ಸಿದ್ದರಾಮಯ್ಯ ಒಡಕು ಗ್ರಾಮೋಫೋನ್‌!

KannadaprabhaNewsNetwork | Published : Apr 19, 2024 1:10 AM

ಸಾರಾಂಶ

ರಾಜ್ಯ ಸರ್ಕಾರ ಅಭಿವೃದ್ಧಿ ಮಾಡದೇ ತನ್ನ ವೈಫಲ್ಯ ಮರೆಮಾಚಲು ವಿನಾಕಾರಣ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೇಳಿಕೊಳ್ಳಲು ಯಾವುದೇ ಸಾಧನೆಗಳಿಲ್ಲ.

ಹುಬ್ಬಳ್ಳಿ:

ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಅನುದಾನದ ಅಂಕಿ-ಅಂಶಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಧೈರ್ಯವಿಲ್ಲ. ಇದೀಗ ವಿನಾಕಾರಣ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಹೇಳಿದ್ದನ್ನೇ ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಒಡಕು ಗ್ರಾಮೋಫೋನ್‌ ಆಗಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ವ್ಯಂಗ್ಯವಾಡಿದರು

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಭಿವೃದ್ಧಿ ಮಾಡದೇ ತನ್ನ ವೈಫಲ್ಯ ಮರೆಮಾಚಲು ವಿನಾಕಾರಣ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೇಳಿಕೊಳ್ಳಲು ಯಾವುದೇ ಸಾಧನೆಗಳಿಲ್ಲ, ಅದರಲ್ಲೂ 2004ರಿಂದ 2014ರ ಯುಪಿಎ ಸರ್ಕಾರದಲ್ಲಿ ಸಾಧನೆಗಳೇ ಇಲ್ಲ. ಹೀಗಾಗಿ ಹೇಳಿದ್ದನ್ನೇ ಹೇಳುವ ಸಿದ್ದರಾಮಯ್ಯ ಒಡೆದ ಗ್ರಾಮೋಪೋನ್‌ನಂತೆ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಅಭ್ಯರ್ಥಿಗಳು ಸಿಗದೇ ಲೋಕಸಭೆ ಚುನಾವಣೆ ಕಣದಲ್ಲಿ ಕಾಂಗ್ರೆಸ್‌ನ ಬಹುತೇಕ ಅಭ್ಯರ್ಥಿಗಳು ಕುಟುಂಬ ರಾಜಕಾರಣದ ಮಕ್ಕಳೇ ಎಂದು ಟೀಕಿಸಿದ ಅವರು, ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದು ಗೊತ್ತಾದ ಮೇಲೆಯೂ ಬರ ಪರಿಹಾರ ಕುರಿತಾಗಿ ಕೇಂದ್ರಕ್ಕೆ ತಡವಾಗಿ ವರದಿ ಕೊಟ್ಟಿದೆ. ಹಾಗಾಗಿ ಕೇಂದ್ರದಿಂದ ಬರ ಪರಿಹಾರ ಹಂಚಿಕೆಯ ಪ್ರಕ್ರಿಯೆ ವಿಳಂಬವಾಗಿದೆ ಎಂದು ಸಮರ್ಥಿಸಿಕೊಂಡರು. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆಯಿಂದ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ಬೆಲ್ಲದ, ಶ್ರೀಗಳ ರಾಜಕೀಯ ಹೇಳಿಕೆ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದರು.

ಕೊಪ್ಪಳದ ಮಾಜಿ ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್‌ಗೆ ಹೋಗಬಾರದಿತ್ತು. ಅವರನ್ನು ಮನವೊಲಿಸುವ ಸಾಕಷ್ಟು ಪ್ರಯತ್ನಗಳಾಗಿದ್ದವು. ಕಾಂಗ್ರೆಸ್‌ನಲ್ಲಿ ಅವರಿಗೆ ಭವಿಷ್ಯ ಇಲ್ಲ. ಬಂಡಾಯ ಅಭ್ಯಥಿರ್ಯಾಗಿ ಸ್ಪರ್ಧಿಸಲು ಮುಂದಾಗಿರುವ ಕೆ.ಎಸ್‌. ಈಶ್ವರಪ್ಪ ಅವರಿಗೆ ಶೀಘ್ರದಲ್ಲೇ ತಮ್ಮ ತಪ್ಪಿನ ಅರಿವು ಆಗುತ್ತದೆ ಎಂದು ಹೇಳಿದರು.

ಟ್ಯಾಂಕರ್‌ ಲಾಬಿ:

ರಾಜ್ಯ ಸರ್ಕಾರ ಮದ್ಯ, ಮರಳು ಲಾಬಿಯಂತೆಯೇ ಇದೀಗ ನೀರಿನ ಕೃತಕ ಅಭಾವ ಸೃಷ್ಟಿಸಿ ಟ್ಯಾಂಕರ್‌ ನೀರಿನ ಲಾಬಿ ನಡೆಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ನೀರಿನ ಅಭಾವ ಹೆಚ್ಚಾಗಿದೆ. ಇದೊಂದು ಟ್ಯಾಂಕರ್‌ ಲಾಬಿಯಾಗಿದೆ. ಖಾಸಗಿಯವರಿಗೆ ಕುಡಿಯುವ ನೀರು ಸಿಗುತ್ತದೆ. ಸರ್ಕಾರಕ್ಕೆ ಜನರಿಗೆ ಪೂರೈಸಲು ನೀರು ಇಲ್ಲ, ರಾಜಕಾರಣಿಗಳು ಜಲಮಂಡಳಿಯ ಅಧಿಕಾರಿಗಳೊಂದಿಗೆ ಕೈಜೋಡಿಸಿ ನೀರಿನ ಕೃತಕ ಅಭಾವ ಸೃಷ್ಟಿಸಿ, ಟ್ಯಾಂಕರ್‌ ಮೂಲಕ ನೀರು ಮಾರಾಟ ಮಾಡಿ ಹಣ ಗಳಿಕೆಯ ಕೆಟ್ಟಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಕೇಂದ್ರದ ಕೆಲಸ:

ಕೇಂದ್ರ ಸರ್ಕಾರ ಹತ್ತು ವರ್ಷಗಳಲ್ಲಿ ರಾಜ್ಯಕ್ಕೆ 3 ಲಕ್ಷ ಶೌಚಾಲಯ, 40 ಸಾವಿರ ಉಚಿತ ಗ್ಯಾಸ್‌, 7 ಸಾವಿರ ಕಿಮೀ ಗ್ರಾಮೀಣ ರಸ್ತೆ, 49 ಲಕ್ಷ ರೈತರಿಗೆ ಕಿಸಾನ್‌ ಸಮ್ಮಾನ್‌, 4.49 ಲಕ್ಷ ಮನೆ ನಿರ್ಮಿಸಿದೆ. ಅಲ್ಲದೇ 4 ಕೋಟಿ ಜನರಿಗೆ ಉಚಿತ ರೇಷನ್‌ ನೀಡುತ್ತಿದೆ. ₹ 44.87 ಸಾವಿರ ಕೋಟಿ ವೆಚ್ಚದ ಹೆದ್ದಾರಿ ಕಾಮಗಾರಿ ಕೈಗೊಂಡಿದೆ. ಇದಲ್ಲದೇ ಹಲವಾರು ಅಭಿವೃದ್ಧಿ ಮಾಡಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ ಹಾಗೂ ಸತೀಶ ಹಾನಗಲ್‌ ಇದ್ದರು.

Share this article