ಕನ್ನಡಪ್ರಭ ವಾರ್ತೆ ಮಂಡ್ಯ/ಮದ್ದೂರು
ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಬೆಂಬಲ ಮುಸಲ್ಮಾನರ ಕಡೆಗೆ ಇರುವುದರಿಂದ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಕರ್ನಾಟಕವನ್ನು ಇಟಲಿ ಸರ್ಕಾರ, ತಾಲಿಬಾನ್ ಸರ್ಕಾರ, ಮುಲ್ಲಾ ಸರ್ಕಾರ ಆಗಲು ಬಿಡುವುದಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗುಡುಗಿದರು.ಪಟ್ಟಣದಲ್ಲಿ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ಅಂಗವಾಗಿ ಬುಧವಾರ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಘಟನೆ ಮರೆತರೇ ನಮಗೆ ಉಳಿಗಾಲ ಇಲ್ಲ. ನಾವು ಜೆಡಿಎಸ್‌ನವರು ಹಾಲು- ಜೇನು ರೀತಿ ಇದ್ದೇವೆ. ಮುಂದೆ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್‌ನವರನ್ನು ಹೀಗೆಯೇ ಬಿಟ್ಟರೆ ಇವರು ಗಣಪತಿ ಹಬ್ಬವನ್ನೇ ನಿಷೇಧಿಸುತ್ತಾರೆ. ಈಗ ಡಿಜೆ ಬ್ಯಾನ್ ಮಾಡಿದ್ದಾರೆ, ಮುಂದೆ ಮಸೀದಿ ಎದುರು ಗಣೇಶ ಮೂರ್ತಿ ಮೆರವಣಿಗೆಯನ್ನೂ ಬ್ಯಾನ್ ಮಾಡಿ ಕೊನೆಗೆ ಹಬ್ಬವನ್ನೂ ಬ್ಯಾನ್ ಮಾಡುತ್ತಾರೆ. ಹಿಂದೂ ಸಂಘಟನೆಗಳ ಹೋರಾಟ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯುತ್ತಿದೆ. ಇದಕ್ಕೇ ಮಂಡ್ಯ ಅಂದ್ರೆ ಇಂಡಿಯಾ ಅನ್ನೋದು ಎಂದು ಹೇಳಿದರು.ಮದ್ದೂರು ಜನರು ಸಿದ್ದರಾಮಯ್ಯ, ಡಿಕೆಶಿ ಅವರಿಗೆ ಬೆಂಬಲ ನೀಡುತ್ತಿದ್ದರೆ ಅವರು ನಿಮ್ಮ ತಲೆ ಮೇಲೆ ವಡೆ ತಟ್ಟುತ್ತಾರೆ. ಡಿಕೆಶಿ ಮಂಡ್ಯದವರನ್ನ್ನು ಛತ್ರಿಗಳು ಎಂದಿದ್ದರು. ಈಗ ತಮ್ಮ ಛತ್ರಿ ಕೆಲಸ ತೋರಿಸಿದ್ದಾರೆ. ಇದು ಹಿಂದೂಗಳ ದೇಶ, ಹಿಂದೂಗಳ ಭೂಮಿ. ನೀವು ಪಾಕಿಸ್ತಾನಕ್ಕೆ ಜೈ ಅಂದ್ರೆ ನಿಮ್ಮ ಹೆಡೆಮುರಿ ಕಟ್ಟಿ ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ. ಸಿದ್ದರಾಮಯ್ಯ ಮುಲ್ಲಾಗಳ ಟೋಪಿ ಹಾಕಿಕೊಂಡು ಹಿಂದೂಗಳಿಗೆ ಟೋಪಿ ಹಾಕುತ್ತಾರೆ ಎಂದು ಟೀಕಿಸಿದರು.
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದರು. ಬುರುಡೆ, ಬುರುಡೆ ಅಂತ ಬುರುಡೆ ಬಿಟ್ಟರು. ಆಮೇಲೆ ಅಯ್ಯಪ್ಪಸ್ವಾಮಿಗೆ ಅಪಮಾನ ಮಾಡಿದ್ದಾಯ್ತು. ಈಗ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎನ್ನುತ್ತಿದ್ದಾರೆ. ಹಿಂದೂ ವಿರೋಧಿ ಭಾವನೆ ಹೊಂದಿರುವ ನಿಮಗೆ ಸರಿಯಾದ ಪಾಠ ಕಲಿಸುತ್ತೇವೆ ಎಂದು ಕಿಡಿಕಾರಿದರು.ಹಿಂದೂಗಳ ಮೇಲಿನ ಕೇಸ್ ವಾಪಸ್ಸು ಪಡೆಯಲು ನಿಮಗೆ ಆಗುವುದಿಲ್ಲ. ಮುಸಲ್ಮಾನರ ಮೇಲಿನ ಕೇಸ್ ವಾಪಸ್ ಪಡೆಯುತ್ತೀರಿ. ಮುಸ್ಲಿಂ ಮತಗಳಿಂದ ಕಾಂಗ್ರೆಸ್ ಗೆದ್ದಿದೆ ಅಂತ ಅವನ್ಯಾರೋ ಹೇಳಿದ್ದಾನೆ. ಹಾಗಿದ್ದರೆ ಹಿಂದೂಗಳು ನಿಮಗೆ ಮತ ಹಾಕಿಲ್ಲವೇ. ಇನ್ನೂ ಎರಡೇ ವರ್ಷ ನಿಮ್ಮ ಅಧಿಕಾರ, ಮುಂದೆ ಬಿಜೆಪಿ ಸರ್ಕಾರ ಬರುತ್ತೆ. ಇನ್ಮುಂದೆ ರಾಜ್ಯದಲ್ಲಿ ಬಿಜೆಪಿ ಹವಾ ಶುರುವಾಗಲಿದೆ ಎಂದು ಭವಿಷ್ಯ ನುಡಿದರು.
ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಸಂಸದೆ ಸುಮಲತಾ ಅಂಬರೀಶ್, ಶಾಸಕ ಎಚ್.ಟಿ.ಮಂಜು, ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಮುಖಂಡರಾದ ಎಸ್.ಪಿ.ಸ್ವಾಮಿ, ಸಚ್ಚಿದಾನಂದ, ಅಶೋಕ್ ಜಯರಾಂ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.