ಕನ್ನಡ ಅಭಿಮಾನವನ್ನು ಪಹಲ್ಗಾಂ ಉಗ್ರದಾಳಿ ಜತೆಗೆ ತಳುಕು ಹಾಕಿದ ಗಾಯಕ ಸೋನು ನಿಗಮ್ ಬಂಧಿಸಬೇಕು - ಕರ್ನಾಟಕ ರಕ್ಷಣಾ ವೇದಿಕೆ
ಬೆಂಗಳೂರು : ಕನ್ನಡ ಅಭಿಮಾನವನ್ನು ಪಹಲ್ಗಾಂ ಉಗ್ರದಾಳಿ ಜತೆಗೆ ತಳುಕು ಹಾಕಿದ ಗಾಯಕ ಸೋನು ನಿಗಮ್ ಬಂಧಿಸಬೇಕು. ಕನ್ನಡ ಚಿತ್ರರಂಗದಿಂದ ಅವರನ್ನು ನಿರ್ಬಂಧಿಸಬೇಕು. ಇಲ್ಲದಿದ್ದರೆ ಚಿತ್ರರಂಗದ ವಿರುದ್ಧವೂ ತೀವ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ.
ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಕರವೇ ರಾಜ್ಯಾಧ್ಯಾಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿ ಕನ್ನಡಿಗರನ್ನು, ಕನ್ನಡಾಭಿಮಾನವನ್ನು ಭಯೋತ್ಪಾದಕರಿಗೆ ಹೋಲಿಸಿದ ಸೋನು ನಿಗಮ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆತ ಹಾಡಿರುವ ಕನ್ನಡ ಮಾತ್ರವಲ್ಲ, ಬೇರೆ ಭಾಷೆಯ ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಆದರೂ ಕರವೇ ತಡೆಯಲಿದೆ. ಘಟನೆ ನಡೆದು ಒಂದು ವಾರವಾದರೂ ಖಂಡಿಸದೇ ಸುಮ್ಮನಿದ್ದ ಕನ್ನಡ ಚಲನಚಿತ್ರ ಕಲಾವಿದರು ಸೇರಿ ನಿರ್ದೇಶಕ, ನಿರ್ಮಾಪಕರ ಮೇಲೂ ಪ್ರತಿಭಟನಕಾರರು ಹರಿಹಾಯ್ದರು. ನಿರ್ಬಂಧ ಮೀರಿ ಹಾಡಿಸಿದಲ್ಲಿ ಅಂಥವರನ್ನು ಕರವೇ ನೋಡಿಕೊಳ್ಳಲಿದೆ ಎಂಬ ಎಚ್ಚರಿಕೆ ನೀಡಿದರು.
ನಾರಾಯಣಗೌಡ ಮಾತನಾಡಿ, ಸೋನು ನಿಗಮ್ ತನ್ನ ಹುಚ್ಚುತನ ಪ್ರದರ್ಶನ ಮಾಡಿದ್ದಾರೆ. ಕನ್ನಡದ ಹಾಡು ಹಾಡುವಂತೆ ಕೋರಿದ ವೇಳೆ ಕಾಶ್ಮೀರದ ಭಯೋತ್ಪಾದನಾ ದಾಳಿಗೆ ತಳುಕು ಹಾಕಿದ್ದು ಯಾಕೆಂದು ಅರ್ಥವಾಗುತ್ತಿಲ್ಲ. ಈಗಾಗಲೇ ಕರವೇ ಮೂಲಕ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಬಂಧಿಸಿ ತರಬೇಕು. ಪರಪ್ಪನ ಅಗ್ರಹಾರದಲ್ಲಿ ನಾಲ್ಕು ದಿನ ಕಳೆದರೆ ಅವರ ಹುಚ್ಚು ಪರಿವರ್ತನೆ ಆಗಿ ಜ್ಞಾನೋದಯ ಆಗಬಹುದು. ಯಾವುದೇ ಕಾರಣಕ್ಕೂ ಸರ್ಕಾರ ಮುಲಾಜಿಲ್ಲದೆ ಬಂಧಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ನಡೆವ ದಸರಾ ಉತ್ಸವ, ಕದಂಬ ಉತ್ಸವ, ಹಂಪಿ ಉತ್ಸವಗಳಿಗೆ ಹೊರಗಡೆಯವರನ್ನು ಕರೆತಂದು ಕೋಟಿಗಟ್ಟಲೆ ಹಣ ಕೊಡಲಾಗುತ್ತಿದೆ. ಅವರು ಅನ್ನದ ಋಣವಿಲ್ಲದೆ ನಮ್ಮ ರಾಜ್ಯಕ್ಕೆ ಬಯ್ಯುತ್ತಿದ್ದಾರೆ. ಅದರ ಬದಲಾಗಿ ಕನ್ನಡದಲ್ಲಿ ಸಾಕಷ್ಟು ಕಲಾವಿದರು ಇದ್ದು, ಅವರಿಗೆ ಅವಕಾಶ ನೀಡಬೇಕು ಎಂದು ಹೇಳಿದರು.
ಡಿಜಿಗೆ 3 ಅಂಶಗಳ ಪತ್ರ
ಸೋನು ನಿಗಮ್ ಅವರನ್ನು ತಕ್ಷಣವೇ ಬಂಧಿಸಬೇಕು. ನ್ಯಾಯವನ್ನು ಎತ್ತಿಹಿಡಿಯಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆ ತಡೆಗಟ್ಟಲು ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಬೇಕು. ಕನ್ನಡಿಗರನ್ನು ಹೀಯಾಳಿಸುವ, ನಿಂದಿಸುವ ಹೇಳಿಕೆ ನೀಡದಂತೆ ತಡೆಯಲು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಕರವೇ ಕಾರ್ಯಕರ್ತರು ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದರು.ಕನ್ನಡ ಚಿತ್ರರಂಗ ಅಡ್ಡಗೋಡೆ ಮೇಲೆ ಇಟ್ಟಂತೆ ವರ್ತಿಸಬಾರದು. ಕನ್ನಡದ ಆಡು-ನುಡಿ ವಿಚಾರ ಬಂದಾಗ ಮಂಡಳಿ, ಕಲಾವಿದರು, ನಿರ್ದೇಶಕರು ಕನ್ನಡಪರ ನಿಲುವು ತಾಳುವುದಿಲ್ಲ ಎಂಬ ಆಕ್ರೋಶ ಇದೆ. ಘಟನೆ ನಡೆದು ಒಂದು ವಾರ ಕಳೆದರೂ ಕಲಾವಿದರು, ಚಿತ್ರರಂಗ ಈ ಬಗ್ಗೆ ಮಾತನಾಡಿಲ್ಲ. ಅವರಿಗೆ ಕನ್ನಡದ ಹೆಸರಿನಲ್ಲಿ ಲಾಭ ತೆಗೆದುಕೊಳ್ಳುವುದು ಮಾತ್ರ ಬೇಕು. ರಾಜ್ಯದಲ್ಲಿ ಕನ್ನಡದ ಹೋರಾಟಗಾರರೇ ಇಲ್ಲದಿದ್ದರೆ ಏನಾಗುತ್ತಿತ್ತು ಎಂಬುದಕ್ಕೆ ಇದು ಸಾಕ್ಷಿ ಎಂದರು.
ಈ ವೇಳೆ ಸಂಗೀತ ರಚನೆಕಾರ ನಾಗೇಂದ್ರ ಪ್ರಸಾದ್, ನಿರ್ದೇಶಕ ಓಂ ಸಾಯಿಪ್ರಕಾಶ್, ರಾಜಗುರು ಹೊಸಕೋಟೆ, ಮೋಹನ್‌ಕೃಷ್ಣ ಸೇರಿದಂತೆ ಕರವೇ ಕಾರ್ಯಕರ್ತರು ಸೇರಿದ್ದರು.