ಕನಕಪುರ-ಮಳವಳ್ಳಿ ರೈಲ್ವೆ ಮಾರ್ಗಕ್ಕೆ ಸಿದ್ದರಾಮಯ್ಯ ತಡೆ: ವಿ.ಸೋಮಣ್ಣ

KannadaprabhaNewsNetwork |  
Published : Apr 10, 2026, 01:15 AM IST
೯ಕೆಎಂಎನ್‌ಡಿ-೩ಬೆಂಗಳೂರಿನಿಂದ ಮೈಸೂರುವರೆಗೆ ವಿಶೇಷ ರೈಲಿನಲ್ಲಿ ಕೇಂದ್ರ ಭಾರೀ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯಸಚಿವ ವಿ.ಸೋಮಣ್ಣ ವಿಂಡೋ ಟ್ರೇಲಿಂಗ್ ನಡೆಸಿದರು. | Kannada Prabha

ಸಾರಾಂಶ

ನಾವು ಅಧಿಕಾರಕ್ಕೆ ಬಂದ ತಕ್ಷಣವೇ ಹೆಜ್ಜಾಲ-ಕನಕಪುರ-ಮಳವಳ್ಳಿ-ಚಾಮರಾಜನಗರ ರೈಲ್ವೆ ಮಾರ್ಗದ ಯೋಜನೆಯನ್ನು ಕೈಗೆತ್ತಿಕೊಂಡೆವು. ಇದು ಅಗತ್ಯದ ಯೋಜನೆಯಾಗಿತ್ತು. ಕೇಂದ್ರ ಸರ್ಕಾರ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಆದರೆ, ರಾಜ್ಯದ ಪಾಲಿನ ಹಣ ಬಿಡುಗಡೆಗೆ ಕಾಂಗ್ರೆಸ್ ಸರ್ಕಾರ ಸಿದ್ಧವಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯೋಜನೆಗೆ ರಾಜ್ಯದಿಂದ ಹಣಕಾಸು ಒದಗಿಸಲಾಗುವುದಿಲ್ಲ. ಈ ಯೋಜನೆಯನ್ನು ಕೈಬಿಡುವಂತೆ ಪತ್ರ ಬರೆದಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗಕ್ಕೆ ತಡೆಯೊಡ್ಡಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ. ನಮ್ಮತ್ರ ದುಡ್ಡಿಲ್ಲ, ಈ ಯೋಜನೆಯನ್ನು ಕೈಬಿಡುವಂತೆ ಪತ್ರ ಬರೆದಿದ್ದರು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಗಂಭೀರ ಆರೋಪ ಮಾಡಿದರು.

ಗುರುವಾರ ಬೆಂಗಳೂರಿನಿಂದ ಮೈಸೂರುವರೆಗೆ ಕೇಂದ್ರ ಭಾರೀ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ವಿಂಡೋ ಟ್ರೇಲಿಂಗ್ ಪರಿವೀಕ್ಷಣೆ ನಡೆಸುವ ವೇಳೆ ನಗರದ ರೈಲು ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾವು ಅಧಿಕಾರಕ್ಕೆ ಬಂದ ತಕ್ಷಣವೇ ಹೆಜ್ಜಾಲ-ಕನಕಪುರ-ಮಳವಳ್ಳಿ-ಚಾಮರಾಜನಗರ ರೈಲ್ವೆ ಮಾರ್ಗದ ಯೋಜನೆಯನ್ನು ಕೈಗೆತ್ತಿಕೊಂಡೆವು. ಇದು ಅಗತ್ಯದ ಯೋಜನೆಯಾಗಿತ್ತು. ಕೇಂದ್ರ ಸರ್ಕಾರ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಆದರೆ, ರಾಜ್ಯದ ಪಾಲಿನ ಹಣ ಬಿಡುಗಡೆಗೆ ಕಾಂಗ್ರೆಸ್ ಸರ್ಕಾರ ಸಿದ್ಧವಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯೋಜನೆಗೆ ರಾಜ್ಯದಿಂದ ಹಣಕಾಸು ಒದಗಿಸಲಾಗುವುದಿಲ್ಲ. ಈ ಯೋಜನೆಯನ್ನು ಕೈಬಿಡುವಂತೆ ಪತ್ರ ಬರೆದಿದ್ದರು. ಅದಕ್ಕಾಗಿ ಯೋಜನೆ ಅನುಷ್ಠಾನಕ್ಕೆ ಬರಲಿಲ್ಲ ಎಂದು ದೂಷಣೆ ಮಾಡಿದರು.

ರೈಲ್ವೆ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಇರುವ ಸೌಲಭ್ಯಗಳು, ರೈಲ್ವೆ ಮಾರ್ಗಗಳಲ್ಲಿರುವ ಸಮಸ್ಯೆಗಳು, ತೊಂದರೆಗಳು, ರೈಲ್ವೆ ಮೇಲ್ಸೇತುವೆ, ಕೆಳ ಸೇತುವೆಗಳ ನಿರ್ಮಾಣ ಕುರಿತಂತೆ ಪರಿಶೀಲನೆ ನಡೆಸಲಾಗುತ್ತಿದೆ. ಸಾಮಾನ್ಯ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ಜರುಗಿಸುವ ಭರವಸೆ ನೀಡಿದರು.

ಬೆಂಗಳೂರು-ಮೈಸೂರು ನಡುವೆ ಮೆಮೋ ರೈಲು ನೀಡುವಂತೆ ಬೇಡಿಕೆ ಇದೆ. ಇದರ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು. ಈ ಕುರಿತಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೂ ಚರ್ಚಿಸಲಾಗಿದೆ. ಅವರು ನಿಮ್ಮ ಕನಸು ನನಸು ಮಾಡುವರು. ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ನಾನೂ ಅವರ ಜೊತೆಯಾಗಿರುತ್ತೇನೆ ಎಂದರು.

ವಿಶೇಷ ರೈಲಿನಲ್ಲಿ ಆಗಮನ:

ಬೆಂಗಳೂರಿನಿಂದ ವಿಂಡೋ ಟ್ರೇಲಿಂಗ್ ಪರಿವೀಕ್ಷಣೆ ನಡೆಸುತ್ತಾ ವಿಶೇಷ ರೈಲಿನಲ್ಲಿ ಕೇಂದ್ರ ಭಾರೀ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯಸಚಿವ ವಿ.ಸೋಮಣ್ಣ ಆಗಮಿಸಿದರು. ಮೈಸೂರು-ಕೊಡಗು ಸಂಸದ ಯದುವೀರ್, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜೆಡಿಎಸ್ ಮುಖಂಡ ಬಿ.ರಾಮಚಂದ್ರು, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ ಹಾಗೂ ದಕ್ಷಿಣ ನೈರುತ್ಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಸೇರಿ ರೈಲ್ವೆ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಪರಿವೀಕ್ಷಣೆ ವೇಳೆಮಂಡ್ಯ ರೈಲ್ವೆ ನಿಲ್ದಾಣದ ಆಧುನೀಕರಣ, ಅಗತ್ಯ ಅನುದಾನ, ಸೌಲಭ್ಯ, ರೈಲ್ವೆ ಮಾರ್ಗಗಳ ಪರಿಶೀಲನೆ, ಅಧಿಕಾರಿಗಳು, ಸ್ಥಳೀಯರ ಜೊತೆ ಸಮಾಲೋಚನೆ ನಡೆಸಿದರು.

ಕೇಂದ್ರ ಸಚಿವರಿಗೆ ಅದ್ಧೂರಿ ಸ್ವಾಗತ:

ಮಂಡ್ಯ ರೈಲು ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿ.ಸೋಮಣ್ಣ ಅವರಿಗೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಹೂಗುಚ್ಛ, ಬೃಹತ್ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಕೋರಿದರು.

ನೆಚ್ಚಿನ ನಾಯಕರನ್ನು ನೋಡಲು ಕಾರ್ಯಕರ್ತರು, ಅಭಿಮಾನಿಗಳು ನೂಕುನುಗ್ಗಲು ನಡೆಸಿದರು. ಕಾರ್ಯಕರ್ತರು, ಅಭಿಮಾನಿಗಳ ಅಭಿಮಾನಕ್ಕೆ ಕೇಂದ್ರ ಸಚಿವರು ಹೈರಾಣಾದರು. ವಿ.ಸೋಮಣ್ಣ ಅವರು ರೈಲು ನಿಲ್ದಾಣದ ಗೇಟ್ ಬಳಿ ಬಂದರಾದರೂ ತಳ್ಳಾಟ-ನೂಕಾಟ ನಡೆದಿದ್ದರಿಂದ ವಾಪಸ್ ಬೋಗಿಗೆ ತೆರಳಿದರು. ರೈಲ್ವೆ ನಿಲ್ದಾಣ ವೀಕ್ಷಣೆ ಅರ್ಧಕ್ಕೆ ಮೊಟಕುಗೊಂಡಿತು. ಎಚ್.ಡಿ.ಕುಮಾರಸ್ವಾಮಿ ಅವರು ರೈಲಿನಿಂದ ಕೆಳಗಿಳಿಯಲೇ ಇಲ್ಲ. ನಂತರೂ ಕೇಂದ್ರ ಸಚಿವರಿಬ್ಬರು ಮಂಡ್ಯದಿಂದ ಮೈಸೂರಿನತ್ತ ಪ್ರಯಾಣ ಮುಂದುವರೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಥೋತ್ಸವದ ಯಶಸ್ಸಿಗೆ ಸಹಕರಿಸಿದವರಿಗೆ ಮಾಜಿ ಧರ್ಮದರ್ಶಿ ಧನ್ಯವಾದ
ಜನಸ್ಪಂದನಾ ಸಭೆ ಹಿನ್ನೆಲೆ ಪೂರ್ವಸಿದ್ಧತಾ ಸಭೆ ನಡೆಸಿದ ಡೀಸಿ