ಸಿದ್ದರಾಮಯ್ಯ ಅವರದ್ದು ಭಂಡತನದ ಪರಮಾವಧಿ : ಜೋಶಿ

KannadaprabhaNewsNetwork |  
Published : May 06, 2025, 12:24 AM ISTUpdated : May 06, 2025, 12:29 PM IST
Prahlad Joshi

ಸಾರಾಂಶ

ಸಿದ್ದರಾಮಯ್ಯ ಅವರದ್ದು ಅಯೋಗ್ಯತನ, ಭಂಡತನದ ಪರಮಾವಧಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.

ಹುಬ್ಬಳ್ಳಿ: ಸಿದ್ದರಾಮಯ್ಯ ಅವರದ್ದು ಅಯೋಗ್ಯತನ, ಭಂಡತನದ ಪರಮಾವಧಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾಕ್ಕೆ ಹೆದರಿ ಪ್ರಧಾನಮಂತ್ರಿ ಮಹದಾಯಿಗೆ ಪರವಾನಗಿ ಕೊಡಿಸುತ್ತಿಲ್ಲ ಎಂದು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದರು.

ಮಹದಾಯಿ ವಿಚಾರದಲ್ಲಿ ಕೇಂದ್ರ ನಿರ್ಲಕ್ಷ್ಯ ತೋರುತ್ತಿದೆ ಎಂದು ಸಿಎಂ ಪದೇ ಪದೇ ಆರೋಪಿಸುತ್ತಿದ್ದಾರೆ. 1970ರಿಂದ ಮಹದಾಯಿ ವಿಚಾರ ವೇಗ ಪಡೆದಿದೆ. ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ನಿಮ್ಮದೇ ಸರ್ಕಾರವಿತ್ತು. ಯಾಕೆ ನೀವು ಮಹದಾಯಿ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಲಿಲ್ಲ? ನಾವು ಮಹದಾಯಿಗೆ ಡಿಪಿಆರ್ ಕೊಡಿಸಿದ್ದೇವೆ. ಪರಿಸರ ಇಲಾಖೆ ಅನುಮತಿ ಕೂಡಾ ಕೊಡಿಸಿದ್ದೇವೆ. ಆದರೆ, ವನ್ಯಜೀವಿ ಮಂಡಳಿಯಿಂದ ಸಮಸ್ಯೆ ಎದುರಾಗಿದೆ. ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದ್ದು, ಗೋವಾ ಅರ್ಜಿ ಹಾಕಿದೆ ಎಂದರು.

ಸಿಎಂ ಸಿದ್ದರಾಮಯ್ಯ ಅವರಿಗೆ ನಾವೇನಾದರೂ ಪ್ರಶ್ನೆ ಮಾಡಿದರೆ ಅವರಿಗೆ ಮೆಣಸಿನಕಾಯಿ ನುರಿದಂತೆ ಆಗುತ್ತದೆ. ನಾವು ಕೆಪಿಎಸ್‌ಸಿ ಲೋಪದ ಬಗ್ಗೆ ಕೇಳಿದರೆ, ಅವರು ಮಹದಾಯಿ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಕೆಪಿಎಸ್‌ಸಿಯಲ್ಲಿ 80 ಪಶ್ನೆಗಳೇ ತಪ್ಪಿದ್ದವು. ಡಾ. ಬಿ.ಆರ್‌. ಅಂಬೇಡ್ಕರ್‌ ನಿಪ್ಪಾಣಿಗೆ ಭೇಟಿ ನೀಡಿ 100 ವರ್ಷವಾದ ಬಗೆಗೆ ಪತ್ರ ಬರೆದರೂ ಸಿಎಂ ಉತ್ತರಿಸಿಲ್ಲ. ನಮ್ಮ ಯಾವ ಪ್ರಶ್ನೆಗೂ ಸಿಎಂ ಉತ್ತರ ಕೊಡುತ್ತಿಲ್ಲ, ನಮ್ಮ ಪ್ರಶ್ನೆಗಳನ್ನು ಡೈವರ್ಟ್ ಮಾಡುತ್ತಲೇ 5 ವರ್ಷ ಜಾತ್ರೆ ಮಾಡುತ್ತಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ದೂರವಿಡಲು ಏನೇನೋ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಪಾಕ್‌ ವಿರುದ್ಧ ಸೂಕ್ತ ಕ್ರಮ: ಪಹಲ್ಗಾಂ ದಾಳಿ ಕುರಿತಂತೆ ಕೇಳಿದ ಪ್ರಶ್ನೆಗೆ, ಪಾಕಿಸ್ತಾನ ಬಗ್ಗೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೇಂದ್ರ ಕೈಗೊಳ್ಳಲಿದೆ. ಈಗಾಗಲೇ ಭಾರತ ಕೈಗೊಂಡಿರುವ ಕ್ರಮಗಳಿಂದ ಪಾಕಿಸ್ತಾನ ಒದ್ದಾಡುತ್ತಿದೆ. ಇದನ್ನು ಅಲ್ಲಿನ ಮಾಧ್ಯಮಗಳೇ ವರದಿ ಮಾಡಿವೆ. ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಖಂಡಿತ ಆಗುತ್ತದೆ. ಈ ವಿಷಯದಲ್ಲಿ ಕಾಲಮಿತಿ ಹಾಕಿ ಹೀಗೆ ಮಾಡಬೇಕು ಅಂತ ಹೇಳಲು ಆಗುವುದಿಲ್ಲ. ಪ್ರಧಾನಿ, ರಕ್ಷಣಾ ಮಂತ್ರಿಗಳು ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂದು ಸ್ಪಷ್ಟ ಭರವಸೆ ನೀಡಿದ್ದಾರೆ ಎಂದರು.

ಬಾಲಿಶತನದ ಹೇಳಿಕೆ ಬೇಡ: ಪಾಕಿಸ್ಥಾನಕ್ಕೆ ಬೆನ್ನಿಗೆ ಬಾಂಬ್‌ ಕಟ್ಟಿಕೊಂಡು ಹೋಗಿ ದಾಳಿ ಮಾಡುವೆ ಎಂಬ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿ, ಅವರು ಮೊದಲು ಶಾಂತ ರೀತಿಯಿಂದ ಇದ್ದರೆ ಸಾಕು. ಇಂತಹ ಬಾಲೀಶತನದ ಹೇಳಿಕೆ ನೀಡಬಾರದು. ನಿಮ್ಮ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ಮೊದಲು ನಿಲ್ಲಿಸಿ. ನಮ್ಮ ಸೈನಿಕರು ಏನು ಮಾಡಬೇಕೋ ಅದನ್ನು ಮಾಡುತ್ತಾರೆ ಎಂದರು.

PREV

Recommended Stories

ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ