ಸಂಡೂರು: ಶುಕ್ರವಾರ ಶಿವೈಕ್ಯರಾದ ಸಂಡೂರು ತಾಲೂಕಿನ ಯಶವಂತನಗರದ ಶ್ರೀ ಸಿದ್ಧರಾಮೇಶ್ವರ ಸಂಸ್ಥಾನ ವಿರಕ್ತಮಠದ ಶ್ರೀ ಸಿದ್ಧರಾಮ ಸ್ವಾಮೀಜಿಯವರ ಶಿವೈಕ್ಯ ಸಂಸ್ಕಾರ ಕ್ರಿಯೆಯನ್ನು ಶ್ರೀಮಠದ ಗದ್ದುಗೆ ಇರುವ ಮೀನುಗೊಳ್ಳದಲ್ಲಿ ಶನಿವಾರ ನೆರವೇರಿಸಲಾಯಿತು.ಸ್ವಾಮೀಜಿಯವರ ಅಂತಿಮ ಯಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ವಿವಿಧ ಮಠಾಧೀಶರು, ಮುಖಂಡರಾದ ಬಂಗಾರು ಹನುಮಂತು, ಚಿತ್ರಿಕಿ ಮೃತ್ಯುಂಜಯಪ್ಪ, ಚಿತ್ರಿಕಿ ಈಶಣ್ಣ, ಅಕ್ಕನ ಬಳಗದ ಸದಸ್ಯರು ಭಾಗವಹಿಸಿದ್ದರು.
ಗದುಗಿನ ತೋಂಟದಾರ್ಯ ಸಂಸ್ಥಾನ ಮಠದ ಪೀಠಾಧಿಪತಿ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಜನತೆಯಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿ ಬೆಳೆಸಿ, ಎಲ್ಲ ಜಾತಿ-ಜನಾಂಗದವರನ್ನು ಸಮಾನವಾಗಿ ಕಂಡು ಯಶವಂತನಗರ ಗ್ರಾಮವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಿದವರು ಶ್ರೀ ಸಿದ್ಧರಾಮ ಸ್ವಾಮೀಜಿ ಎಂದು ಹೇಳಿದರು.
ಸಂಸದ ಈ. ತುಕಾರಾಂ ಅವರು ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ, ಶ್ರೀ ಸಿದ್ಧರಾಮ ಸ್ವಾಮೀಜಿ ಅವರು ಯಶವಂತನಗರ ಮಠವನ್ನು ೨ನೇ ಸಿದ್ಧಗಂಗಾ ಮಠದ ರೀತಿಯಲ್ಲಿ ಬೆಳೆಸಿದ್ದರು. ಸರ್ವ ಧರ್ಮದ ಸಮನ್ವಯ ಬೋಧಿಸಿ, ಬಸವಣ್ಣನವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದಿದ್ದರು ಎಂದು ಹೇಳಿದರು.ಸಂಡೂರಿನ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಶ್ರದ್ಧಾಂಜಲಿ ಸಲ್ಲಿಸಿ, ಶ್ರೀ ಸಿದ್ಧರಾಮ ಸ್ವಾಮೀಜಿಗಳು ತಮ್ಮ ೧೦-೧೨ ವರ್ಷಗಳ ಅವಧಿಯಲ್ಲಿ ಶ್ರೀ ಸಿದ್ಧರಾಮೇಶ್ವರ ಸಂಸ್ಥಾನ ಮಠವನ್ನು ಜಿಲ್ಲೆಯಲ್ಲಿಯೇ ಗುರುತಿಸುವಂತಹ ಕೆಲಸ ಮಾಡಿದರು. ಮಠದ ಜೀರ್ಣೋದ್ಧಾರ ಮಾಡಿಸಿ, ಶಿಲಾಮಂಟಪ ನಿರ್ಮಿಸಿದರು. ಅವರು ಹಾಕಿಕೊಂಡ ಯೋಜನೆಗಳನ್ನು ಸಾಕಾರಗೊಳಿಸಲು ಶ್ರಮಿಸೋಣ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತರಿಗೆ ಗ್ರಾಮದ ಮುಸ್ಲಿಂ ಸಮಾಜದವರು ಮಜ್ಜಿಗೆ ಹಾಗೂ ಪಾನಕ ನೀಡಿದರು.