ಕನ್ನಡಪ್ರಭವಾರ್ತೆ ತಿಪಟೂರು
ಸಿದ್ದರಾಮಯ್ಯ ಸರ್ಕಾರ ತುಘಲಕ್ ಸರ್ಕಾರವಾಗಿದೆ. ಸಿದ್ದರಾಮಯ್ಯ ಜಾತ್ಯತೀತ ಮುಖ್ಯಮಂತ್ರಿಯಾಗದೆ ಜಾತಿವಾದಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ಗಂಗರಾಜು ಆರೋಪಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ದ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ತಿಪಟೂರು ಭಾರತೀಯ ಜನತಾ ಪಕ್ಷದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ನಗರದ ಶ್ರೀ ಕೆಂಪಾಂಬ ದೇವಸ್ಥಾನದಿಂದ ದೊಡ್ಡಪೇಟೆ ಮಾರ್ಗವಾಗಿ ಮೆರವಣಿಗೆ ನಡೆಸಿ ಸಿಂಗ್ರಿ ನಂಜಪ್ಪ ವೃತ್ತದ ಬಳಿ ನೂರಾರು ಕಾರ್ಯಕರ್ತರು ಧರ್ಮಸ್ಥಳಕ್ಕೆ ಜಯವಾಗಲಿ ಎಂಬ ಘೋಷಿಸಿದರು. ಈ ವೇಳೆ ಮಾತನಾಡಿದ ಅವರು, ಯಾರದ್ದೋ ಮಾತಿಗೆ ಕಟ್ಟುಬಿದ್ದು ಎಸ್‌ಐಟಿ ರಚನೆ ಮಾಡಲಾಯಿತು. ಆದರೂ ಸಹ ಏನು ಸಿಗಲಿಲ್ಲ. ಈಗ ಸತ್ಯಗಳು ಹೊರಬರುತ್ತಿದ್ದು. ಈ ಹಿಂದೆ ತೋರಿಸಿದ ಆಸಕ್ತಿಯನ್ನು ಈಗಳು ತೋರಿಸಿ ರಾಜ್ಯದ ಜನರಿಗೆ ಸತ್ಯದ ದರ್ಶನ ಮಾಡಿಸಬೇಕು ಎಂದು ಆಗ್ರಹಿಸಿದ ಅವರು, ಬಿಜೆಪಿ ಕಾನೂನು ಧರ್ಮ ಸಂಸ್ಕಾರ ಮತ್ತು ಸಂಸ್ಕೃತಿಗೆ ಗೌರವ ಕೊಡುತ್ತದೆ ಧರ್ಮಕ್ಕೆ ಧಕ್ಕೆಯಾದಾಗ ಹೋರಾಟ ಮಾಡುತ್ತೇವೆ ಎಂದರು.
ಮಾಜಿ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಹಿಂದೂಗಳ ಪವಿತ್ರ ಸ್ಥಳವಾಗಿದ್ದು ದೇಶದಲ್ಲಿ ಕೋಟ್ಯಂತರ ಭಕ್ತರನ್ನು ಹೊಂದಿದೆ. ರಾಜ್ಯದಲ್ಲಿ ಜಾತ್ಯತೀತವಾಗಿ ಎಲ್ಲಾ ಧರ್ಮಿಯರಿಗೂ ಉಚಿತ ದಾಸೋಹ ಗ್ರಾಮೀಣ ಭಾಗದಲ್ಲಿ ಗ್ರಾಮೋದ್ಯೋಗ ಸಂಸ್ಥೆ ಮೂಲಕ ದೇವಸ್ಥಾನಗಳ ಜೀರ್ಣೋದ್ಧಾರ, ಎಲ್ಲಾ ವರ್ಗದ ಮಹಿಳೆಯರ ಸಬಲೀಕರಣದಂತಹ ಸಮಾಜೋದ್ಧಾರ ಕೆಲಸಗಳನ್ನು ವೀರೇಂದ್ರ ಹೆಗ್ಗಡೆಯವರು ಮಾಡುತ್ತಾ ಬರುತ್ತಿದ್ದು ಇವರ ವಿರುದ್ಧ ಅಪಪ್ರಚಾರ ಮಾಡುವುದನ್ನು ರಾಜ್ಯದ ಅಸಂಖ್ಯಾತ ಹಿಂದುಗಳು ಸಹಿಸುವುದಿಲ್ಲ. ಅದಕ್ಕಾಗಿಯೇ ರಾಜ್ಯದ್ಯಂತ ಬಿಜೆಪಿ ಪಕ್ಷವು ಧರ್ಮದ ಉಳಿವಿಗಾಗಿ ಧರ್ಮಯುದ್ಧ ಎಂಬ ಘೋಷಣೆಯೊಂದಿಗೆ ಹೋರಾಟ ನಡೆಸುತ್ತಿದೆ. ಕ್ಷೇತ್ರವನ್ನು ಅವಮಾನಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆ ವಿರುದ್ಧ ನಡೆದುಕೊಳ್ಳುತ್ತಿರುವ ಕೆಲ ಕಿಡಿಗೇಡಿಗಳು ಸುಳ್ಳು ಅಪಪ್ರಚಾರ ಮಾಡುತ್ತಿದ್ದು ಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಆಯರಹಳ್ಳಿ ಶಂಕರಪ್ಪ, ಹರಿಸಮುದ್ರ ಗಂಗಾಧರ್, ಮಾಜಿ ನಗರಸಭೆ ಅಧ್ಯಕ್ಷ ರಾಮ್ ಮೋಹನ್, ಶಶಿಕಿರಣ್, ಮಾಜಿ ನಗರಸಭಾ ಸದಸ್ಯ ಪ್ರಸನ್ನ ಕುಮಾರ್, ತರಕಾರಿ ಗಂಗಾಧರ್, ಮುಖಂಡ ಬಿಸಿಲೇಹಳ್ಳಿ ಜಗದೀಶ್, ನಗರಅಧ್ಯಕ್ಷ ಜಗದೀಶ್, ಗ್ರಾಮಾಂತರ ಅಧ್ಯಕ್ಷ ಸತೀಶ್ ಸೇರಿದಂತೆ ಧರ್ಮಸ್ಥಳ ಕ್ಷೇತ್ರದ ಅಭಿಮಾನಿಗಳು ಹಾಗೂ ಮಹಿಳೆಯರು ಭಾಗವಹಿಸಿದ್ದರು.