ತಿರುಪತಿ ವಿವಿ ಅಲ್ಲಿ ಸಿದ್ದಾಂತ ಶಿಖಾಮಣಿ ಅಧ್ಯಯನ ಕೇಂದ್ರ ಪ್ರಾರಂಭ: ಕಾಶೀ ಶ್ರೀ

KannadaprabhaNewsNetwork | Published : Apr 5, 2025 12:46 AM

ಸಾರಾಂಶ

ತಿರುಪತಿ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಶ್ರೀ ಸಿದ್ದಾಂತ ಶಿಖಾಮಣಿಯ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

ಶಿವಾಚಾರ್ಯರ ಸಮ್ಮೇಳನದಲ್ಲಿ ಕಾಶೀ ಪೀಠದ ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯರು

ಕನ್ನಡಪ್ರಭ ವಾರ್ತೆ ಕೊಟ್ಟೂರು

ತಿರುಪತಿ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಶ್ರೀ ಸಿದ್ದಾಂತ ಶಿಖಾಮಣಿಯ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಈ ಅಧ್ಯಯನ ಕೇಂದ್ರಕ್ಕೆ ಬೇಕಾದ ಎಲ್ಲಾ ಬಗೆಯ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ವೀರಶೈವ ಧರ್ಮದ ಜಗದ್ಗುರು ಮತ್ತು ಶಿವಾಚಾರ್ಯರು ಮುಂದಾಗಿದ್ದಾರೆ. ಇದರ ಪ್ರಯೋಜನವನ್ನು ಅಧ್ಯಯನಕಾರರು ಪಡೆಯಬೇಕು ಎಂದು ಕಾಶೀ ಪೀಠದ ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯರು ಕರೆ ನೀಡಿದರು.

ಪಟ್ಟಣದಲ್ಲಿ ಸರ್ಕಾರಿ ಬಾಲಕರ ಪ್ರೌಢಶಾಲೆ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಪಂಚಾಚಾರ್ಯರ ಯುಗಮಾನೋತ್ಸವ ಮತ್ತು ಚಾನುಕೋಟಿ ಶ್ರೀ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಷಷ್ಠಿ ಪೂಜೆ ಸಮಾರಂಭದ 14ನೇ ದಿನವಾದ ಬುಧವಾರ ರಾತ್ರಿ ಶಿವಾಚಾರ್ಯರ ಸಮ್ಮೇಳನದಲ್ಲಿ ಮಾತನಾಡಿದರು.

ತಿರುಪತಿ ವಿವಿಯಲ್ಲಿ ಶ್ರೀ ಸಿದ್ದಾಂತ ಶಿಖಾಮಣಿ ಅಧ್ಯಯನ ಪೀಠ ಪ್ರಾರಂಭಿಸಲು ಜಗದ್ಗುರು ಮತ್ತು ಶಿವಾಚಾರ್ಯರು ಸಂಪನ್ಮೂಲಗಳನ್ನು ಕ್ರೂಡಿಕರಿಸಿ ಯಾವುದೇ ಕಾರಣಕ್ಕೂ ಈ ಅಧ್ಯಯನ ಪೀಠಕ್ಕೆ ತೊಂದರೆಯಾಗದಂತೆ ಗಮನ ಹರಿಸಿದ್ದೇವೆ ಎಂದು ಅವರು ಹೇಳಿದರು.

ಉಜ್ಜಯನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗರಾಜದೇಶೀ ಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮೀಜಿಗಳು ಮಾತನಾಡಿದರು. ಕಾಶೀ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ, ಡಾ. ಪ್ರಭುಸಾರಂಗ ದೇವ ಶಿವಾಚಾರ್ಯ ಸ್ವಾಮೀಜಿ, ಡಾ. ವಿರುಪಾಕ್ಷ ಶಿವಾಚಾರ್ಯ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಡಾ. ಮಹಾಂತ ಮಠದ ಸ್ವಾಮೀಜಿ, ಪ್ರಶಾಂತ ಶಿವಾಚಾರ್ಯ ಸ್ವಾಮೀಜಿ, ಪಂಚಾಕ್ಷರ ಸ್ವಾಮೀಜಿ ಮುಖಂಡರಾದ ಎಂಎಂಜೆ ಹರ್ಷವರ್ಧನ್, ಐ. ದಾರುಕೇಶ್, ಬೂದಿ ಶಿವಕುಮಾರ ಇತರರಿದ್ದರು.

Share this article