-ಸರಳತೆಯ ಮೇರು ವ್ಯಕ್ತಿತ್ವ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಈ ಶತಮಾನದ ಶ್ರೇಷ್ಠ ಸಂತ ಎಂದು ಭರಮಸಾಗರ ಬಾಪೂಜಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ಮಮತ ಎನ್ ಬಣ್ಣಿಸಿದರು.ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣಮಾಸದ ಪ್ರಯುಕ್ತ ಆಯೋಜಿಸಿದ್ದ ಅನುಭಾವ ಶ್ರಾವಣ, ಶರಣ ಚಿಂತನ ಮಾಲಿಕೆಯ 20 ನೇ ದಿನ ಕಾರ್ಯಕ್ರಮದಲ್ಲಿ ವಿಜಯಪುರದ ಸಿದ್ದೇಶ್ವರ ಶ್ರೀಗಳ ಜೀವನ ಹಾಗೂ ಸಾಧನೆ ಕುರಿತು ಉಪನ್ಯಾಸ ನೀಡಿದ ಅವರು ಸರಳತೆಯ ಮೇರುವಾಗಿದ್ದ ಶ್ರೀಗಳದು ಅಪರೂಪದ ವ್ಯಕ್ತಿತ್ವ ಎಂದರು.
ಸಾಮಾನ್ಯ ಬಡರೈತ ಕುಟುಂಬದಲ್ಲಿ ಜನಿಸಿದ ಶ್ರೀಗಳು ಪ್ರಾಥಮಿಕ ವಿದ್ಯಾಭ್ಯಾಸ ಸ್ವಗ್ರಾಮದಲ್ಲಿ ಪೂರೈಸಿ ಮುಂದಿನ ಉನ್ನತ ವ್ಯಾಸಂಗವನ್ನು ಜತೆಗೆ ತತ್ವಶಾಸ್ತ್ರವನ್ನು ಕೊಲ್ಲಾಪುರ ವಿಶ್ವವಿದ್ಯಾಲಯದಿಂದ ಪಡೆಯುತ್ತಾರೆ. ಮುಂದೆ ಮಲ್ಲಿಕಾರ್ಜುನ ಶ್ರೀಗಳವರ ಪ್ರಭಾವಕ್ಕೆ ಒಳಗಾಗಿ ಅವರು ತಾವು ಹೋದ ಕಡೆಗೆ ಕರೆದುಕೊಂಡು ಹೋದ ಪರಿಣಾಮ ಪ್ರವಚನದ ನಂಟು ಹತ್ತಿಸಿಕೊಂಡರು.
ಸಿದ್ದೇಶ್ವರ ಶ್ರೀಗಳ ಪ್ರವಚನ ಅಂದರೆ ಜನ ಸಾಗರದಂತೆ ಸೇರಿ ಆಲಿಸುತ್ತಿದ್ದರು. ಸಾಹಿತ್ಯ ಸೇವೆ ಮಾಡಿ ಅನೇಕ ಕೃತಿಗಳನ್ನು ರಚಿಸಿದ್ದು ಅವೆಲ್ಲ ಮೌಲಿಕವೇ ಆಗಿವೆ. ಶ್ರೀಗಳ ನಡೆ ನುಡಿ ಮತ್ತು ವಿದ್ವತ್ತಿಗೆ ಅನೇಕ ಪ್ರಶಸ್ತಿಗಳು ಅರಸಿ ಬಂದರೂ ನಾನು ಸರಳ ಜೀವನ ನಡೆಸುವವನು ಅವ್ಯಾವ ಪ್ರಶಸ್ತಿಗಳು ಬೇಡವೆಂದು ನಯವಾಗಿ ತಿರಸ್ಕರಿಸಿದ್ದರು.
ಸಮಾರಂಭದ ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಇಂದು ಕೇವಲ ಹಣಕ್ಕೆ ಬೆಲೆ ಇದೆ. ಆದರೆ ಸಿದ್ದೇಶ್ವರ ಸ್ವಾಮೀಜಿಯವರು ಜ್ಞಾನಕ್ಕೂ ಬೆಲೆ ಇದೆ ಎನ್ನುವುದನ್ನು ತೋರಿಸಿಕೊಟ್ಟ ವಿರಳಲ್ಲಿ ಒಬ್ಬರು. ಭೌತಿಕವಾದದ್ದು ಅದೆಂದಿಗೂ ನಶ್ವರ, ಜ್ಞಾನವೊಂದೇ ಶಾಶ್ವತ ಎಂದು ನಂಬಿ ಅದರಂತೆ ನಡೆದುಕೊಂಡ ಸಂತಶ್ರೇಷ್ಠ ಎಂದು ಬಣ್ಣಿಸಿದರು.
------------
ಶ್ರಾವಣ ಮಾಸದ ಅಂಗವಾಗಿ ಬಸವಕೇಂದ್ರ ಮುರುಘಾಮಠದಲ್ಲಿ ಆಯೋಜಿಸಿದ್ದ ಶರಣ ಚಿಂತನ ಮಾಲಿಕೆ 19 ನೇ ದಿನದ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ಮಮತ ಮಾತನಾಡಿದರು.