ಕನ್ನಡಪ್ರಭ ವಾರ್ತೆ ವಿಜಯಪುರ: ಜಿಲ್ಲೆಯ ಕೇಂದ್ರ ರೈಲು ನಿಲ್ದಾಣಕ್ಕೆ ನಡೆದಾಡುವ ದೇವರು, ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಜಿಲ್ಲಾ ಅಧ್ಯಕ್ಷ ಸಂಗಮೇಶಗೌಡ ದಾಶ್ಯಾಳ ಮಾತನಾಡಿ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ನೀಡಿದ ಕೊಡುಗೆ ಅನನ್ಯ, ಅವರ ಪ್ರೇರಣೆಯಿಂದ ಅನೇಕ ಜೀವಗಳು ಉದ್ಧಾರವಾಗಿವೆ. ಪ್ರಪಂಚದ ಸುಜ್ಞಾನವೆನ್ನಲ್ಲವನ್ನೂ ಅರಗಿಸಿಕೊಂಡು ಸರಳವಾಗಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ದಾರಿ ತೋರುತ್ತಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಸಹಸ್ರಮಾನದ ಸಂತ. ಹೀಗಾಗಿ ಅವರ ಹೆಸರನ್ನು ವಿಜಯಪುರ ಕೇಂದ್ರ ರೈಲು ನಿಲ್ದಾಣಕ್ಕೆ ನಾಮಕರಣ ಮಾಡುವುದು ಅತ್ಯಂತ ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ತಾವು ವಿಶೇಷ ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೇ, ವಿಜಯಪುರ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವಣ್ಣನ ಹೆಸರನ್ನು ನಾಮಕರಣ ಮಾಡುವುದು ಅಗತ್ಯವಾಗಿದೆ, ಕ್ರಾಂತಿಯೋಗಿ ಬಸವಣ್ಣನ ಜನ್ಮಭೂಮಿ ವಿಜಯಪುರ, ಹೀಗಾಗಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಈ ಕಾರ್ಯ ಕೈಗೊಳ್ಳಬೇಕು ಎಂದು ವಿನಂತಿಸಿದರು.