ಸಿದ್ದರಾಮಯ್ಯ ಮಹಾ ಮೋಸಗಾರ

KannadaprabhaNewsNetwork |  
Published : Dec 17, 2023, 01:45 AM IST
16ಬಿಕೆಟಿ9, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು) | Kannada Prabha

ಸಾರಾಂಶ

ಸಿದ್ದರಾಮಯ್ಯ ಮಹಾ ಮೋಸಗಾರ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿನ ಅತೀ ದೊಡ್ಡ ಮೋಸಗಾರ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಗಂಭೀರ ಆರೋಪ ಮಾಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಹಿಂದಿನಿಂದಲೂ ಬಡ್ಡಿರಹಿತ ಸಾಲವನ್ನೇ ನೀಡಲಾಗುತ್ತಿದ್ದು, ಬಾಗಲಕೋಟೆ ಡಿಸಿಸಿ ಬ್ಯಾಂಕ್‌ನಲ್ಲೇ 2.58 ಲಕ್ಷ ರೈತರಿಗೆ ₹950 ಕೋಟಿಗಳ ಬಡ್ಡಿ ರಹಿತ ಸಾಲ ವಿತರಿಸಲಾಗಿದೆ. 8400 ರೈತರಿಗೆ ₹250 ಕೋಟಿಗಳ ಮಧ್ಯಮಾವಧಿ ಸಾಲ ವಿತರಿಸಲಾಗಿದ್ದು, ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿರುವುದಾಗಿ ಸುಳ್ಳು ಹೇಳಿರುವ ಸಿದ್ದರಾಮಯ್ಯ ಮಹಾಮೋಸಗಾರ ಎಂದು ಜರಿದರು.

ರೈತರ ₹2 ಲಕ್ಷಗಳವರೆಗಿನ ಸಾಲಮನ್ನಾ ಮಾಡಬೇಕೆಂಬುವುದು ನಮ್ಮ ಒತ್ತಾಯವಾಗಿದೆ. ಆದರೆ, ಇದ್ಯಾವುದಕ್ಕೂ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಅಧಿವೇಶನದಲ್ಲಿ ಉತ್ತರ ಕರ್ನಾಟಕಕ್ಕೆ ಘೋಷಿಸಿರುವ ಯೋಜನೆಗಳೆಲ್ಲವೂ ಪೊಳ್ಳು ಭರವಸೆಗಳಾಗಿವೆ ಎಂದರು.

ಬಂದ್‌ ಆಗುತ್ತಿರುವ ಕೈಗಾರಿಕೆಗಳು:

ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲಿ ಕೈಗಾರಿಕೆ ಕ್ಲಸ್ಟರ್‌ಗಳನ್ನು ಮಾಡುವುದಾಗಿ ಹೇಳಿದ್ದಾರೆ. ಬಜೆಟ್‌ನಲ್ಲಿ ಏನೂ ಮೀಸಲಿಡದೇ ಇದ್ಯಾವುದು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ದುರುಳ ನೀತಿಯಿಂದಾಗಿ ಇರುವ ಕೈಗಾರಿಕೆಗಳು ಸಹ ಕದ ಮುಚ್ಚುತ್ತಿದ್ದು, ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಯುಕೆಪಿಗೆ ವಿಚಾರದಲ್ಲೂ ಮೋಸ:

ಕಳೆದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಉತ್ತರ ಕರ್ನಾಟಕದ ನೀರಾವರಿ, ಮೂಲಸೌಕರ್ಯ, ಶಿಕ್ಷಣವೂ ಸೇರಿದಂತೆ ವಿವಿಧ ಯೋಜನೆಗಳಿಗಾಗಿ ₹22 ಸಾವಿರ ಕೋಟಿಗಳ ಅನುದಾನ ಒದಗಿಸಿತ್ತು. ಅದು ಕೇವಲ ಘೋಷಣೆ ಆಗದೇ ಟೆಂಡರ್ ಪ್ರಕ್ರಿಯೆಯೂ ನಡೆದಿತ್ತು. ನಾವು ಈ ಭಾಗದ ಕಲ್ಯಾಣಕ್ಕೆ ಒತ್ತು ನೀಡಿದ್ದೇವು. ಆದರೆ, ಈ ಸರ್ಕಾರ ಯಾವದನ್ನೂ ಮಾಡುತ್ತಿಲ್ಲ ಎಂದು ದೂರಿದರು.

₹10 ಸಾವಿರ ಕೋಟಿಗಳ ಅನುದಾನ ನೀಡಿ:

ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ನಿಯೋಗದ ಅಗತ್ಯವಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಪೈಕಿ ಮೂರು ರಾಜ್ಯಗಳ ವಾದ ಮಂಡನೆ ಮುಕ್ತಾಯಗೊಂಡಿದೆ. ಇನ್ನು ಒಂದು ರಾಜ್ಯದ ವಾದ ಬಾಕಿಯಿದ್ದು, ಮುಂದಿನ ಒಂದೆರಡು ತಿಂಗಳಲ್ಲಿ ಇತ್ಯರ್ಥವಾಗಲಿದೆ. ರಾಜ್ಯದ ಪರವಾಗಿ ತೀರ್ಪು ಬರುವ ಎಲ್ಲ ವಿಶ್ವಾಸವೂ ಇದ್ದು, ರಾಜ್ಯ ಸರ್ಕಾರ ತನ್ನ ಬದ್ಧತೆ ಪ್ರಕಟಿಸುವ ಕೆಲಸವನ್ನು ಮಾಡಲಿ. ಜಿಲ್ಲೆ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದರಿಂದ ಅವರು ಸಿಎಂ ಆಗಿದ್ದಾರೆ. ಜಿಲ್ಲೆಯ ಋಣ ತೀರಿಸಲು ಪ್ರಸಕ್ತ ಸಾಲಿನಲ್ಲೇ ಅವರು ₹10 ಸಾವಿರ ಕೋಟಿಗಳ ಅನುದಾನವನ್ನು ಯುಕೆಪಿಗಾಗಿ ಒದಗಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಉಪಸ್ಥಿತರಿದ್ದರು.

--ಬಾಕ್ಸ್‌....

ಪ್ರತಾಪ ವಿಶ್ವಾಸದಿಂದ ಪಾಸ್‌ ನೀಡಿದ್ದಾರೆ

ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಪಾಸ್ ಬಳಸಿ ಯುವಕರು ಸಂಸತ್‌ಗೆ ನುಗ್ಗಿದ ವಿಚಾರವಾಗಿ ಉತ್ತರಿಸಿದ ಅವರು, ಬಾಗಲಕೋಟೆಯವರೆಂದು ಹೇಳಿ ಯಾರೇ ಬಂದರೂ ಆತ್ಮೀಯತೆ, ವಿಶ್ವಾಸದಿಂದ ನಾನೂ ಪಾಸ್ ನೀಡುತ್ತಿದ್ದೆ. ಅದೇ ರೀತಿ ಪ್ರತಾಪ್ ಸಿಂಹ ನೀಡಿದ್ದಾರೆ. ಆದರೆ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಖಂಡಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ