ಭಕ್ತಿಸಾಗರದಲ್ಲಿ ಸಿದ್ಧಾರೂಢರ ಜಲರಥೋತ್ಸವ!

KannadaprabhaNewsNetwork |  
Published : Aug 30, 2026, 01:45 AM IST
ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರ ಜಲ ರಥೋತ್ಸವವು ಶನಿವಾರ ಅಪಾರ ಭಕ್ತರ ಜಯಘೋಷಗಳ ನಡುವೆ ಅದ್ಧೂರಿಯಾಗಿ ನೆರವೇರಿತು. (ಚಿತ್ರ: ಈರಪ್ಪ ನಾಯ್ಕರ್) | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಆರಾಧ್ಯ ದೈವ ಸದ್ಗುರು ಶ್ರೀಸಿದ್ಧಾರೂಢರ 97ನೇ ಪುಣ್ಯಾರಾಧನೆ ಅಂಗವಾಗಿ ಶ್ರೀಮಠದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಶ್ರಾವಣ ಶನಿವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರೀಸಿದ್ಧಾರೂಢರ ಜಲರಥೋತ್ಸವ (ತೆಪ್ಪೋತ್ಸವ) ಅದ್ಧೂರಿಯಾಗಿ ನೆರವೇರಿತು.

ಹುಬ್ಬಳ್ಳಿ:

ಉತ್ತರ ಕರ್ನಾಟಕದ ಆರಾಧ್ಯ ದೈವ ಸದ್ಗುರು ಶ್ರೀಸಿದ್ಧಾರೂಢರ 97ನೇ ಪುಣ್ಯಾರಾಧನೆ ಅಂಗವಾಗಿ ಶ್ರೀಮಠದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಶ್ರಾವಣ ಶನಿವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರೀಸಿದ್ಧಾರೂಢರ ಜಲರಥೋತ್ಸವ (ತೆಪ್ಪೋತ್ಸವ) ಅದ್ಧೂರಿಯಾಗಿ ನೆರವೇರಿತು.

ಓಂ ನಮಃ ಶಿವಾಯ, ಸಿದ್ಧಾರೂಢ ಮಹಾರಾಜ್‌ ಕೀ ಜೈ, ಗುರುನಾಥರೂಢ ಮಹಾರಾಜ್‌ ಕೀ ಜೈ ಎಂಬ ಜಯಘೋಷಗಳು ಮೊಳಗಿದವು. ಡೊಳ್ಳು, ಹಲಗೆ ವಾದನದ ನಿನಾದಕ್ಕೆ ಭಕ್ತರ ಹರ್ಷೋದ್ಗಾರ ಸೇರಿಕೊಂಡಿತು. ಜಲರಥೋತ್ಸವ ವೀಕ್ಷಿಸಲು ಪುಷ್ಕರಣಿಯ ಸುತ್ತಲೂ ಬೆಳಗ್ಗಿನಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಬಿದಿರಿನಿಂದ ವಿಶೇಷವಾಗಿ ತಯಾರಿಸಲಾದ ತೆಪ್ಪದ ತೇರಿನಲ್ಲಿ ಸಿದ್ಧಾರೂಢರ ಹಾಗೂ ಗುರುನಾಥರೂಢರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು.

ಉತ್ಸವ ಮೂರ್ತಿಗಳನ್ನು ಹೊತ್ತ ತೆಪ್ಪದ ತೇರು ಪುಷ್ಕರಣಿಯಲ್ಲಿ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ ಹಾಗೂ ಬಾಳೆಹಣ್ಣು ಅರ್ಪಿಸಿ ಭಕ್ತಿಸೇವೆ ಸಲ್ಲಿಸಿದರು. ಡೊಳ್ಳು, ಹಲಗೆ ವಾದನದ ಸದ್ದು ಜಲರಥೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತು. ಉಭಯ ಶ್ರೀಗಳ ಉತ್ಸವ ಮೂರ್ತಿಗಳು ಕೆರೆಯ ದಡಕ್ಕೆ ಆಗಮಿಸುತ್ತಿದ್ದಂತೆ ಭಕ್ತರು ಜಯಘೋಷಗಳನ್ನು ಕೂಗಿ ಭಕ್ತಿ-ಭಾವ ಮೆರೆದರು.

ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಗೀತಾ ಕೆ.ವಿ, ರಾಜೇಶ್ವರಿ ಹೆಗಡೆ, ಕೆ.ಜಿ. ಶಾಂತಿ, ಹೇಮಾ ಕುಲಕರ್ಣಿ ಹಾಗೂ ಸಿದ್ಧಾರೂಢ ಮಠ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಬಾಳು ಮಗಜಿಕೊಂಡಿ ಅವರು ಪೂಜೆ ಸಲ್ಲಿಸಿ ಜಲರಥೋತ್ಸವಕ್ಕೆ ಚಾಲನೆ ನೀಡಿದರು.

ಪಾದಯಾತ್ರೆಯಲ್ಲಿ ಭಕ್ತರ ಆಗಮನ:

ಸಿದ್ಧಾರೂಢರ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ರಾಜ್ಯವಷ್ಟೇ ಅಲ್ಲದೇ ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ನಾಲ್ಕು ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಮಠಕ್ಕೆ ಆಗಮಿಸುತ್ತಿರುವುದು ವಿಶೇಷವಾಗಿತ್ತು. ಭಕ್ತರು ಉಭಯ ಶ್ರೀಗಳ ಗದ್ದುಗೆ, ಕೈಲಾಸ ಮಂಟಪ ಹಾಗೂ ಗದ್ದುಗೆ ದರ್ಶನ ಪಡೆದು ಪುನೀತರಾದರು. ಅಷ್ಟ ದಿಕ್ಕುಗಳಲ್ಲೂ ಶಿವನಾಮ ಮೊಳಗಿತು. ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಮಠದ ಆವರಣದಲ್ಲಿ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ಆಯೋಜಿಸಲಾಗಿತ್ತು.

ಸಿದ್ಧಾರೂಢ ಮಠ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಬಾಳು ಮಗಜಿಕೊಂಡಿ, ಉಪಾಧ್ಯಕ್ಷೆ ಗೀತಾ ಕಲಬುರ್ಗಿ, ಗೌರವ ಕಾರ್ಯದರ್ಶಿ ವಿನಾಯಕ ಘೋಡಕೆ, ಧರ್ಮದರ್ಶಿಗಳಾದ ರಮೇಶ ಬೆಳಗಾವಿ, ಡಾ. ಗೋವಿಂದ ಮಣ್ಣೂರ, ಬಸವರಾಜ ಕಲ್ಯಾಣಶೆಟ್ಟರ್, ಸರ್ವಮಂಗಳಾ ಪಾಠಕ, ಚನ್ನವೀರ ಮುಂಗರವಾಡಿ, ಉದಯಕುಮಾರ ನಾಯ್ಕ, ಶಾಮಾನಂದ ಪೂಜೇರಿ, ಕೆ.ಎಲ್. ಪಾಟೀಲ, ವಸಂತ ಸಾಲಗಟ್ಟಿ, ಅಂದಾನಪ್ಪ ಚಾಕಲಬ್ಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಗೀತದಿಂದ ಮನಸ್ಸಿಗೆ ನೆಮ್ಮದಿ, ಶಾಂತಿ
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಅನುಮತಿ