ಪತ್ರಕರ್ತರು ಜೀವನದುದ್ದಕ್ಕೂ ಕಡಿಮೆ ವೇತನದಲ್ಲೇ ವೃತ್ತಿ ನಡೆಸಿ, ತಮ್ಮ ಜೀವನದ ಕೊನೆಯ ವೇಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ಇದೆ ಎಂದು ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಗೌರವಾಧ್ಯಕ್ಷ, ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಹೇಳಿದ್ದಾರೆ.
- ಒ.ಎನ್.ಸಿದ್ದಯ್ಯ ಒಡೆಯರ್‌ಗೆ ಶ್ರದ್ಧಾಂಜಲಿ ಸಲ್ಲಿಸಿ ಬಿ.ಎನ್. ಮಲ್ಲೇಶ್ ಸಲಹೆ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಪತ್ರಕರ್ತರು ಜೀವನದುದ್ದಕ್ಕೂ ಕಡಿಮೆ ವೇತನದಲ್ಲೇ ವೃತ್ತಿ ನಡೆಸಿ, ತಮ್ಮ ಜೀವನದ ಕೊನೆಯ ವೇಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ಇದೆ ಎಂದು ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಗೌರವಾಧ್ಯಕ್ಷ, ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಹೇಳಿದರು.
ನಗರದ ವಿದ್ಯಾನಗರದಲ್ಲಿ ಒ.ಎನ್. ಸಿದ್ದಯ್ಯ ಒಡೆಯರ್ ನಿಧನ ಹಿನ್ನೆಲೆ ಅವರ ನಿವಾಸದ ಮುಂದೆ ಬುಧವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಪತ್ರಕರ್ತರು ಬಾಹ್ಯವಾಗಿ ಸಮಾಜದಲ್ಲಿ ಎಷ್ಟೇ ಪ್ರಭಾವ ಅಥವಾ ಗುರುತಿಕೊಂಡಿದ್ದರೂ ಅವರ ಮನೆಯ ಆರ್ಥಿಕ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಬೇಕು. ಕೆಲಸದ ಒತ್ತಡ ಎಷ್ಟೇ ಇದ್ದರೂ ತಮ್ಮ ಮನೆಯ ವಾಸ್ತವ ಸ್ಥಿತಿ ಮತ್ತು ಆರೋಗ್ಯದ ಕಡೆಗೆ ಪತ್ರಕರ್ತರು ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.
ಸಿದ್ದಯ್ಯ ಒಡೆಯರ್ ಯಾವುದೇ ಪ್ರಶಸ್ತಿ ಬಂದರೂ ನನಗೆ ಬೇಡ, ಇತರ ಹಿರಿಯರಿಗೆ ಕೊಡಿ ಎಂದು ವಿನಮ್ರವಾಗಿ ಪ್ರಶಸ್ತಿ ನಿರಾಕರಿಸುತ್ತಿದ್ದರು. ಅಂಥವರ ಅಗಲಿಕೆಯಿಂದ ಎಲ್ಲರಿಗೂ ಶೂನ್ಯ ಭಾವನೆ ಆವರಿಸಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಹಾರೈಸಿದರು.
ವಿಜಯ ಕರ್ನಾಟಕ ದಾವಣಗೆರೆಯ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ ಮಾತನಾಡಿ, ಸಿದ್ದಯ್ಯ ಅವರು ಯಾವುದೇ ಸಮಾರಂಭಗಳಿಗೆ ಹೋದಾಗ ಕಾರ್ಯಕ್ರಮ ಪೂರ್ತಿ ಮುಗಿಯುವವರೆಗೆ ಕುಳಿತು, ಎಲ್ಲರ ಭಾಷಣವನ್ನು ಆಲಿಸಿ ವರದಿ ತಯಾರಿಸುತ್ತಿದ್ದರು. ಅವರು ಯಾರಿಗೂ ಕೆಟ್ಟದ್ದಾಗಿ ಮಾತನಾಡದೇ, ಯಾರನ್ನೂ ಎದುರು ಹಾಕಿಕೊಳ್ಳದೇ ವೃತ್ತಿಧರ್ಮ ಪಾಲಿಸುತ್ತಿದ್ದರು ಎಂದು ಸ್ಮರಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಮಾತನಾಡಿ, 25 ವರ್ಷಗಳಿಂದ ಸಿದ್ದಯ್ಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರೂ ಯಾವುದೇ ಅಹಂ ಇಲ್ಲದೇ, ಯಾರಲ್ಲೂ ತಾನೊಬ್ಬ ಪತ್ರಕರ್ತ ಎಂದು ತೋರಿಸಿಕೊಳ್ಳದೇ ಮೃದುಭಾಷಿ, ಸರಳ ಸಜ್ಜನಿಕೆಯಿಂದ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಒಟ್ಟಿನಲ್ಲಿ ಹೇಳುವುದಾದರೆ ಅವರು ಅಜಾತಶತ್ರು ಆಗಿದ್ದರು ಎಂದು ತಿಳಿಸಿದರು.
ಜನತಾವಾಣಿ ಸಂಪಾದಕ ಎಂ.ಎಸ್. ವಿಕಾಸ್, ಕನ್ನಡ ಭಾರತಿ ಸಂಪಾದಕ ಮಲ್ಲಿಕಾರ್ಜುನ ಕಬ್ಬೂರು, ಬಾ.ಮ. ಬಸವರಾಜಯ್ಯ, ಜೆ.ಎಂ.ವೀರೇಶ, ಗಣೇಶ ಕಮಲಾಪುರ, ನಿಂಗಪ್ಪ, ರಂಗನಾಥ ರಾವ್, ನಾಗೇಶ, ಅಣಬೇರು ಬಸವರಾಜ, ಶ್ರೀನಿವಾಸ, ಬಕ್ಕೇಶ ನಾಗನೂರು, ಯೋಗರಾಜ, ಆರ್.ಎಸ್. ತಿಪ್ಪೇಸ್ವಾಮಿ, ನಾಗರಾಜ ಎಸ್. ಬಡದಾಳ್, ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ್, ಏಕಬೋಟೆ ಮಂಜುನಾಥ, ಎನ್.ವಿ.ಬದರಿನಾಥ, ಕಾಡಜ್ಜಿ ಮಂಜುನಾಥ್, ಆರ್.ರವಿ, ಮಹೇಶ್ ಕಾಶೀಪುರ, ವಿಷ್ಣು ಯರಬಾಳು, ಸುರೇಶ್ ಕುಣಿಬೆಳಕೆರೆ, ರಂಗನಾಥ, ನಿಂಗರಾಜ್, ನಿಂಗಪ್ಪ, ರಾಜೇಶ್ ಇತರರು ಇದ್ದರು.
- - -
(ಬಾಕ್ಸ್)
* ಹಿರಿಯ ಪತ್ರಕರ್ತ ಎನ್.ಸಿದ್ದಯ್ಯ ಒಡೆಯರ್ ನಿಧನ: ಗಣ್ಯರ ಸಂತಾಪದಾವಣಗೆರೆ: ನಗರದ ತರಳಬಾಳು ಬಡಾವಣೆ ನಿವಾಸಿ, ಹಿರಿಯ ಪತ್ರಕರ್ತ ಕಕ್ಕರಗೊಳ್ಳದ ಎನ್.ಸಿದ್ದಯ್ಯ ಒಡೆಯರ್ (59) ಬುಧವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರಿ, ಸಹೋದರರು, ಸಹೋದರಿಯರು ಹಾಗೂ ಬಂಧು ಬಳಗ ಇದ್ದಾರೆ. ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿತು. ಜನವಾಹಿನಿ, ಸಂಯುಕ್ತ ಕರ್ನಾಟಕದಲ್ಲಿ ಉಪಸಂಪಾದಕರಾಗಿ ದುಡಿದಿದ್ದ ಅವರು ಪ್ರಸ್ತುತ ಜನತಾವಾಣಿಯಲ್ಲಿ ವರದಿಗಾರರಾಗಿದ್ದರು. ಸಮಾಜ ಸೇವೆಯಲ್ಲಿ ತೊಡಗಿದ್ದ ಅವರು, ವಿವಿಧ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಪತ್ರಿಕೋದ್ಯಮ ಹಾಗೂ ಸಮಾಜ ಸೇವೆ ಗುರುತಿಸಿ ಕರ್ನಾಟಕ ಸರ್ಕಾರ ''''''''ರಾಜ್ಯ ಯುವ'''''''' ಪ್ರಶಸ್ತಿ, ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ವರದಿಗಾರರ ಕೂಟದ ಪ್ರಶಸ್ತಿಗೆ ಭಾಜನರಾಗಿದ್ದರು. ಸಂತಾಪ: ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ, ಹರಿಹರ ಶಾಸಕ ಬಿ.ಪಿ.ಹರೀಶ್, ನಾ.ಲೋಕೇಶ ಒಡೆಯರ್, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯ್ ಕುಮಾರ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಕೆ.ಪಿ.ಕಲ್ಲಿಂಗಪ್ಪ, ಕಕ್ಕರಗೊಳ್ಳ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಪಾಲಿಕೆ ಮಾಜಿ ಸದಸ್ಯರಾದ ಎ.ನಾಗರಾಜ್, ಗಡಿಗುಡಾಳ್ ಮಂಜುನಾಥ್, ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ಸ್ನೇಹಿತರು, ಹಿರಿಯ, ಕಿರಿಯ ಪತ್ರಕರ್ತರು, ಇತರರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಸಮರ್ಥ್ ಶಾಮನೂರು ಸಂತಾಪ ಸೂಚಿಸಿದ್ದಾರೆ.- - - -26ಕೆಡಿವಿಜಿ44: ಎನ್.ಸಿದ್ದಯ್ಯ ಒಡೆಯರ್
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.