- 2.85 ಲಕ್ಷ ಹುದ್ದೆ ಖಾಲಿ, ಪರಿಶಿಷ್ಟ-ಹಿಂದುಳಿದ ವರ್ಗದ 1.42 ಲಕ್ಷ ಹುದ್ದೆ ಭರ್ತಿ ಮಾಡಿಲ್ಲ: ರಘು ಕೌಟಿಲ್ಯ ಆರೋಪ - - -
ದೇವರಾಜ ಅರಸು ಜೊತೆಗೆ ತಮ್ಮನ್ನು ಹೋಲಿಸಿಕೊಳ್ಳುವವರು ಇಂದು ಅದೇ ಅರಸು ಅವರ ಚಿಂತನೆಗಳಿಗೆ ತಿಲಾಂಜಲಿ ಇಟ್ಟಿದ್ದಾರೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 2.85 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಪರಿಶಿಷ್ಟರು-ಹಿಂದುಳಿದ ವರ್ಗಕ್ಕೆ ಸಿಗಬೇಕಾಗಿದ್ದ 1.42 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಈ ಮೂಲಕ ನಿರುದ್ಯೋಗಿ ಯುವಕರನ್ನೂ ಕಾಂಗ್ರೆಸ್ ಸರ್ಕಾರ ವಂಚಿಸಿದೆ. ಕೇಂದ್ರ ಸರ್ಕಾರ ಮೀಸಲಾತಿ ಹೆಚ್ಚಿಸಲೆಂದು ಬೊಗಳೆ ಮಾತುಗಳನ್ನಾಡುವ ಸಿಎಂ ಸಿದ್ದರಾಮಯ್ಯ, ಮೊದಲು ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಿ. ತಾವೇ ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿರುವುದು ಸಿದ್ದರಾಮಯ್ಯಗೆ ಅರಿವಿಲ್ಲವೇ ಎಂದು ಪ್ರಶ್ನಿಸಿದರು.ಬಿಜೆಪಿ ಸರ್ಕಾರವಿದ್ದಾಗ ಪರಿಶಿಷ್ಟ ಜಾತಿಗೆ ಶೇ.15ರಿಂದ 17ಕ್ಕೆ, ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ 7ಕ್ಕೆ ಮೀಸಲಾತಿ ಹೆಚ್ಚಿಸಿತ್ತು. ರಾಜ್ಯದಲ್ಲಿ ಇಗ ಶೇ.56ರಷ್ಟು ಮೀಸಲಾತಿ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಆದರೆ, ನ್ಯಾ.ನಾಗಮೋಹನ ದಾಸ್ ವರದಿಯನ್ವಯ ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಒಳ ಮೀಸಲಾತಿ ನೀಡದೇ ಸಿದ್ದರಾಮಯ್ಯ ಸರ್ಕಾರ ವಂಚಿಸಿದೆ. ಖಾಲಿ ಹುದ್ದೆಗಳನ್ನು ಬಾರಿ ಉಳಿಸಿಕೊಂಡು, ನಿರುದ್ಯೋಗಿ ಯುವಜನರ ಭವಿಷ್ಯಕ್ಕೆ ಕಲ್ಲುಹಾಕಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಎಚ್.ಸಿ. ಜಯಮ್ಮ, ಮುಖಂಡರಾದ ಎ.ಎಸ್.ವೆಂಕಟೇಶ, ಮಹೇಂದ್ರ ಹೆಬ್ಬಾಳ್, ರಘು ಅಂಬರಕರ್, ಕಿರೀಟ್ ಕಲಾಲ್, ಐರಣಿ ಅಣ್ಣೇಶ ಇತರರು ಇದ್ದರು.
(ಬಾಕ್ಸ್)
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಲಿದ್ದು, ಈ ಹಿನ್ನೆಲೆ ನಿನ್ನೆಯಷ್ಟೇ ಹಿಂದುಳಿದ ವರ್ಗಗಳ ಪ್ರಮುಖ ಸಭೆ ನಡೆಸಿದ್ದೇವೆ ಎಂದು ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಹೇಳಿದರು.
- - -