ಸಿದ್ಧಗಂಗಾ ಶ್ರೀ ಬದುಕು ಮುಂದಿನ ಪೀಳಿಗೆಗೆ ಮಾರ್ಗದರ್ಶನ: ತೇಜ್ ಪಾಲ

KannadaprabhaNewsNetwork | Published : Apr 6, 2025 1:47 AM

ಸಾರಾಂಶ

ತ್ರಿವಿಧ ದಾಸೋಹದ ಮೂಲಕ ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಸರ್ವರಿಗೂ ವಿದ್ಯೆ, ವಸತಿ, ದಾಸೋಹ ನೀಡಿದ ಹೆಗ್ಗಳಿಕೆಗೆ ಸಿದ್ಧಗಂಗಾ ಪೂಜ್ಯರು ಪಾತ್ರರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಡಾ. ಶಿವಕುಮಾರ ಮಹಾ ಶಿವಯೋಗಿಗಳ ಜನ್ಮದಿನದ ಅಂಗವಾಗಿ ತಾಲೂಕಿನ ಅರೇಹಳ್ಳಿಯ ಡಾ. ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪ ನಮನ ಅರ್ಪಿಸಲಾಯಿತು.

ಅರೇಹಳ್ಳಿಯ ಡಾ. ಶಿವಕುಮಾರ ಮಹಾಸ್ವಾಮೀಜಿಗಳ ವೃತ್ತದಲ್ಲಿ ತಾಲೂಕು ವೀರಶೈವ ಸಂಘ, ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ ಸ್ವಸಹಾಯ ಸಂಘ ಹಾಗೂ ಡಾ. ಶಿವಕುಮಾರ ಸ್ವಾಮೀಜಿ ಪ್ರತಿಮೆ ನಿರ್ಮಾಣ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಪೂಜ್ಯ ಡಾ. ಶಿವಕುಮಾರ ಮಹಾಸ್ವಾಮೀಜಿಗಳ 118ನೇ ಜನ್ಮ ದಿನದ ಅಂಗವಾಗಿ ಭಾವಚಿತ್ರಕ್ಕೆ ವಿವಿಧ ಹೂಗಳಿಂದ ಅಲಂಕರಿಸಿ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.

ವೀರಶೈವ ಸಂಘದ ಅರೇಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ತೇಜ್ ಪಾಲ ಮಾತನಾಡಿ, ತ್ರಿವಿಧ ದಾಸೋಹದ ಮೂಲಕ ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಸರ್ವರಿಗೂ ವಿದ್ಯೆ, ವಸತಿ, ದಾಸೋಹ ನೀಡಿದ ಹೆಗ್ಗಳಿಕೆಗೆ ಸಿದ್ಧಗಂಗಾ ಪೂಜ್ಯರು ಪಾತ್ರರಾಗಿದ್ದಾರೆ. ಅವರ ಆದರ್ಶ ಬದುಕು ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಅರೇಹಳ್ಳಿಯಲ್ಲಿ ಈಗಾಗಲೇ ಡಾ. ಶಿವಕುಮಾರ ಸ್ವಾಮೀಜಿ ವೃತ್ತವನ್ನು ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ಶಿವಕುಮಾರ ಸ್ವಾಮೀಜಿಗಳ ಪ್ರತಿಮೆಯನ್ನು ವೃತ್ತದಲ್ಲಿ ಪ್ರತಿಷ್ಠಾಪನೆ ಮಾಡುವ ಇಂಗಿತ ವ್ಯಕ್ತಪಡಿಸಿದರು. ಗೀತಾ ಶಿವರಾಜ್ ಮಾತನಾಡಿ, ಕಾಯಕ ಮತ್ತು ದಾಸೋಹಕ್ಕೆ ಪ್ರಾಶಸ್ತ್ಯ ನೀಡಿದಂತಹ ಸಿದ್ಧಗಂಗೆ ಸುಕ್ಷೇತ್ರವಾಗಿದೆ. ಸಿದ್ಧಗಂಗಾ ಪೂಜ್ಯರ ದೇಹ ಮಾತ್ರ ಈ ಲೋಕವನ್ನು ತ್ಯಜಿಸಿರಬಹುದು ಆದರೆ ಅವರ ಜಂಗಮ ಸ್ವರೂಪಿ ಇನ್ನೂ ಕೂಡ ಜೀವಂತವಾಗಿದೆ ಎಂದರು.

ಜೆಡಿಎಸ್ ಮುಖಂಡ ನಟರಾಜ್, ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕರಾದ ಪ್ರಕಾಶ್ ಮತ್ತು ಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷ ವಿಂಪು ಸಂತೋಷ, ಮಹಿಳಾ ಸಂಘದ ಸದಸ್ಯರಾದ ಮಂಜುಳಾ, ರತ್ನ, ಜ್ಯೋತಿ ಹಾಗೂ ಮುಖಂಡರಾದ ಎ. ಡಿ ಚಂದ್ರು, ಗಂಗಾಧರ್, ಸಂತೋಷ ತ್ಯಾಗರಾಜ್, ಗಂಗಣ್ಣ, ಮುಜುಬತ್ ರೆಹಮಾನ್ ಇನ್ನು ಮುಂತಾದವರು ಭಾಗವಹಿಸಿದ್ದರು.

Share this article