ಕುಷ್ಟಗಿ: ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರು ವಚನಗಳ ಮೂಲಕ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಶಿವಯೋಗಿ ಸಿದ್ದರಾಮೇಶ್ವರರು ಅಸಮಾನತೆ, ವರ್ಣ, ಜಾತಿ, ಲಿಂಗಬೇಧ ತೊಡೆದು ಹಾಕುವ ಕೆಲಸ ವಚನಗಳ ಮೂಲಕ ಮಾಡಿದವರು, ಶಾಸ್ತ್ರ, ಪುರಾಣ ಮತ್ತು ವೇದ ಹಾಗೂ ತರ್ಕ ವಿರೋಧಿಸಿ ಜನರಿಗೆ ಪ್ರಯೋಜನಕಾರಿಯಾಗುವ ಕೆರೆ, ಕಟ್ಟೆ, ಬಾವಿಗಳ ನಿರ್ಮಾಣಕ್ಕೆ ಮುಂದಾಗಿ ಕಲ್ಯಾಣಾಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ಶಿಕ್ಷಕ ಜೀವನಸಾಬ್ ಬಿನ್ನಾಳ ಉಪನ್ಯಾಸ ನೀಡಿ, ಶಿವಯೋಗಿ ಸಿದ್ದರಾಮೇಶ್ವರರು ಕೇವಲ ವಚನ ಬರೆಯುವದು ಅಷ್ಟೆಯಲ್ಲ ಅವರು ಕಾಯಕ ತತ್ವ ಅಳವಡಿಸಿಕೊಂಡು ಜನರಿಗೆ ಬೇಕಾಗಿರುವ ಕೆರೆ ಕಟ್ಟೆ ನಿರ್ಮಿಸುವ ಮೂಲಕ ದೇಶಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ.ಅವರ ಪ್ರಕಾರ ನಾವು ಉತ್ತಮ ಕೆಲಸ ಮಾಡಿ ಪುಣ್ಯ ಪಡೆಯುವದಕ್ಕಿಂತ ಪಾಪವನ್ನೆ ಮಾಡದೆ ಇರುವದು ಬಹುದೊಡ್ಡ ಪುಣ್ಯದ ಕೆಲಸ ಎಂದು ಹೇಳಿದ್ದಾರೆ, ಅವರ ಆದರ್ಶ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಲು ಮುಂದಾಗಬೇಕು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ಬಿಇಒ ಉಮಾದೇವಿ ಬಸಾಪೂರು, ಗ್ರೇಡ್ 2 ತಹಸೀಲ್ದಾರ ರಜನಿಕಾಂತ, ಬಸವರಾಜ ಹೊಸಮನಿ, ಪರಶುರಾಮ ನಾಗರಾಳ, ಅಶೋಕ್ ಬಳೂಟಗಿ, ಗೋವಿಂದ ವಡ್ಡರ, ಹನಮಂತ ಭೋವಿ ಸೇರಿದಂತೆ ಭೋವಿ ಸಮಾಜದ ಮುಖಂಡರು, ಯುವಕರು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.