ಕನ್ನಡಪ್ರಭ ವಾರ್ತೆ ಮೈಸೂರು
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಕಷ್ಟ ಬಂದಾಗಲೆಲ್ಲಾ ಕುರುಬರು ನೆನಪಾಗುತ್ತಾರೆ. ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಕೊಡುಗೆ ಶೂನ್ಯ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.ನಗರದ ಜಲದರ್ಶಿ ನಿಲಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ಸಿದ್ದರಾಮಯ್ಯಗೆ ಸಂಕಷ್ಟ ಬಂದಿದೆ. ಹೀಗಾಗಿ, ಕುರುಬ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸುವುದಾಗಿ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಮನಸ್ಸು ಮಾಡಿದ್ದರೆ ಎಂದೋ ಈ ಕೆಲಸ ಮಾಡಬಹುದಿತ್ತು ಎಂದರು.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವುದಕ್ಕೆ ಸಿದ್ದರಾಮಯ್ಯ ಎಂದೂ ಪರವಾಗಿರಲಿಲ್ಲ. ಬೊಮ್ಮಾಯಿ ಸಿಎಂ ಆಗಿದ್ದಾಗ ಈ ಪ್ರಕ್ರಿಯೆ ನಡೆದಿತ್ತು. ಕುಲ ಶಾಸ್ತ್ರೀಯ ಅಧ್ಯಯನವನ್ನು ಬೊಮ್ಮಾಯಿ ಸರ್ಕಾರ ಮಾಡಿತ್ತು. ಈಗಲೂ ಕಾನೂನು ಪ್ರಕಾರವಾಗಿ ಕೇಂದ್ರ ಸರ್ಕಾರಕ್ಕೆ ಈ ನಿರ್ಣಯವನ್ನು ರಾಜ್ಯ ಸರ್ಕಾರ ಕಳಿಸಿಲ್ಲ. ಸಿದ್ದರಾಮಯ್ಯಗೆ ಈಗ ಕಷ್ಟಕಾಲ. ಸಂತೋಷವಿದ್ದಾಗ ಕುರುಬರನ್ನು ಒದ್ದಿದ್ದಾರೆ. ಕಷ್ಟ ಬಂದಾಗ ಕುರುಬರ ನೆನಪಾಗಿದೆ ಎಂದು ಅವರು ಕಿಡಿಕಾರಿದರು.ಕುರುಬ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡದ ಸಿದ್ದರಾಮಯ್ಯ, ಕುರುಬ ಸಮುದಾಯದ ನಾಯಕರನ್ನು ವ್ಯವಸ್ಥಿತವಾಗಿ ತುಳಿದರು. ಕುರುಬ ನಾಯಕರು ಬೆಳೆಯಲು ಸಿದ್ದರಾಮಯ್ಯ ಬಿಡಲಿಲ್ಲ. ಹಿಂದುಳಿದ ವರ್ಗಗಳ ನಾಯಕ ಎಂದು ಹೇಳುವ ಸಿದ್ದರಾಮಯ್ಯ, ಈ ವರ್ಗಕ್ಕೆ ಯಾವುದೇ ಕೊಡುಗೆ ನೀಡಲಿಲ್ಲ, ಹೋರಾಟ ಮಾಡಲಿಲ್ಲ. ಬರೀ ಬೊಗಳೆ ಬಿಟ್ಟುಕೊಂಡು ಓಡಾಡ್ತಿದ್ದಾರೆ. ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿಯಿಲ್ಲ ಎಂದು ಅವರು ಆರೋಪಿಸಿದರು.
ಸಿಎಂ ಕುರ್ಚಿ ಹತ್ತಿರಕ್ಕೆ ಡಿ.ಕೆ. ಶಿವಕುಮಾರ್ ಬಂದಿದ್ದಾರೆ. ಹೀಗಾಗಿ, ಕುರುಬರನ್ನು ತಮ್ಮ ರಕ್ಷಣೆಗೆ ಸಿದ್ದರಾಮಯ್ಯ ಕರೆಯುತ್ತಿದ್ದಾರೆ. ಕಾಗಿನೆಲೆ ಮಹಾ ಸಂಸ್ಥಾನ ಕಟ್ಟುವಾಗ ಸಿದ್ದರಾಮಯ್ಯ ಯಾವುದಕ್ಕೂ ಸಹಕಾರ ಕೊಡಲಿಲ್ಲ. ಕುರುಬ ಸಮುದಾಯದ ನಾಯಕತ್ವವನ್ನು ಸಿದ್ದರಾಮಯ್ಯ ತುಳಿದರು. ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಕೊಡುಗೆ ಶೂನ್ಯ ಎಂದು ಅವರು ದೂರಿದರು.ಪೀಠದಿಂದ ಕೆಳಗಿಳಿಸಬೇಕಾಗುತ್ತದೆ ಎಚ್ಚರಿಕೆ:
ನಾಯಕ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಿದ್ದು ಎಚ್.ಡಿ. ದೇವೇಗೌಡರು. ಈಗ ಕಾಗಿನೆಲೆ ಮಠಾಧಿಪತಿಗಳನ್ನು ಸಿದ್ದರಾಮಯ್ಯ ಮುಂದಕ್ಕೆ ಬಿಡ್ತಾರೆ. ಆದರೆ, ಸ್ವಾಮೀಜಿಗಳನ್ನು ಸಿದ್ದರಾಮಯ್ಯ ಪೀಠಾಧಿಪತಿಯನ್ನಾಗಿ ಮಾಡಿಲ್ಲ. ನಿಮ್ಮನ್ನು ಪೀಠಾಧಿಪತಿ ಮಾಡಿದ್ದು ವಿಶ್ವನಾಥ್. ಮಠಕ್ಕೂ ಸಿದ್ದರಾಮಯ್ಯಗೂ ಯಾವುದೇ ಸಂಬಂಧವಿಲ್ಲ. ಮಠಾಧಿಪತಿಗಳೇನು ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಪಕ್ಷದ ಜೀತದಾಳುಗಳಲ್ಲ. ಮಠಾಧಿಪತಿಗಳು, ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಪರವಾಗಿ ಬೀದಿಗಿಳಿದರೆ ನಿಮ್ಮ ತಲೆದಂಡವಾಗಲಿದೆ. ನಿಮ್ಮನ್ನು ಪೀಠದಿಂದ ಕೆಳಗಿಳಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ಕುರುಬರ ಹುಡುಗರಿಗೆ ಸಿದ್ದರಾಮಯ್ಯ ಉತ್ತಮ ಭವಿಷ್ಯ ರೂಪಿಸಲಿಲ್ಲ. ಆದರೆ, ಸಿದ್ದರಾಮಯ್ಯ ಕುರುಬ ಸಮುದಾಯದ ಯುವಕರಿಗೆ ಒಂಥರ ಇಂಗ್ಲಿಷ್ ಸಿನಿಮಾ ಹೀರೋ ಥರ ಕಾಣುತ್ತಾರೆ. ಇಂಗ್ಲಿಷ್ ಸಿನಿಮಾ ಅರ್ಥ ಆಗದಿದ್ದರೂ ಶಿಳ್ಳೆ ಹೊಡೆದಂತೆ ಸಿದ್ದರಾಮಯ್ಯ ಏನೂ ಮಾಡದಿದ್ದರು ಶಿಳ್ಳೆ ಹೊಡೆಯುತ್ತಾರೆ ಎಂದು ಅವರು ಕುಟುಕಿದರು.
ರಾಜ್ಯದಲ್ಲಿ ಜಾತಿ ಗಣತಿಗೆ ಆದೇಶಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್. ವಿಶ್ವನಾಥ್ ಅವರು, ಕಾಂತರಾಜು ಆಯೋಗ ನೀಡಿರುವ ಜಾತಿ ಗಣತಿ ವರದಿ ನೀಟಾಗಿದೆ. ಆದರೆ, ಅದನ್ನು ಜಾರಿಗೊಳಿಸಲು ಧೈರ್ಯ ತೋರದ ಹೇಡಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಕಾಂತರಾಜು ಆಯೋಗ ನೀಡಿದ ಜಾತಿಗಣತಿ ವರದಿಯನ್ನು 10 ವರ್ಷ ಕಾಲ ತಲೆ ಕೆಳಗೆ ಇಟ್ಟುಕೊಂಡು ಮಲಗಿದ್ದ ಸಿದ್ದರಾಮಯ್ಯ. ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ವಿರೋಧಿ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.ಉಳ್ಳವರು ಮೀಸಲಾತಿ ಬಿಟ್ಟು ಕೊಡಲಿ
ಉಳ್ಳವರು ಮೀಸಲಾತಿ ಬಿಟ್ಟು ಕೊಡಬೇಕು. ಮೀಸಲಾತಿ ಮೂಲಕ ಮೇಲೆ ಬಂದವರು ಆ ಮೀಸಲಾತಿ ಬಿಟ್ಟು ಕೊಡಲಿ ಎಂದು ವಿಧಾನಪರಿಷತ್ತು ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.ಖರ್ಗೆ ಮಗನಿಗೂ ಮೀಸಲಾತಿ, ಊರಲ್ಲಿ ತಮಟೆ ಹೊಡೆಯುವ ದಲಿತನಿಗೂ ಮೀಸಲಾತಿ. ವಿಶ್ವನಾಥ್ ಮಗನಿಗೂ ಮೀಸಲಾತಿ, ಕುರಿ ಕಾಯುವವ ಮಗನಿಗೂ ಮೀಸಲಾತಿ. ಸಿದ್ದರಾಮಯ್ಯ ಮಗನಿಗೂ ಮೀಸಲಾತಿ, ಬಡ ಕುರುಬರಿಗೂ ಮೀಸಲಾತಿ. ಇದು ಸರಿನಾ ಹೇಳಿ ಪ್ರಶ್ನಿಸಿದ ಅವರು, ಉಳ್ಳವರಿಗೆ ಮೀಸಲಾತಿ ತೆಗೆದು ಹಾಕುವ ಕಾಯ್ದೆ ಸರ್ಕಾರ ಮಾಡಲಿ ಎಂದು ಆಗ್ರಹಿಸಿದರು.
ಬಾನು ಮುಷ್ತಾಕ್ ದಸರಾ ಮಹೋತ್ಸವ ಉದ್ಘಾಟನೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿರುವುದು ಸ್ವಾಗತಾರ್ಹ. ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವುದನ್ನು ವಿರೋಧಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೀಗ ನ್ಯಾಯಾಲಯ ಅನುಮತಿ ನೀಡಿದೆ. ಇದು ಸ್ವಾಗತಾರ್ಹ- ಎಚ್. ವಿಶ್ವನಾಥ್, ವಿಧಾನಪರಿಷತ್ ಸದಸ್ಯ