ಕನ್ನಡಪ್ರಭ ವಾರ್ತೆ ವಿಜಯಪುರ
ಶ್ರೀ ಸಿದ್ದೇಶ್ವರ ಅಪ್ಪನವರ ನಡೆ ಮತ್ತು ನುಡಿ ಎಲ್ಲರಿಗೂ ಸ್ಫೂರ್ತಿ. ಜೀವನದಲ್ಲಿ ಏನೂ ಅಪೇಕ್ಷೆ ಪಡದೆ, ಆಶಯಗಳು ಇಲ್ಲದ ಬದುಕನ್ನು ಸಿದ್ದೇಶ್ವರ ಶ್ರೀಗಳು ನಮಗೆ ಕಲಿಸಿದ್ದಾರೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದ ಜ್ಞಾನಯೋಗಾಶ್ರಮದಲ್ಲಿ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಗಳವರ ಗುರುನಮನ ಮಹೋತ್ಸವದ ನಿಮಿತ್ತ ಗ್ರಾಮೀಣ ಜನರ ಬದುಕು ವಿಷಯದ ಕುರಿತು ನಡೆದ ೬ನೇ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ದೂರದ ಊರುಗಳಿಂದ ಜನರು ಗೋಳಗುಮ್ಮಟದ ಬದಲು ಜ್ಞಾನ ಗುಮ್ಮಟ ನೋಡಲು ವಿಜಯಪುರಕ್ಕೆ ಬರುತ್ತಿರುವುದಕ್ಕೆ ನೋಡಿದರೆ ಶ್ರೀಗಳ ವ್ಯಕ್ತಿತ್ವದ ಶಕ್ತಿ ನಮಗೆ ಅರ್ಥವಾಗುತ್ತದೆ. ಅವರು ಬದುಕು ಇಡೀ ಜಗತ್ತಿಗೆ ಒಂದು ಮಾರ್ಗದರ್ಶಕ ಎಂದರೆ ತಪ್ಪಾಗಲಾರದು. ಎಲ್ಲ ತತ್ವಜ್ಞಾನಿಗಳನ್ನು ನಾವು ನೋಡಲು ಸಾಧ್ಯವಾಗಲಿಲ್ಲ. ಬದಲಿ ಎಲ್ಲ ತತ್ವಜ್ಞಾನಿಗಳ ಕುರಿತು ಶ್ರೀ ಸಿದ್ಧೇಶ್ವರ ಅಪ್ಪನವರ ಮಾತಿನ ಮೂಲಕ ನಾವು ಕಂಡಿದ್ದೇವೆ ಎಂದು ಹೇಳಿದರು.
ಶ್ರೀ ಅಪ್ಪನವರು ತಮ್ಮ ಕೊನೆಯ ದಿನಗಳಲ್ಲಿ ತೆಗೆದುಕೊಂಡು ನಿರ್ಣಯ ಇಡೀ ಸಂತ ಕುಲಕ್ಕೆ ಮಾದರಿ. ಒಬ್ಬ ಮಾಹನ್ ಸಂತನನ್ನು ನಾವು ಕಳೆದುಕೊಂಡು ಬಡವರಾಗಿದ್ದೇವೆ. ಅವರ ಹೆಸರಿನಲ್ಲಿ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಸದಾ ಕಾಲ ಶ್ರೀಗಳ ಭಕ್ತರಾಗಿ ಅವರ ಆಶಯದಂತೆ ನಡೆಯೋಣ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಪೂರ ಮಾತನಾಡಿ, ತತ್ವಜ್ಞಾನಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಬಗ್ಗೆ ಅಧ್ಯಯನವಾಗಬೇಕು. ಮತ್ತು ಪಠ್ಯಕ್ರಮದಲ್ಲಿ ಅವರ ವಿಷಯ ಸೇರಿಸುವ ಕೆಲಸ ಆಗಬೇಕು. ಇಲ್ಲೇ ಸಚಿವ ಶಿವಾನಂದ ಪಾಟೀಲ ಇದ್ದಾರೆ. ಅವರ ಮೂಲಕ ನಾನು ಪ್ಲೇಟೊ ಮತ್ತು ಅರಿಸ್ಟಾಟಲ್ ಅವರ ಮಾದರಿಯಲ್ಲಿ ಅಪ್ಪನವರ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ ವಿನಂತಿ ಮಾಡುತ್ತೇನೆ ಎಂದರು.
ಬೆಳಗಾವಿಯ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ ಜಿಗಜಿಂಪಿ ಮಾತನಾಡಿ, ಜಗತ್ತಿನಲ್ಲಿ ಇಂದು ಎಲ್ಲ ಹಳ್ಳಿಗಳು ಬದಲಾಗಿವೆ. ಆದರೆ ಆ ಸ್ವಚ್ಛ, ಸುಂದರ ಸಂತೋಷದ ಬದುಕನ್ನು ನಾವು ಇಂದಿಗೂ ಹಳ್ಳಿಗಳಲ್ಲಿ ನೋಡುತ್ತಿದ್ದೇವೆ ಎಂದರು.ಗದಗದ ಶಿವಾನಂದ ಮಠದ ಸದಾಶಿವಾನಂದ ಸ್ವಾಮಿಗಳು ಆಶೀರ್ವಚನ ನೀಡಿ, ಲಕ್ಷಾಂತರ ಜನರಿಗೆ ದೀಪವಾಗಿ ಬೆಳಕು ನೀಡುತ್ತಿದ್ದ ನಕ್ಷತ್ರ ಒಂದನ್ನು ಕಳೆದುಕೊಂಡು ಇಂದು ಎಲ್ಲರೂ ಅಂಗಳದಲ್ಲಿ ಕುಳಿತು ಹುಡುಕುವಂತಾಗಿದೆ ಎಂದು ಹೇಳಿದರು. ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಮಲಕನದೇವರ ಹಟ್ಟಿಯ ಮಲ್ಲಿಕಾರ್ಜುನ ಭಜನಾ ಮಂಡಳಿ ಪ್ರಾರ್ಥನಾ ಗೀತೆ ಹಾಡಿದರು. ಹಾಗೂ ಕಾಖಂಡಕಿಯ ಶ್ರೀ ಚನ್ನಪ್ಪ ತೋಟಕರ್ ಹಳ್ಳಿಯ ಹಾಡು ಹಾಡಿದರು. ಡಾ.ಸೋಮಶೇಖರ ವಾಲಿ ಸ್ವಾಗತಿಸಿ ಪರಿಚಯಿಸಿದರು, ಪೂಜ್ಯ ಶ್ರೀ ಪ್ರಭುಲಿಂಗ ಸ್ವಾಮೀಜಿ ನಿರೂಪಿಸಿದರು.