ಹಳಿಯಾಳ; ಪ್ರಸಕ್ತ ಹಂಗಾಮಿನಲ್ಲಿ ಮಾವಿನಹಣ್ಣಿಗೆ ದಲ್ಲಾಳಿಗಳು ಮನಸೋಇಚ್ಛೆ ದರ ನಿಗದಿಪಡಿಸುತ್ತಿದ್ದಾರೆ. ಇದರಿಂದ ಮಾವು ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ.
ತಾಲೂಕಾಡಳಿತ ಮಧ್ಯ ಪ್ರವೇಶಿಸಿ ಮಾವು ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು. ಮಾವಿಗೆ ಉತ್ತಮ ಧಾರಣೆ ನೀಡಬೇಕೆಂಬ ಕೂಗು ರೈತ ಸಮುದಾಯದಿಂದ ಕೇಳಿ ಬರುತ್ತಿದೆ.ಏಪ್ರಿಲ್ 25ರಿಂದ ತಾಲೂಕಿನಲ್ಲಿ ಮಾವಿನ ಖರೀದಿ ವಹಿವಾಟು ಆರಂಭಗೊಂಡಿತ್ತು. ಆರಂಭದಲ್ಲಿ ಪ್ರತಿ ಕ್ವಿಂಟಲಿಗೆ ₹4000 ಧಾರಣೆ ಬಂದಿದ್ದರಿಂದ ಮಾವು ಬೆಳೆಗಾರರು ಶ್ರಮಕ್ಕೆ ಸಾಧಾರಣವಾದರೂ ಉತ್ತಮ ದರ ಬಂದಿದೆ ಎಂಬ ಖುಷಿಯಲ್ಲಿದ್ದರು. ಮಾವಿನ ದರ ಹೆಚ್ಚಾಗಿದ್ದರಿಂದ ಮಾರುಕಟ್ಟೆಗೆ ಮಾವಿನ ಆವಕ ಹೆಚ್ಚಾಗಲಾರಂಭಿಸಿತು.
ಮಾವು ಕಟಾವು ಮಾಡುವ ಭರದಲ್ಲಿ ಬೆಳೆಗಾರರು ಎಳೆಯ ಮಾವು ಮಾರುಕಟ್ಟೆಗೆ ತಂದರು. ಹೀಗೆ ಮಾವು ಬೆಳೆಗಾರರಿಂದ ಖರೀದಿಸಿದ ಮಾವು ಹಳಿಯಾಳದಿಂದ ಹೊರ ರಾಜ್ಯಗಳಿಗೆ ರವಾನೆ ಮಾಡಲಾಯಿತು. ಆದರೆ ಎಳೆಯ ಮಾವಿನ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಮಾವಿನ ಬೆಳೆ ಆಧಾರಿತ ಉದ್ದಿಮೆದಾರರು ಖರೀದಿಗೆ ನಿರಾಕರಿಸಿದರು. ಬಲಿತ ಮಾವು ಇದ್ದರೆ ಮಾತ್ರ ಸ್ವೀಕರಿಸುವುದಾಗಿ ಸ್ಥಳೀಯ ದಲ್ಲಾಳಿಗಳಿಗೆ ತಿಳಿಸಿದರು. ಅದರಂತೆ ಸ್ಥಳೀಯ ದಲ್ಲಾಳಿಗಳು ಸಭೆ ನಡೆಸಿ ಮೇ 5ರ ವರೆಗೆ ಮಾವು ಖರೀದಿಸದಿರುವಂತೆ ನಿರ್ಣಯಿಸಿದರು. ಮಾವು ಬಲಿಯುವ ವರೆಗೆ ಕಟಾವು ಮಾಡದಂತೆ ಮಾವು ಬೆಳೆಗಾರರಲ್ಲಿ ತಿಳಿವಳಿಕೆ ನೀಡಿದರು.ಆದರೆ ಕೆಲವು ದಲ್ಲಾಳಿಗಳು ಸಭೆಯ ನಿರ್ಣಯಗಳನ್ನು ಪಾಲಿಸದೇ ಖರೀದಿ ಮುಂದುವರಿಸಿದರು. ಮನಸೋಇಚ್ಛೆ ದರ ನಿಗದಿಪಡಿಸಿದ್ದಾರೆ. ಪ್ರತಿ ಕ್ವಿಂಟಲಿಗೆ ₹4 ಸಾವಿರದಿಂದ ₹3200 ವರೆಗೆ ದರ ಕಂಡಿತು. ಆನಂತರ ಕಳೆದ ವಾರ ಮಾವಿನ ಧಾರಣೆಯು ಪ್ರತಿ ಕ್ವಿಂಟಲಿಗೆ ₹2000, ನಂತರ ₹1800ಕ್ಕೆ ಕುಸಿಯಿತು. ಆಗ ಎಚ್ಚೆತ್ತ ರೈತರು ಆಕ್ಷೇಪ ವ್ಯಕ್ತಪಡಿಸಲಾರಂಭಿಸಿದರು. ಅದರ ಪರಿಣಾಮ ಶನಿವಾರದಿಂದ ಮಾವಿನ ದರ ಪ್ರತಿ ಕ್ವಿಂಟಲಿಗೆ ₹3100ಕ್ಕೆ ಏರಿಕೆಯಾಗಿದೆ. ಭಾನುವಾರವೂ ಇದೇ ದರ ಮುಂದುವರಿದಿದೆ.
ಕಡಿಮೆ ದರ ಆಕರಣೆ, ತೂಕದಲ್ಲಿ ಮೋಸ ಮಾಡಲಾರಂಭಿಸಿದ್ದರಿಂದ ಮಾವು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ಹಳಿಯಾಳದ ತಹಸೀಲ್ದಾರರು ಕೂಡಲೇ ಮಾವು ಬೆಳೆಗಾರರ ಸಂರಕ್ಷಣೆಗೆ ಮುಂದಾಗಬೇಕು. ಮಾವು ಬೆಳೆಗಾರರು, ರೈತ ಪ್ರತಿನಿಧಿಗಳು, ದಲ್ಲಾಳಿಗಳ ಸಭೆ ನಡೆಸಬೇಕು ಎನ್ನುತ್ತಾರೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕುಮಾರ ಬೊಬಾಟೆ.