ಕನ್ನಡಪ್ರಭ ವಾರ್ತೆ ವಿಜಯಪುರ
ಜ್ಞಾನಯೋಗಾಶ್ರಮದ ಸಿದ್ದೇಶ್ವರ ಅಪ್ಪನವರ ಕೊನೆಯ ಕ್ಷಣಗಳನ್ನು ಅತ್ಯಂತ ಹತ್ತಿರದಿಂದ ನಾವೆಲ್ಲ ನೋಡಿದ್ದೇವೆ. ಅವರ ಕೊನೆಯ ಕ್ಷಣದಲ್ಲಿಯೂ ಅವರ ಮುಖದಲ್ಲಿ ನಗು ಕಡಿಮೆಯಾಗಿರಲಿಲ್ಲ ಎಂದು ಹರಿಹರ ವೀರಶೈವ-ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಹೇಳಿದರು.ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳ ಗುರುನಮನ ಮಹೋತ್ಸವ ಅಂಗವಾಗಿ ಕ್ರೀಡೆ - ಯೋಗ - ಆರೋಗ್ಯ ವಿಷಯದ ಕುರಿತು ಹಮ್ಮಿಕೊಂಡಿದ್ದ 9ನೇ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದೇಶ್ವರ ಅಪ್ಪನವರು ಏನನ್ನು ನುಡಿದರೊ ಹಾಗೇ ನಡೆದಿದ್ದಾರೆ. ಅದಕ್ಕೆ ಇಂದು ಇಷ್ಟುದೊಡ್ಡ ಸಂಖ್ಯೆಯಲ್ಲಿ ನೀವೆಲ್ಲ ಸೇರಿದ್ದೀರಿ. ಅಪ್ಪನವರ ಬದುಕೇ ಒಂದು ಉಪನಿಷತ್ತು. ಅವರ ಬದುಕನ್ನು ಅತ್ಯಂತ ಸಾಮೀಪ್ಯದಿಂದ ನೀವೆಲ್ಲರೂ ಗಮನಿಸಿದ್ದೀರಿ. ಅವರ ಬದುಕೇ ಒಂದು ಸಂದೇಶ. ಅಪ್ಪನವರಿಗೆ ಸಾವಿಲ್ಲ. ನಾವು ಯಾವಾಗ ಅವರನ್ನು ನೆನೆಯುತ್ತೇವೆಯೋ ಅವಾಗೆಲ್ಲ ಅವರು ನಮ್ಮ ಮುಂದೆ ಇರುತ್ತಾರೆ. ಪ್ರತಿ ನಿತ್ಯ ನಿಮ್ಮೆಲ್ಲರ ಒಳಗೆ ಅಪ್ಪನವರ ಜ್ಞಾನಜ್ಯೋತಿ ಬೆಳಗಲಿ. ಅವರೆಂದಿಗೂ ಅಮರ ಎಂದು ಹೇಳಿದರು.
ಬೆಂಗಳೂರಿನ ಯೋಗ ತರಬೇತುದಾರ ಓಂಕಾರ ಮಾತನಾಡಿ, ಯೋಗದ ಹಾದಿಯಲ್ಲಿ ನಡೆದರೆ ನಾವು ಅತ್ಯುತ್ತಮ ಜೀವನ ಕಳೆಯಲು ಸಾಧ್ಯ. ಯೋಗ ನಮ್ಮಜೀವನಕ್ಕೆಅಗತ್ಯವಾದದ್ದು. ನಾವು ಆರೋಗ್ಯಯುತವಾಗಿ ನಮ್ಮಜೀವನ ಕಳೆಯಲು ಸಾಧ್ಯ. ಆರೋಗ್ಯವಾಗಿದ್ದರೆ ಸಾಧನೆ ಮಾಡಲು ಮತ್ತು ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಸಿದ್ದೇಶ್ವರ ಸ್ವಾಮೀಜಿ ಜಗತ್ತಿಗೆ ತೋರಿಸಿಕೊಟ್ಟಿದ್ದು ಸರಳತೆ ಮತ್ತು ಸಜ್ಜನಿಕೆ. ಅದನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು ಎಂದರು.ಉಳವಿಯ ಆಯುರ್ವೇದ ತಜ್ಞ ಚನ್ನಬಸವ ವೈದ್ಯ ಮಾತನಾಡಿ, ಮನುಷ್ಯನ ಜೀವನದಲ್ಲಿ ಆರೋಗ್ಯ ಅತೀ ಮುಖ್ಯವಾದದ್ದು. ಆ ಆರೋಗ್ಯದಲ್ಲಿ ಆಧ್ಯಾತ್ಮಿಕ ಶಕ್ತಿ ಅಡಗಿದಾಗ ಅದು ನಮ್ಮಜೀವನ ಪರಿಪೂರ್ಣ ಆರೋಗ್ಯಯುತವಾಗಿ ಮತ್ತು ಸುಂದರವಾಗಿ ಇರುತ್ತದೆ. ಆರೋಗ್ಯದಲ್ಲಿ ಮನಸ್ಸು ಬಹಳ ಮುಖ್ಯ. ಆರೋಗ್ಯದ ವಿಷಯದಲ್ಲಿ ನಾವು ಮೂರು ವಿಷಯಗಳನ್ನು ಗಮನಿಸುತ್ತೇವೆ. ದೇಹ, ಮನಸ್ಸು, ಆತ್ಮ ಹೀಗೆ ಈ ದೇಹ ಮತ್ತು ಆತ್ಮ ಇವೆರೆಡೂ ಸಂತಸವಾಗಿರಬೇಕೆಂದರೆ ಮನಸ್ಸು ಸಂತಸವಾಗಿರಬೇಕು. ನಮ್ಮ ಮನಸ್ಸು ಸಂತಸದಿಂದ ಇದ್ದರೆ ನಮ್ಮ ಆರೋಗ್ಯಉತ್ತಮವಾಗಿರುತ್ತದೆ ಎಂದರು.
ನವದೆಹಲಿಯ ಆಯುಷ್ ಇಲಾಖೆಯ ನಿವೃತ್ತ ಕಾರ್ಯದರ್ಶಿ ಬಸವ ರೆಡ್ಡಿ ಮಾತನಾಡಿ, ಒಬ್ಬ ಯೋಗಿಯಾಗಿ ತಮ್ಮ ಬದುಕಿನುದ್ದಕ್ಕೂ ಸಂದೇಶಗಳನ್ನು ಸಾರಿ ನಮಗೆ ಪ್ರೇರಣೆಯಾದ ಸಿದ್ಧೇಶ್ವರ ಸ್ವಾಮೀಜಿಯವರ ತತ್ವಗಳನ್ನು ನಾವು ಪಾಲಿಸುತ್ತಾ ಬದುಕಬೇಕು ಎಂದರು.ಗದಗಿನ ಗಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಸಿದ್ಧರಾಮ ಮಹಾಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ಅಪ್ಪನವರು ಬಹುಮುಖಿಯಾಗಿದ್ದರು. ಅವರು ತಮ್ಮ ಬದುಕಿನುದ್ದಕ್ಕೂಆಧ್ಯಾತ್ಮಿಕ ಪ್ರವಚನಗಳನ್ನು ಮಾಡುತ್ತ ಜನರಲ್ಲಿ ತಮ್ಮ ಮಾತುಗಳನ್ನು ಬಿತ್ತಿದರು. ಅವರಿಗೆ ಗ್ರಾಮೀಣರ ಬದುಕು ಹಸನಾಗಿರಬೇಕು, ಯುವಕರು ದೇಶಭಕ್ತಿಯನ್ನು ರೂಡಿಸಿಕೊಳ್ಳಬೇಕು. ಕೃಷಿ, ಕ್ರೀಡೆ, ಆರೋಗ್ಯ, ಪರಿಸರ ಸೇರಿದಂತೆ ಹಲವಾರು ವಿಷಯಗಳ ಕುರಿತು ಚಿಂತನೆ ಮಾಡುತ್ತಿದ್ದರು ಎಂದರು.
ಷಣ್ಮುಖಾರೂಢ ಮಠದ ಪೂಜ್ಯ ಅಭಿನವ ಸಿದ್ಧಾರೂಢ ಮಹಾಸ್ವಾಮಿ, ಜ್ಞಾನಯೋಗಾಶ್ರಮದ ಪೂಜ್ಯ ಬಸವಲಿಂಗ ಮಹಾಸ್ವಾಮಿ, ಶಾಸಕ ಯಶವಂತರಾಯಗೌಡ ಪಾಟೀಲ, ಹಲವಾರು ಪೂಜ್ಯರು, ಸಾವಿರಾರು ಭಕ್ತರು ಇದ್ದರು.ಕಾರ್ಯಕ್ರಮಕ್ಕೂ ಮುನ್ನಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಬರೆದ ೫ ಪುಸ್ತಕಗಳನ್ನು ಪೂಜ್ಯರು ಬಿಡುಗಡೆ ಮಾಡಿದರು. ಮಡಿವಾಳಪ್ಪ ದೊಡಮನಿ ಪ್ರಾರ್ಥನಾ ಗೀತೆ ಹಾಡಿದರು, ಶಾಂತಿ ನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಬಿರಾದಾರ ಸ್ವಾಗತಿಸಿ ಪರಿಚಯಿಸಿದರು. ಜಗದ್ಗುರು ಶಿವಶಂಕರ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು.