಾವುದೇ ಮಾಹಿತಿ ಸಿಗಬಾರದು ಎಂದು ಕಳೆದ ಎರಡು ದಿನಗಳಿಂದ ಭೂಮಿ ಸಾಫ್ಟ್‌ವೇರ್‌ ಸರ್ವರ್‌ ಡೌನ್‌ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ವಕ್ಫ್‌ ಪ್ರಕರಣದಲ್ಲಿ ಹಿಂದೂ ಮುಸ್ಲಿಂ ಅಲ್ಲ, ಮತಾಂಧರು ವರ್ಸಸ್‌ ಸಮಾಜವಿದೆ. ಏಕೆಂದರೆ, ಇದರಲ್ಲಿ ಕೆಲ ಮುಸ್ಲಿಂ ಸಮಾಜದವರ ಜಮೀನು ಕೂಡಾ ಸೇರಿವೆ. ರಾಜ್ಯದಲ್ಲಿ ಮತಾಂಧ ಸರ್ಕಾರ ಇದ್ದು, ಪುಂಡ ಪೋಕರಿಗಳು, ಕಳ್ಳರು, ಖದೀಮರು ಆಡಳಿತ ನಡೆಸುತ್ತಿದ್ದಾರೆ ಎಂದು ಆಪಾದಿಸಿದರು.

ಬಿಜೆಪಿಯವರು ಬರೀ ಹೇಳುವುದೇ ಸುಳ್ಳು ಎನ್ನುವ ಸಿಎಂ ಹೇಳಿಕೆಗೆ ಗರಂ ಆದ ಜೋಶಿ, ನನ್ನ ಪ್ರಶ್ನೆಗಳಿಗೆ ಸಿಎಂ ಈ ವರೆಗೆ ಲಾಜಿಕಲ್‌ ಆಗಿ ಉತ್ತರ ನೀಡಿಲ್ಲ. ಅದರ ಬದಲು ನನ್ನನ್ನು ಬೈಯುತ್ತಾ ಓಡಾಡುತ್ತಿದ್ದಾರೆ. ಮುಡಾದಲ್ಲಿ ನಾವು ಹೇಳಿರುವುದು ವಿವಾದ ಆಗಿದ್ದರೆ ಕೋರ್ಟ್‌ ಹೇಳಿದ್ದೇನು? ನಿಮ್ಮ ಹಸ್ತಕ್ಷೇಪ ಇಲ್ಲದೆ ಇದು ಆಗಿಲ್ಲ ಎಂದು ಕೋರ್ಟ್‌ ಹೇಳಿರುವುದು ಸುಳ್ಳೆ ಎಂದು ಪ್ರಶ್ನಿಸಿದರು.

ಸಿಇಒ ಕೋರ್ಟ್‌ ಮೆಟ್ಟಿಲು ಹತ್ತಿಸ್ತೇನಿ:

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ಜಿಪಂ ಸಿಇಒ ಹನುಮನ ದೇವಸ್ಥಾನ ಮತ್ತು ದುರ್ಗವ್ವ ದೇವಸ್ಥಾನವನ್ನು ಸ್ವಾಧೀನಪಡಿಸಿಕೊಳ್ಳಲು ವಕ್ಫ್‌ ಸಮಿತಿಗೆ ಆದೇಶ ಹೊರಡಿಸಿದ್ದಾರೆ. ವಕ್ಫ್‌ ಬೋರ್ಡ್‌ ಸದಸ್ಯರು ನಿನ್ನೆ ದೇವಸ್ಥಾನವನ್ನು ವಶಪಡಿಸಿಕೊಳ್ಳಲು ಹೋಗಿದ್ದು, ಸ್ಥಳೀಯರು ಸಹಜವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಕಲ್ಲು ತೂರಾಟ ಗಲಾಟೆ ಆಗಿದೆ. ಈ ಪ್ರಕರಣದಲ್ಲಿ ಹಿಂದೂಗಳ ವಿರುದ್ಧವೇ ಎಫ್‌ಐಆರ್‌ ದಾಖಲಿಸಲಾಗಿದೆ. ದೇವಸ್ಥಾನ ಸ್ವಾಧೀನಕ್ಕೆ ಆದೇಶ ಹೊರಡಿಸಿರುವ ಜಿಪಂ ಸಿಇಒ ವಿರುದ್ಧ ಕೇಸ್‌ ಮಾಡಿ ಆತನನ್ನು ಕೋರ್ಟ್‌ನಲ್ಲಿ ನಿಲ್ಲಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನೇದಿನೇ ಏರುತ್ತಿರುವ ಚಿನ್ನದ ದರ ಇಳಿಯಲಿ ಎಂದು ಭಕ್ತನ ಹರಕೆ !
₹70 ಲಕ್ಷ ವಿದ್ಯುತ್‌ ಬಿಲ್‌ ಬಾಕಿ: ಸಿದ್ಧಗಂಗಾ ಮಠಕ್ಕೆ ನೀರು ಬಂದ್‌!