ಜಾತಿ ಕಾಲಂನಲ್ಲಿ ಭೋವಿ, ವಡ್ಡರ್ ಎಂದು ನಮೂದಿಸಲು ಇಮ್ಮಡಿ ಸಿದ್ದರಾಮಯ್ಯಶ್ವರ ಸ್ವಾಮೀಜಿ ಸಲಹೆ

KannadaprabhaNewsNetwork | Published : May 4, 2025 1:33 AM

ಸಾರಾಂಶ

ರಾಜ್ಯ ಸರ್ಕಾರ ಒಳಮೀಸಲಾತಿ ಕುರಿತು ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿ ಮೂರು ತಿಂಗಳ ಅವಧಿಯಲ್ಲಿ ವರದಿ ಸಲ್ಲಿಸಲು ಸರ್ಕಾರ ಸೂಚಿಸಿದ ಹಿನ್ನೆಲೆ ಆಯೋಗವು ಸಾರ್ವಜನಿಕರ ಆಕ್ಷೇಪಣೆ ಸಲ್ಲಿಸಲು ತಿಳಿಸಿತ್ತು.

ಹಾವೇರಿ: ನ್ಯಾ. ಎಚ್.ಎನ್. ನಾಗಮೋಹನ್‌ದಾಸ್ ಅವರ ಏಕ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣ- ೨೦೨೫ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮೇ ೫ರಿಂದ ಪರಿಶಿಷ್ಟ ಜಾತಿ ಸಮುದಾಯ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ಸಮೀಕ್ಷೆ ಕಾರ್ಯ ಹಮ್ಮಿಕೊಳ್ಳಲಾಗಿದೆ. ದತ್ತಾಂಶ ಸ್ವೀಕರಿಸುವ ವೇಳೆ ಗಣತಿದಾರರ ಬಳಿ ಭೋವಿ ಸಮಾಜದವರು ಜಾತಿ ಕಾಲಂನಲ್ಲಿ ಭೋವಿ, ವಡ್ಡರ್ ಎಂದು ನಮೂದಿಸುವಂತೆ ಇಮ್ಮಡಿ ಸಿದ್ದರಾಮಯ್ಯಶ್ವರ ಸ್ವಾಮೀಜಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಅಖಿಲ ಕರ್ನಾಟಕ ಭೋವಿ(ವಡ್ಡರ) ಸಂಘದ ಜಿಲ್ಲಾ ಘಟಕದ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ರಾಜ್ಯ ಸರ್ಕಾರ ಒಳಮೀಸಲಾತಿ ಕುರಿತು ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿ ಮೂರು ತಿಂಗಳ ಅವಧಿಯಲ್ಲಿ ವರದಿ ಸಲ್ಲಿಸಲು ಸರ್ಕಾರ ಸೂಚಿಸಿದ ಹಿನ್ನೆಲೆ ಆಯೋಗವು ಸಾರ್ವಜನಿಕರ ಆಕ್ಷೇಪಣೆ ಸಲ್ಲಿಸಲು ತಿಳಿಸಿತ್ತು. ಎಲ್ಲ ಅಭಿಪ್ರಾಯ, ಅಕ್ಷೇಪಣೆ ಪಡೆದು ಈಗಾಗಲೇ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.

ಈ ವರದಿಯಲ್ಲಿ ಹೊಸದಾಗಿ ಜಾತಿ ಸಮೀಕ್ಷೆ ಗಣತಿ, ಸಾಮಾಜಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಕಾಲಾವಕಾಶ, ಸಿಬ್ಬಂದಿ ಮತ್ತು ಸಂಪನ್ಮೂಲ ಕೋರಿದ್ದರಿಂದ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಸಾಮಾಜಿಕ ಸ್ಥಿತಿಗತಿ, ಜನಸಂಖ್ಯೆ ಗಣತಿ ಮಾಡಲು ಆದೇಶ ಮಾಡಿದೆ ಎಂದರು.ಸಂಘದ ಜಿಲ್ಲಾ ಅಧ್ಯಕ್ಷ ರವಿ ಪೂಜಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದವರು ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ಭೋವಿ, ವಡ್ಡರ ಎಂದು ನಮೂದಿಸುವುದರ ಜತೆಗೆ ಕುಲಕಸುಬನ್ನು ಕಲ್ಲು ಒಡೆಯುವುದು, ಕಟ್ಟಡ ನಿರ್ಮಾಣ ಮಾಡುವುದು ಎನ್ನುವುದನ್ನು ದಾಖಲಿಸಬೇಕು. ಹೊಟ್ಟೆಪಾಡಿಗಾಗಿ ಕೆಲಸ ಅರಸಿ ದೂರದ ಊರುಗಳಿಗೆ ಹೋದ ಸಮಾಜದವರನ್ನು ಕರೆತಂದು ಮಾಹಿತಿ ನೀಡಲು ಮುನ್ನೆಚ್ಚರಿಕೆ ವಹಿಸಬೇಕು. ಸಮಾಜದ ನಿಖರವಾದ ಅಂಕಿ- ಸಂಖ್ಯೆಗಳನ್ನು ಸಮೀಕ್ಷಾ ಕಾರ್ಯದ ವೇಳೆ ದಾಖಲಿಸುವುದು ಮಹತ್ವದ ಕೆಲಸವಾಗಿದೆ ಎಂದರು.

ಸಭೆಯಲ್ಲಿ ಸಮಾಜದ ಮುಖಂಡರಾದ ದಾಸಪ್ಪ ಕರ್ಜಗಿ, ನಿಂಗಣ್ಣ ಹೊಸೂರ, ಬಸವರಾಜ ಹೆಸರೂರ, ಭೀಮಣ್ಣ ಬತ್ತಿಕೊಪ್ಪ, ಜಗದೀಶ್ ಸವಣೂರು, ರಮೇಶ್ ಸುತ್ತುಕೋಟಿ, ಮಹೇಶ ಕುರಂದವಾಡ, ಮಂಜುನಾಥ್ ಗುಡಗೇರಿ, ವೆಂಕಟೇಶ ಅಂಕಸಾಪುರ, ಹನುಮಂತ ತುಮ್ಮಿನಕಟ್ಟಿ, ಹನುಮಂತಪ್ಪ ಬಂಡಿವಡ್ಡರ, ವೆಂಕಟೇಶ, ಈರಣ್ಣ ಸವಣೂರ ಇತರರು ಇದ್ದರು.ಎಸ್ಸೆಸ್ಸೆಲ್ಸಿ ಪರೀಕ್ಷೆ: ದೇವಿಕಾ ಶಾಲೆಗೆ ಶೇ. 92.60 ಫಲಿತಾಂಶ

ರಾಣಿಬೆನ್ನೂರು: ಕಳೆದ ಮಾರ್ಚ್/ ಏಪ್ರಿಲ್ ತಿಂಗಳಿನಲ್ಲಿ ಜರುಗಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರದ ದೇವಿಕಾ ಪ್ರೌಢಶಾಲೆಗೆ ಶೇ. 92.60ರಷ್ಟು ಫಲಿತಾಂಶ ಲಭಿಸಿದೆ. 55 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 94 ವಿದ್ಯಾರ್ಥಿಗಳು ಪ್ರಥಮ ಸ್ಥಾನ, 31 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಸೌಂದರ್ಯ ಲಮಾಣಿ, ಮಧು ಬೆಟಗೇರಿ, ಪವನ ಡಿ.ಎನ್. ತಲಾ(ಶೇ. 97.60) ಅಂಕ ಪಡೆದು ಪ್ರಥಮ ಸ್ಥಾನ, ಅಫ್ನಾನ್‌ಖಾನ್ ಪಠಾಣ(ಶೇ. 96) ದ್ವಿತೀಯ, ಸ್ನೇಹಲತಾ ನಿಡಗುಂದಿ(ಶೇ. 95.68) ಅಂಕಗಳನ್ನು ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.

Share this article