ವಿಶ್ರಾಂತಿ ಪಡೆಯಲು ಸಿದ್ದರಾಮಯ್ಯ ಕೇರಳಕ್ಕೆ: ಸಚಿವ ಎಂ.ಬಿ. ಪಾಟೀಲ

KannadaprabhaNewsNetwork |  
Published : Jun 25, 2026, 02:45 AM IST
ಆರ್‌ಎಸ್‌ಎಸ್‌ ನವರು ದಲಿತರಿಗೆ ಮುಖ್ಯಸ್ಥರನ್ನಾಗಿ‌ ಮಾಡಲಿ: ಎಂ.ಬಿ.ಪಾಟೀಲ | Kannada Prabha

ಸಾರಾಂಶ

ಸಿದ್ದರಾಮಯ್ಯ ವಿಶ್ರಾಂತಿಗಾಗಿ ಕೇರಳಕ್ಕೆ ಹೋಗಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳಿ ಎಂದು ಸಚಿವ ಜಾರ್ಜ್ ಅವರೇ ಹೇಳಿ ಕಳುಹಿಸಿದ್ದಾರೆ. ಈ ವೇಳೆ ನಾನು ಸಹ ಅಲ್ಲೇ ಇದ್ದೆ. ಕೇರಳದಲ್ಲಿ ಸಚಿವ ಜಾರ್ಜ್ ಅವರ ಪೂರ್ವಿಕರ ಮನೆಯಿದೆ. ಅಲ್ಲಿ ವಿಶ್ರಾಂತಿಗಾಗಿ ಹೋಗಿದ್ದಾರೆ. ಅವರಿಗೂ ರೆಸ್ಟ್ ಬೇಕಲ್ಲವೇ ಎಂದು ಮಧ್ಯಮ ಹಾಗೂ ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಿದ್ದರಾಮಯ್ಯ ವಿಶ್ರಾಂತಿಗಾಗಿ ಕೇರಳಕ್ಕೆ ಹೋಗಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳಿ ಎಂದು ಸಚಿವ ಜಾರ್ಜ್ ಅವರೇ ಹೇಳಿ ಕಳುಹಿಸಿದ್ದಾರೆ. ಈ ವೇಳೆ ನಾನು ಸಹ ಅಲ್ಲೇ ಇದ್ದೆ. ಕೇರಳದಲ್ಲಿ ಸಚಿವ ಜಾರ್ಜ್ ಅವರ ಪೂರ್ವಿಕರ ಮನೆಯಿದೆ. ಅಲ್ಲಿ ವಿಶ್ರಾಂತಿಗಾಗಿ ಹೋಗಿದ್ದಾರೆ. ಅವರಿಗೂ ರೆಸ್ಟ್ ಬೇಕಲ್ಲವೇ ಎಂದು ಮಧ್ಯಮ ಹಾಗೂ ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಕೇರಳಕ್ಕೆ ತೆರಳಿದಾಗ 2017ರಲ್ಲಿ ಕಾಂಗ್ರೆಸ್‌ನ ಕೆಲ ಶಾಸಕರು ಬಿಜೆಪಿಗೆ ಹೋಗಿದ್ದರು. ಈಗ ಅಂಥದ್ದೇ ಘಟನೆ ನಡೆಯುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಸ್ಪಷ್ಟನೆ ನೀಡಿದ ಸಚಿವರು, 2017ಕ್ಕೆ ಇದಕ್ಕೆ ಯಾಕೆ ಸಂಬಂಧ ಕಲ್ಪಿಸುತ್ತೀರಿ? 2017ರಲ್ಲಿ ಕುಮಾರಸ್ವಾಮಿ ಮಾಡಿದ ತಪ್ಪುಗಳಿಂದ ಸರ್ಕಾರ ಬಿದ್ದುಹೋಗಿತ್ತು. ಅದಕ್ಕೆ ಸಿದ್ದರಾಮಯ್ಯರ ಪಾತ್ರ ಇರಲಿಲ್ಲ. 2017ರಲ್ಲಿ ಯಾರಿಂದ ಅವರ ಸರ್ಕಾರ ಹೋಯ್ತು. ಆಪರೇಷನ್ ಕಮಲ ಮೂಲಕ 17 ಶಾಸಕರ ಖರೀದಿ ಮಾಡಿ ಕುಮಾರಸ್ವಾಮಿ ಸರ್ಕಾರ ಕೆಡವಿದವರ ಜೊತೆಗೆ ಕೂಡಿದ್ದಾರೆ. ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇದನ್ನು ಅವಕಾಶವಾದಿ ರಾಜಕಾರಣವೆನ್ನುತ್ತಾರೆ. ಸಿದ್ದರಾಮಯ್ಯರು ರೆಸ್ಟ್ ತಗೋಳೋಕೆ ನಾವೆಲ್ಲ ಸಲಹೆ ನೀಡಿ ಕಳುಹಿಸಿದ್ದು, ಒಂದು ವಾರ ರೆಸ್ಟ್ ಮಾಡಿ ಎಂದರೆ ಕೇವಲ 3 ದಿನ ಮಾತ್ರ ಹೋಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಬಿಡದಿ ಟೌನ್ ಶಿಪ್ ಆರಂಭಿಸಿದ್ದೇ ಎಚ್‌ಡಿಕೆ:

ಬಿಡದಿ ಟೌನ್‌ಶಿಪ್ ನಿರ್ಮಾಣ ವಿಚಾರದಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಾದ ವಿವಾದ ವಿಚಾರವಾಗಿ ಮಾತನಾಡಿ, ಟೌನ್‌ಶಿಪ್ ವಿಚಾರದಲ್ಲಿ ಕೆಐಎಡಿಬಿ ಪಾತ್ರವಿದೆ. 2006ರಲ್ಲಿ ಕುಮಾರಸ್ವಾಮಿ ಸಿಎಂ ಇದ್ದಾಗ ಬಿಡದಿ ಟೌನ್‌ಶಿಪ್ ಯೋಜನೆ ಆರಂಭಿಸಿದ್ದರು. ಕುಮಾರಸ್ವಾಮಿಯವರೇ ನೋಟಿಫಿಕೇಷನ್ ಮಾಡಿದ್ದರು. ಡಿಎಲ್ಎಫ್‌ನವರು ಟೌನ್‌ಶಿಪ್ ಮಾಡೋಕೆ ಬಂದರು. ನಂತರ ಐಟಿ ಡಿಪಾರ್ಟಮೆಂಟ್‌ಗೆ ಕೊಡೋ ಮಾತುಗಳು ನಡೆದಿದ್ದವು. ಇದು ಕುಮಾರಸ್ವಾಮಿ ಅವರಿಂದಲೇ ಆರಂಭವಾಗಿದ್ದು, ಆಗಲೇ ಕುಮಾರಸ್ವಾಮಿ ಅವರು ಈ ಯೋಜನೆ ಕೈಬಿಡಬೇಕಿತ್ತು. ನೋಟಿಫಿಕೇಷನ್ ಕ್ಯಾನ್ಸಲ್ ಮಾಡಬೇಕಿತ್ತು. ಈಗ ಡಿ.ಕೆ.ಶಿವಕುಮಾರ್‌ ಸಿಎಂ ಆದ ಬಳಿಕ ವಿರೋಧ ಮಾಡುತ್ತಿರುವುದು ರಾಜಕೀಯಕ್ಕಾಗಿ. ಇವರ ಹೋರಾಟ ರೈತರ ಪರವಲ್ಲ, ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.

ನಿಖಿಲ್‌ ಜಮೀನಿಲ್ಲ ಎಂದು ಸ್ಪಷ್ಟೀಕರಣ ನೀಡಿದರೆ ಆಯ್ತು:

ಬಿಡದಿಯಲ್ಲಿ ಅನಿತಾ ಕುಮಾರಸ್ವಾಮಿ ಜಮೀನಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಡದಿಯಲ್ಲಿ ನನ್ನ ಪತ್ನಿ ಜಮೀನಿದೆ ಎಂದು ಕುಮಾರಸ್ವಾಮಿಯವರೇ ಈ ಹಿಂದೆ ಹೇಳಿದ್ದರು. ಅನಿತಾ ಕುಮಾರಸ್ವಾಮಿ ಅವರ ಜಮೀನು ಇಲ್ಲದಿದ್ದರೆ ಸ್ಪಷ್ಟೀಕರಣ ನೀಡಬೇಕಿತ್ತು. ನನ್ನ ತಾಯಿಯ ಜಮೀನು ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಲಿ. ಬಿಡದಿಯಲ್ಲಿ ಅನಿತಾ ಅವರ ಜಮೀನು ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರೆ ಮುಗೀತು. ಅನಿತಾ ಕುಮಾರಸ್ವಾಮಿ 100 ಎಕರೆ ಜಮೀನು ತೆಗೆದುಕೊಂಡಿದ್ದಾರೆಂದು ಕುಮಾರಸ್ವಾಮಿ ಹಿಂದೆ ಹೇಳಿಕೆ ನೀಡಿದ್ದರು. ನಮ್ಮ ಭೂಮಿ ಇಲ್ಲ ಎಂದರೆ ಅಲ್ಲಿಗೆ ಮುಗಿಯಿತು. ಅನಿತಾ ಕುಮಾರಸ್ವಾಮಿ ಅವರ ಮೇಲೆ ನನಗೆ ವೈಯಕ್ತಿಕ ದ್ವೇಷವಿಲ್ಲ, ಅನಿತಾ ನಮ್ಮ ಸಹೋದರಿ ಇದ್ದಂತೆ. ಇಷ್ಟಾಗಿಯೂ ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ ಎಂದರು.

ಸಿಎಂ ಡಿ.ಕೆ.ಶಿವಕುಮಾರ್‌ ರಿಯಲ್ ಎಸ್ಟೇಟ್ ಉದ್ಯಮಕ್ಕಾಗಿ ಬಿಡದಿ ಟೌನ್‌ಶಿಪ್ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಎಂ.ಬಿ. ಪಾಟೀಲ, 2006ರಲ್ಲಿ ರಿಯಲ್ ಎಸ್ಟೇಟ್ ಆಗಿಯೇ ಬಿಡದಿ ಟೌನ್‌ಶಿಪ್ ಮಾಡೋಕೆ ಮುಂದಾಗಿದ್ದರಾ? ವಿಜಯೇಂದ್ರ ತಂದೆ ಯಡಿಯೂರಪ್ಪ ಅವರೇ ಸಿಎಂ ಆಗಿದ್ದಾಗ ಯಾಕೆ ಡಿ ನೊಟಿಫಿಕೇಷನ್ ಮಾಡಲಿಲ್ಲ? 2006ರಲ್ಲಿ ಬಿಜೆಪಿ-ಜೆಡಿಎಸ್ ಕಾಂಗ್ರೆಸ್ ಸರ್ಕಾರಗಳಿದ್ದಾಗ ಯಾಕೆ ಯೋಜನೆ ಹಿಂಪಡೆಯಲಿಲ್ಲ?. ಇದೆಲ್ಲ ಸಂಪೂರ್ಣವಾದ ರಾಜಕಾರಣವಾಗಿದೆ ಎಂದು ಆರೋಪಿಸಿದರು.ಬಾಕ್ಸ್---

ಸಂಸದ ಜಿಗಜಿಣಗಿ ಹೇಳಿಕೆಗೆ ಖಂಡನೆ:

ಗೃಹಸಚಿವ ಪ್ರಿಯಾಂಕ ಖರ್ಗೆ ಆರ್‌ಎಸ್‌ಎಸ್‌ ಕುರಿತು ಮಾತನಾಡಿದ್ದಕ್ಕೆ ಕಿಡಿಕಾರಿದ್ದ ಸಂಸದರ ಹೇಳಿಕೆಗೆ ನಗರದಲ್ಲಿ ತಿರುಗೇಟು ನೀಡಿದ ಸಚಿವ ಎಂ.ಬಿ. ಪಾಟೀಲರು, ಸಂಸದ ರಮೇಶ ಜಿಗಜಿಣಗಿ ಆರ್‌ಎಸ್‌ಎಸ್‌ ಕುರಿತು ಹೇಳಿರುವುದು ಖಂಡನೀಯ. ಈಗಿನ ಕಾಲದಲ್ಲಿ ಸಹ ಸಮಾನತೆ ಬಗ್ಗೆ ಮಾತನಾಡದೆ ಕೀಳುಮಟ್ಟದ ಹೇಳಿಕೆ ಸರಿಯಿಲ್ಲ. ದಲಿತರು ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಬಾರದು. ಆಧುನಿಕ ಕಾಲದಲ್ಲಿ ಸಹ ಮೇಲು ಕೀಳು ಮಾತನಾಡುವುದು ಸರಿಯಿಲ್ಲ ಎಂದರು.

ರಮೇಶ ಜಿಗಜಿಣಗಿ ಆರೇಳು ಬಾರಿ ಸಂಸದರು, ಕೇಂದ್ರ ಸಚಿವರು, ರಾಜ್ಯ ಸಚಿವರು ಆದವರು, ಈ ರೀತಿ ಮಾತನಾಡಬಾರದು. ಗೃಹ ಸಚಿವ ಆದವರು ಕೇಳಿರುವುದು ಸರಿ ಇದೆ. ಆರ್‌ಎಸ್‌ಎಸ್‌ನವರು ದಲಿತರನ್ನು ಅಥವಾ ಲಿಂಗಾಯತರನ್ನು ಮುಖ್ಯಸ್ಥರನ್ನಾಗಿ ಮಾಡಲಿ ನೋಡೋಣ ಎಂದು ಸಚಿವ ಎಂಬಿಪಾ ಸವಾಲೆಸೆದರು.

ಡಾ.ಅಂಬೇಡ್ಕರ್‌ ಬರೆದ ಸಂವಿಧಾನ ಎಲ್ಲರಿಗೂ ಸಮಾನತೆ ಕೊಟ್ಟಿದೆ. ಗೃಹ ಸಚಿವರು ಕೇಳಿದ್ದು ಸರಿ ಇದೆ. ಜಿಲ್ಲೆಯಲ್ಲಿ ಸಂಸದರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್‌ ಆಗಿರುವ ಬಗ್ಗೆ ಪ್ರತಿಕ್ರಿಯಸಿ, ಅದು‌ ನನಗೆ ಗೊತ್ತಿಲ್ಲ. ಸಂಸದರು ಆರ್‌ಎಸ್‌ಎಸ್‌ ಅಷ್ಟು‌ ಭಯಾನಕ (ಡೇಂಜರ್‌) ಇದೆ ಎಂದು ಹೇಳಿದ್ದಾರೆ. ಭೀಮ್ ಆರ್ಮಿ ಕೂಡ‌ ಎಲ್ಲದಕ್ಕೂ ರೆಡಿ ಇದೆ ಎಂದು ತಿರುಗೇಟು ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಹೋರಾತ್ರಿ ಧರಣಿ ಸ್ಥಳಕ್ಕೆ ಎಂಎಲ್ಸಿ ನಿರಾಣಿ ಭೇಟಿ
20 ವರ್ಷದ ಸಮಸ್ಯೆ ಪರಿಹರಿಸಿ