ಸಿದ್ದರಾಮಯ್ಯ ರಾಜೀನಾಮೆ ನೀಡಿ ಮುಡಾ ಹಗರಣ ಸಿಬಿಐಗೆ ವಹಿಸಲಿ: ಶಾಸಕ ಮಹೇಶ ಟೆಂಗಿನಕಾಯಿ

KannadaprabhaNewsNetwork | Published : Oct 7, 2024 1:31 AM

ಸಾರಾಂಶ

ಮುಡಾ ಹಗರಣವನ್ನು ಸಿಬಿಐ ತನಿಖೆ ನಡೆಸುವ ಸನ್ನಿವೇಶಗಳು ಕಂಡುಬರುತ್ತಿದೆ. ಆಗ ಸತ್ಯಾಸತ್ಯತೆ ಹೊರಗೆ ಬಂದು, ಮುಖ್ಯಮಂತ್ರಿ ದಸರಾ ಹಬ್ಬದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನೂರಕ್ಕೆ ನೂರು ಖಚಿತ ಎಂದು ಶಾಸಕ ಮಹೇಶ ಟೆಂಗಿನಕಾಯಿ ಭವಿಷ್ಯ ನುಡಿದರು.

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾವು ಸತ್ಯ ಹರಿಶ್ಚಂದ್ರ ಎಂದುಕೊಂಡಿದ್ದರೆ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಒತ್ತಾಯಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಹಗರಣವನ್ನು ಸಿಬಿಐ ತನಿಖೆ ನಡೆಸುವ ಸನ್ನಿವೇಶಗಳು ಕಂಡುಬರುತ್ತಿದೆ. ಆಗ ಸತ್ಯಾಸತ್ಯತೆ ಹೊರಗೆ ಬಂದು, ಮುಖ್ಯಮಂತ್ರಿ ದಸರಾ ಹಬ್ಬದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನೂರಕ್ಕೆ ನೂರು ಖಚಿತ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್‌ನವರು ಬಾಹ್ಯವಾಗಿ ಸಿದ್ದರಾಮಯ್ಯನವರೆ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ, ಕೆಲವರು ಮುಂದಿನ ಸಿಎಂ ನಾನೇ ಎಂದು ಟಾವೆಲ್ ಹಾಕುತ್ತಿದ್ದಾರೆ. ಐದು ವರ್ಷ ಎಂದು ಹೇಳುತ್ತಿರುವವರೇ ಕೂಡಿಕೊಂಡು ಅವರನ್ನು ಇಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಆ ಕಾರ್ಯ ಖಚಿತವಾಗಿ ಮಾಡೇ ಮಾಡುತ್ತಾರೆ ಎಂದರು.

ಸರ್ಕಾರ ಬಿದ್ದರೂ ಪರವಾಗಿಲ್ಲ. ಆದರೆ, ಜಾತಿ ಗಣತಿ ಬಿಡುಗಡೆ ಮಾಡಲಿ ಎಂದು ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಹೇಳಿರುವ ಪ್ರತಿಕ್ರಿಯಿಸಿದ ಅವರು, ಅವರಿಗೆ ಕಾಂಗ್ರೆಸ್‌ನ ಆಂತರಿಕ ಬೇಗುದಿ ಏನೆಂಬುದು ಸ್ಪಷ್ಟವಾಗಿದೆ. ಹೀಗಾಗಿ ಸರ್ಕಾರ ಹೋದರೂ ಚಿಂತೆಯಿಲ್ಲ ಎಂಬ ಮನಃಸ್ಥಿತಿಯಲ್ಲಿದ್ದಾರೆ. ಮುಖ್ಯಮಂತ್ರಿಗಳು ಜಾತಿ ಗಣತಿ ವರದಿ ಏಕೆ ಬಿಡುಗಡೆ ಮಾಡುತ್ತಿಲ್ಲ ಎಂಬುದು ನಮಗೂ ಅರ್ಥವಾಗುತ್ತಿಲ್ಲ. ಅವರು ತಮ್ಮ ಸ್ಥಾನದಿಂದ ಇಳಿಯುವ ಮುಂಚೆಯೇ ಈ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಲಿ ಎಂದು ಹರಿಪ್ರಸಾದ ಹೇಳಿರಬಹುದು. ರಾಜ್ಯ ಸರ್ಕಾರ ಮಾಡಿರುವ ಜಾತಿ ಗಣತಿಯಲ್ಲಿ ಹಲವು ಲೋಪಗಳಾಗಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಈ ವರದಿ ಬಿಡುಗಡೆಗೊಂಡರೆ ಸತ್ಯಾಸತ್ಯತೆ ಗೊತ್ತಾಗುತ್ತದೆ ಎಂದರು.

ವಕ್ ಬೋರ್ಡ್ ತಿದ್ದುಪಡಿ ವಿರೋಧಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೋರಾಟ ಮಾಡಲು ತಜ್ಞರು, ವಕೀಲರು ಚಿಂತನೆ ನಡೆಸಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಅವರು ದೇಶದ ಹಿತದೃಷ್ಟಿ ಬಗ್ಗೆ ಚಿಂತನೆ ಮಾಡಲಿ. ವಿದೇಶಕ್ಕೆ ಹೋಗಿ ಭಾರತದ ಬಗ್ಗೆ ಅವಹೇಳನಕಾರಿ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇಲ್ಲವೆಂಬುದು ಗೊತ್ತಾಗುತ್ತದೆ. ಅದು ರಚನಾತ್ಮಕ ಹೋರಾಟ ಮಾಡಲಿ. ೧೧ ವರ್ಷ ಒಂದು ಕಪ್ಪ್ಪುಚುಕ್ಕೆ ಇಲ್ಲದೆ ಮೋದಿ ಆಡಳಿತ ನಡೆಸುತ್ತಿದ್ದಾರೆ. ಜಗತ್ತೇ ಅವರನ್ನು ಒಪ್ಪಿಕೊಳ್ಳುತ್ತಿದೆ. ತುಷ್ಟೀಕರಣಕ್ಕೆ ಒಂದು ಮಿತಿ ಇರುತ್ತದೆ. ಇಲ್ಲವಾದರೆ ಜನ ತಕ್ಕಪಾಠ ಕಲಿಸುತ್ತಾರೆ ಎಂದರು.

ರಜೆಗಳ ಕಡಿತ ಸರಿಯಲ್ಲ

ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷದ ಸರ್ಕಾರ, ಮುಖ್ಯಮಂತ್ರಿ ನವರಾತ್ರಿ ಸೇರಿದಂತೆ ಹಿಂದೂಗಳ ಹಬ್ಬದ ಸಂದರ್ಭಗಳಲ್ಲಿ ಶಾಲಾ-ಕಾಲೇಜು ಸೇರಿದಂತೆ ಸರ್ಕಾರಿ ರಜೆಗಳ ದಿನಗಳ ಕಡಿತ ಮಾಡುತ್ತಿರುವುದ ಸರಿಯಲ್ಲ. ಈ ಸರ್ಕಾರದಿಂದ ಅನೇಕ ಸಂದರ್ಭ, ಹಂತಗಳಲ್ಲೂ ಅಲ್ಪಸಂಖ್ಯಾತರ ತುಷ್ಟೀಕರಣ ಹದ್ದುಮೀರುತ್ತಿದೆ. ಮುಸ್ಲಿಮರ ಸಾಮೂಹಿಕ ಪ್ರಾರ್ಥನೆಯನ್ನು ಚಂದಿರ ಕಾಣಿಸಿಕೊಂಡಾಗಲೇ ಹೊಂದಾಣಿಕೆ ಮಾಡಿ ಕ್ಯಾಲೆಂಡರ್‌ನಲ್ಲಿಯ ರಜೆ ಬದಲಿಸುತ್ತದೆ. ಅದೇರೀತಿ ಒಂದು ಬಾರಿ ಕ್ಯಾಲೆಂಡರ್ ಇವೆಂಟ್ಸ್ ಘೋಷಿಸಿದ ಮೇಲೆ ರಜೆ ನೀಡಬೇಕು. ಧರ್ಮದ ಹೆಸರಿನಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದರು.

Share this article