-ವಿಪ ಸದಸ್ಯ ಕೆ.ಎಸ್.ನವೀನ್ ಆರೋಪ । ಚಿತ್ರದುರ್ಗ ಜಿಲ್ಲೆ ಬಿಜೆಪಿ ಕಚೇರಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಕೋಟ್ಯಂತರ ರುಪಾಯಿ ದೋಚಿಸುವ ಸಿಎಂ ಸಿದ್ದರಾಮಯ್ಯಗೆ ವಾಲ್ಮೀಕಿ ಜಯಂತಿ ಆಚರಿಸುವ ನೈತಿಕತೆ ಇಲ್ಲವೆಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಆರೋಪಿಸಿದರು.ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಹಗರಣಗಳ ಡಾನ್ ಎಂದು ವಾಗ್ದಾಳಿ ನಡೆಸಿದರು. ವಾಲ್ಮೀಕಿ ರಚಿಸಿರುವ ರಾಮಾಯಣವು ನಮ್ಮ ದೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದೆ. ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವ ಬಿಜೆಪಿ ಸರ್ಕಾರ ಶ್ರೀವಾಲ್ಮೀಕಿ ಜಯಂತಿ ಆಚರಣೆಯನ್ನು ಜಾರಿಗೆ ತಂದಿತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್‌ಟಿ ವರ್ಗದ ಜನರಿಗೆ ತಮ್ಮದೇ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಏಳು ತಿಂಗಳಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರು. ಹಗರಣ ಮಾಡಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಸರ್ಕಾರ ವಾಲ್ಮೀಕಿ ಜಯಂತಿ ಆಚರಿಸುವ ನೈತಿಕತೆ ಕಳೆದುಕೊಂಡಿದ್ದಾರೆ. ಎಸ್‌ಟಿ ಸಮುದಾಯದ ವಿದ್ಯಾರ್ಥಿಗಳ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಸಿದ್ದರಾಮಯ್ಯ ಆ ಸಮುದಾಯದ ಯುವಕರು, ವಿದ್ಯಾರ್ಥಿಗಳಲ್ಲಿ ಕ್ಷಮೆ ಕೇಳಬೇಕಿತ್ತು. ಸರ್ಕಾರದ ಹಣ ಬಳಸಿಕೊಂಡು ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ನವೀನ್ ಆರೋಪಿಸಿದರು.
ವಾಲ್ಮೀಕಿ ಹಗರಣದಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಲಾಯಿತು. ಮೂಡಾ ಹಗರಣದಲ್ಲಿ ಸಿದ್ದರಾಮಯ್ಯನವರು ನೇರವಾಗಿ ಕಾರಣರಿದ್ದರೂ ಕೇವಲ ಅಧಿಕಾರಿಗಳನ್ನು ಮಾತ್ರ ಅಮಾನತ್ತು ಗೊಳಿಸಲಾಗಿದೆ. ಸಿದ್ದರಾಮಯ್ಯರವರೇ ಸದನದಲ್ಲಿ 187 ಕೋಟಿ ಅಲ್ಲ 89 ಕೋಟಿ ರು. ಎಂದು ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲಾ ಹಗರಣ ಮಾಡಿರೋ ಸಿದ್ದರಾಮಯ್ಯನವರೇ ಈ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಹೇಗೆ ಭಾಗವಹಿಸುತ್ತೀರಿ? ಎಂದು ಪ್ರಶ್ನಿಸಿದರು.
----------------
--------