ಸಿಬ್ಬಲಗುಡ್ಡದ ಮತ್ಸ್ಯಧಾಮದ ಮೀನುಗಳು ಸಂಕಷ್ಟದಲ್ಲಿ

KannadaprabhaNewsNetwork |  
Published : Apr 08, 2024, 01:04 AM IST
 ಫೋಟೋ 06 ಟಿಟಿಎಚ್ 03 ಎ  ಸಿಬ್ಬಲಗುಡ್ಡೆ ಮತ್ಸ್ಯಧಾಮದ ಮಹಶಿರ್ ಮೀನುಗಳು | Kannada Prabha

ಸಾರಾಂಶ

ಸಿಬ್ಬಲಗುಡ್ಡದ ಭಾರಿ ಗಾತ್ರದ ಮೀನುಗಳಿರುವ ಜಾಗದಲ್ಲಿ ಮಣ್ಣು ಬಂದು ಕೂತಿದ್ದು ನದಿ ತಳ ಕಾಣುತ್ತಿದೆ. ಮೀನುಗಳ ನಿರಾಳ ಚಟುವಟಿಕೆಗೆ ಕೊರತೆಯುಂಟಾಗಿದೆ.

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ಪ್ರವಾಸಿಗರ ಆಕರ್ಷಕ ತಾಣಗಳಲ್ಲಿ ಒಂದಾಗಿರುವ ಸಿಬ್ಬಲಗುಡ್ಡದ ತುಂಗಾನದಿಯಲ್ಲಿರುವ ಮತ್ಸ್ಯಧಾಮದ ಮೀನುಗಳು ನೀರಿನ ಕೊರತೆಯಿಂದ ಬಳಲುತಿದ್ದು ಮೊರೆಯೇ ಕೇಳುವವರಿಲ್ಲದಂತಾಗಿದೆ.

ಕಳೆದ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ತುಂಗಾನದಿಯಲ್ಲಿ ನೀರಿನ ಹರಿವು ನಿಂತು ತಿಂಗಳುಗಳೇ ಕಳೆದಿದೆ. ಇದರಿಂದಾಗಿ ವರ್ಷ ಪೂರ್ತಿ ನೀರು ನಿಂತಿರುತ್ತಿದ್ದ ಸಿಬ್ಬಲಗುಡ್ಡದ ಭಾರಿ ಗಾತ್ರದ ಮೀನುಗಳಿರುವ ಜಾಗದಲ್ಲಿ ಮಣ್ಣು ಬಂದು ಕೂತಿದ್ದು ನದಿ ತಳ ಕಾಣುತ್ತಿದೆ. ಮೀನುಗಳ ನಿರಾಳ ಚಟುವಟಿಕೆಗೆ ಕೊರತೆಯುಂಟಾಗಿದೆ.

ಹೀಗಾಗಿ ನದಿಯಲ್ಲಿ ಎಲ್ಲೆಡೆ ಬಂಡೆಗಳೇ ಕಾಣುತ್ತಿದ್ದು ಬಿರು ಬಿಸಿಲಿನ ಬೇಗೆಗೆ ದಿನದಿಂದ ದಿನಕ್ಕೆ ನೀರು ಒಣಗುತ್ತಿರುವುದು ಮೀನಿನ ಸಂತತಿಗೇ ಮಾರಕವಾಗುವ ಆತಂಕವೂ ಎದುರಾಗಿದೆ. ಮೀನುಗಳಿರುವ ಜಾಗವನ್ನು ಮಾತ್ರ ಹೊರತು ಪಡಿಸಿ ನದಿಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಸುಮಾರು 200 ಎಚ್‍ಪಿಗೂ ಮಿಕ್ಕಿ ಕೃಷಿ ಪಂಪ್‍ಸೆಟ್‍ ನದಿಗೆ ಹಾಕಲಾಗಿದ್ದು ನೀರಿನ ಕೊರತೆಗೆ ಪ್ರಮುಖ ಕಾರಣ.

ವಿದ್ಯುತ್ ಇರುವಷ್ಟು ಹೊತ್ತು ನೀರನ್ನು ಎತ್ತಲಾಗುತ್ತಿರುವುದು ನೀರಿನ ಕೃತಕ ಅಭಾವಕ್ಕೆ ಕಾರಣ ಎಂಬುದು ಸ್ಥಳೀಯರ ಆರೋಪವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆ ನೀಡಿರುವ ಮನವಿಗೂ ಬೆಲೆ ಇಲ್ಲವಾಗಿದೆ. ತುಂಗಾನದಿಯಲ್ಲಿ ನೀರಿನ ಪ್ರಮಾಣ ಕುಸಿಯುತ್ತಿರುವುದರಿಂದಾಗಿ ಕುಡಿಯುವ ನೀರನ್ನು ಒದಗಿಸಲು ನೀರಿನ ಕೊರತೆ ಇದೆ. ಕ್ರಮಕೈಗೊಳ್ಳುವಂತೆ ಮೇಳಿಗೆ ಗ್ರಾಪಂಯಿಂದಲೂ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ.

ಮಳೆಗಾಲದ ಅವಧಿಯನ್ನು ಹೊರತು ಪಡಿಸಿ ಉಳಿದಂತೆ ವರ್ಷಪೂರ್ತಿ ಈ ಕೇಂದ್ರ ನಾಡಿನಾದ್ಯಂತ ಪ್ರವಾಸಿಗರನ್ನು ಸೆಳೆಯುತ್ತಿದೆ. ತುಂಗಾನದಿ ಇಕ್ಕೆಲೆಗಳ ಹಚ್ಚ ಹಸುರಿನ ಪ್ರಕೃತಿ ಸೌಂದರ್ಯದೊಂದಿಗೆ ಪ್ರವಾಸಿಗರು ಹಾಕುವ ಅಕ್ಕಿ ಮಂಡಕ್ಕಿ ಮತ್ತು ತೆಂಗಿನಕಾಯಿ ಚೂರುಗಳಿಗೆ ಎಗರಿ ಹಾತೊರೆಯುವ ಮಹಶಿರ್ ಮೀನುಗಳೇ ಪ್ರವಾಸಿಗರ ಆಕರ್ಷಣೆ ಕೇಂದ್ರವಾಗಿವೆ. ಅತ್ಯಂತ ಅಪರೂಪದ ತಳಿಯಾದ ಈ ಮೀನುಗಳು ಶೃಂಗೇರಿ ಶಿಶಿಲ ಸೇರಿ ಕೆಲವೇ ಕಡೆಗಳಲ್ಲಿ ಮಾತ್ರ ಕಾಣುವುದಕ್ಕೆ ಸಾಧ್ಯ ಎಂಬ ಅಭಿಪ್ರಾಯವಿದೆ.

ಐತಿಹಾಸಿಕ ಹಿನ್ನೆಲೆ: ಈ ಪ್ರದೇಶ ಸಿದ್ಧ ಮಹರ್ಷಿಗಳು ತಪಸ್ಸು ಮಾಡಿದ ತಪೋಭೂಮಿಯಾಗಿದ್ದು ಸಮೀಪದಲ್ಲೇ ಋಷಿ ತಪಸ್ಸು ಮಾಡಿದ ಗುಹೆಯನ್ನು ಇಂದಿಗೂ ಕಾಣಬಹುದಾಗಿದೆ. ಈ ಮತ್ಸ್ಯಧಾಮಕ್ಕೆ ಹೊಂದಿಕೊಂಡು ನದಿದಡದಲ್ಲೇ ಗಣಪತಿ ಉಧ್ಭವಮೂರ್ತಿಯ ದೇವಾಲಯವೂ ಇದೆ.

ಅಂದಿನಿಂದಲೇ ಈ ಅಪರೂಪದ ಮಹಶಿರ್ ಮೀನಿನ ಸಂತತಿಯೂ ನದಿಯಲ್ಲಿ ಕಾಣಿಸಿಕೊಂಡಿದ್ದವು ಎಂಬ ಪ್ರತೀತಿಯೂ ಇದೆ. ಹೀಗಾಗಿಯೇ ಈ ಮೀನಿನ ತಳಿಗಳನ್ನು ದೇವರ ಮೀನುಗಳು ಎಂಬ ಭಾವನೆಯಿಂದ ಕಾಣಲಾಗುತ್ತದೆ. ದೇವಸ್ಥಾನದ ಅರ್ಚಕರಾದ ವಿನಾಯಕ ಭಟ್ಟರ ಮನೆಯಲ್ಲಿ ಶುದ್ದವಾದ ಜೇನುತುಪ್ಪ ದೊರೆಯುವುದು ವಿಶೇಷವೇ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ