ಕನ್ನಡಪ್ರ ವಾರ್ತೆ ಸಿದ್ದಾಪುರ
ಹಾಡಹಗಲೇ ಕಾಡಾನೆಗಳ ಹಿಂಡು ಮುಖ್ಯರಸ್ತೆಗಾಗಿ ಸಂಚರಿಸುವ ಮೂಲಕ ಸಾರ್ವಜನಿಕರಿಗೆ ಭೀತಿ ಹುಟ್ಟಿಸಿದೆ.ಕೊಡಗು ಜಿಲ್ಲೆಯ ಸಿದ್ದಾಪುರದ ವಿರಾಜಪೇಟೆ ಮುಖ್ಯ ರಸ್ತೆಯ ಇಂಜಿಲಗೆರೆ ಸಮೀಪದಲ್ಲಿ ಗುಹ್ಯ ಗ್ರಾಮದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಮರಿ ಆನೆಗಳು ಸೇರಿದಂತೆ ಸುಮಾರು 25ಕ್ಕೂ ಅಧಿಕ ಕಾಡಾನೆಗಳ ಹಿಂಡು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ರಸ್ತೆ ದಾಟುವ ದೃಶ್ಯ ಮಂಗಳ ವಾರ ಸಂಜೆ ಕಂಡುಬಂದಿದೆ.
ಕಾಡಾನೆಗಳು ರಸ್ತೆ ದಾಟುತ್ತಿರುವುದರಿಂದ ಕೆಲ ಸಮಯ ವಾಹನಗಳು ಮುಖ್ಯ ರಸ್ತೆಯಲ್ಲಿಯೆ ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಗಿ ಜನರಲ್ಲಿ ಆತಂಕ ಮೂಡಿಸಿತು. ಆಹಾರ ಅರಸಿಕೊಂಡು ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿರುವ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂದಲೆ ನಡೆಸುತ್ತಿವೆ. ಈ ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಂಗಳವಾರ ಸಂಜೆ ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಲು ಪ್ರಯತ್ನಿಸಿದರು. ಆದರೆ ಕಾಡಾನೆಗಳು ಬೇರೆ ಬೇರೆ ಗುಂಪುಗಳಾಗಿ ಸಿದ್ದಾಪುರದ ಇಂಜಲಗೆರೆಯ ಮಂಡೆಪಂಡ ಪ್ರವೀಣ್ ಬೋಪಯ್ಯ ಎಂಬವರ ಕಾಫಿ ತೋಟದೊಳಗೆ ನುಸುಳಿದವು.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರವೀಣ್ ಕಾಡಾನೆಗಳು ಕಾಫಿ ತೋಟದೊಳಗೆ ಬೀಡು ಬಿಟ್ಟು ದಾಂದಲೆ ನಡೆಸುತ್ತಿದೆ ಕೂಡಲೇ ಉಪಟಳ ನೀಡುತ್ತಿರುವ ಕಾಡಾನೆ ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಕಾಫಿ ತೋಟದಲ್ಲಿ ಕಾಡಾನೆ ಸಾವು:ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಬಿಸಿ ಕಾಫಿ ತೋಟದಲ್ಲಿ ಆಹಾರ ಅರಸಿ ಬಂದ ಕಾಡಾನೆ ಕಳೇಬರ ಬುಧವಾರ ಪತ್ತೆಯಾಗಿದೆ.
ಇದು ಅಂದಾಜು 16-20ರ ಹರೆಯದ ಗಂಡಾನೆಯಾಗಿದೆ. ಆನೆ ವಿದ್ಯುತ್ ಕಂಬಕ್ಕೆ ಮೈ ಉಜ್ಜಿದ ಸಂದರ್ಭ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಜೀವಂತ ವಿದ್ಯುತ್ ಹರಿದ ಪರಿಣಾಮ ಆನೆಗೆ ಸ್ಪರ್ಶಗೊಂಡಿದ್ದು ಸ್ಥಳಲ್ಲೇ ಪ್ರಾಣ ಬಿಟ್ಟಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಯಿತು.ಸ್ಥಳಕ್ಕೆ ಅರಣ್ಯ ಉಪಸಂರಕ್ಷಣಾಧಿಕಾರಿ ಡಿ.ಎಸ್.ಬಾಸ್ಕರ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್, ಅರಣ್ಯ ಕ್ಷಿಪ್ರ ಕಾರ್ಯಾಚರಣೆ ಪಡೆಯ ದೇವಯ್ಯ ಹಾಗೂ ಸಿಬ್ಬಂದಿ ಆಗಮಿಸಿದ್ದರು.ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.