ಧಾರವಾಡ: ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆಯಾಗದು. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಆದರೆ, ಗೋವಾ ರಾಜಕಾರಣದಲ್ಲಿ ಬದಲಾವಣೆಯಾಗಬಹುದು ಅಥವಾ ಆ ರಾಜ್ಯದ ಪ್ರಭಾವಿ ರಾಜಕಾರಣಿಗೆ ಪೆಟ್ಟಾಗಬಹುದು...!
ಹೌದು. ಇದು ಬೊಂಬೆಗಳು ಹೇಳಿರುವ ಭವಿಷ್ಯದ ಸಾರಾಂಶ. ಪ್ರತಿವರ್ಷ ಯುಗಾದಿ ಪಾಡ್ಯದ ದಿನ ತಾಲೂಕಿನ ಉಪ್ಪಿನ ಬೆಟಗೇರಿ ಸಮೀಪದ ಹನುಮನಕೊಪ್ಪ ಗ್ರಾಮಸ್ಥರು ಹತ್ತಾರು ವರ್ಷಗಳಿಂದ ತುಪ್ಪರಿ ಹಳ್ಳದ ದಂಡೆಯ ಮೇಲೆ ಬೊಂಬೆ ಫಲ ಹಾಕುತ್ತಾರೆ. ಆ ಫಲದ ಮೇಲೆ ರಾಜ್ಯ ರಾಜಕಾರಣ, ಮಳೆ ಬೆಳೆಯ ಭವಿಷ್ಯವನ್ನು ನಿರ್ಧಾರ ಮಾಡಲಾಗುತ್ತದೆ. ಅದೇ ರೀತಿ ಈ ಬಾರಿಯೂ ಬೊಂಬೆ ಹೇಳಿರುವ ಭವಿಷ್ಯವನ್ನು ಗ್ರಾಮಸ್ಥರು ಪ್ರಸ್ತಾಪಿಸಿದ್ದಾರೆ.
ನಾಲ್ಕೂ ದಿಕ್ಕಿಗೆ ಸೈನಿಕರ ಮೂರ್ತಿ, ಮಧ್ಯೆ ಪಾರ್ವತಿ, ಪರಮೇಶ್ವರ ಹಾಗೂ ಗಣಪತಿಯ ಮೂರ್ತಿ, ಅನ್ನದ ಉಂಡೆ ಮಾಡಿ ಇಡುತ್ತಾರೆ. ಆಯಾ ಮಳೆಯ ಹೆಸರಿನಲ್ಲಿ ಆಯಾ ಕಾಲದ ಧಾನ್ಯಗಳನ್ನು ಹಾಕಿ ಇಡುತ್ತಾರೆ. ಯುಗಾದಿ ಅಮವಾಸ್ಯೆ ದಿನ ಇದನ್ನು ಮಾಡಿಟ್ಟು ಮಾರನೇ ದಿನ ಬಂದು ಇದನ್ನು ಗಮನಿಸುತ್ತಾರೆ. ಆ ಫಲ ಯಾವ ಆಕಾರದ ಮೇಲೆ ಇರುತ್ತದೆಯೋ ಅದರ ಮೇಲೆ ರಾಜ್ಯ ರಾಜಕಾರಣ ಮತ್ತು ಮಳೆ, ಬೆಳೆಯ ಭವಿಷ್ಯವನ್ನು ನಿರ್ಧಾರ ಮಾಡಲಾಗುತ್ತದೆ. ಇಂದಿರಾ ಗಾಂಧಿ ಹತ್ಯೆಯಾಗುವಾಗ ಕೇಂದ್ರದಲ್ಲಿದ್ದ ಮೂರ್ತಿಗೆ ಪೆಟ್ಟಾಗಿತ್ತು. ಯಡಿಯೂರಪ್ಪ ಅಧಿಕಾರ ಬಿಟ್ಟು ಕೆಳಗಿಳಿಯುವಾಗ ಕರ್ನಾಟಕ ದಿಕ್ಕಿನ ಮೂರ್ತಿಗೆ ಪೆಟ್ಟಾಗಿತ್ತು. ಕಳೆದ ಬಾರಿ ಕೇಂದ್ರದಲ್ಲಿ ಯಾವುದೇ ಬದಲಾವಣೆಯಾಗದು. ರಾಜ್ಯದಲ್ಲೂ ಸಿಎಂ ಬದಲಾವಣೆಯಾಗುವುದಿಲ್ಲ ಎಂಬ ಭವಿಷ್ಯವನ್ನು ಈ ಬೊಂಬೆ ಕರಾರುವಕ್ಕಾಗಿ ಭವಿಷ್ಯ ನುಡಿದಿತ್ತು.
ಈ ಬಾರಿ ಮುಂಗಾರು ಅಲ್ಪ ಪ್ರಮಾಣದಲ್ಲಿದೆ. ಹಿಂಗಾರು ಮಳೆ ಸಂಪೂರ್ಣ ಆಗಲಿದೆ. ಬೆಲ್ಲ, ಕೊಬ್ಬರಿ, ಜೋಳ ಹಾಗೂ ಶೇಂಗಾದ ಬೆಲೆ ಗಗನಕ್ಕೇರಲಿದೆ ಎಂಬ ಭವಿಷ್ಯ ನುಡಿದಿರುವ ಬೊಂಬೆ, ಅನ್ನಕ್ಕೆ ಯಾವುದೇ ಕೊರತೆ ಇಲ್ಲ. ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿದೆ. ರಾಜ್ಯದ ರೈತರಿಗೆ ಈ ವರ್ಷ ಸುಭಿಕ್ಷ ಕಾಲವಿದೆ ಎಂದು ಬೊಂಬೆ ನುಡಿದಿದೆ.
ಕಳೆದ ಬಾರಿ ನಮ್ಮ ರಾಜ್ಯದ ರಾಜಕಾರಣಿ ಮೇಲೆ ಆರೋಪ ಕೇಳಿ ಬಂದರೂ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಭವಿಷ್ಯ ಹೊರಬಿದ್ದಿತ್ತು. ಆ ಪ್ರಕಾರ ಸಿಎಂ ಸಿದ್ದರಾಮಯ್ಯ ಮೇಲೆ ಮುಡಾ ಆರೋಪ ಕೇಳಿ ಬಂದರೂ ಯಾವುದೇ ಬದಲಾವಣೆಯಾಗಿಲ್ಲ. ಈ ಬಾರಿ ಕೂಡ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಭವಿಷ್ಯ ಹೊರ ಬಿದ್ದಿದ್ದು, ಭವಿಷ್ಯ ಏನಾಗಲಿದೆ ಕಾದು ನೋಡಬೇಕಿದೆ.