ಸಿದ್ಧೇಶ್ವರ ಶ್ರೀ ನಡೆದ ದಾರಿ ಎಲ್ಲರಿಗೂ ಮಾದರಿ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ಪ್ರಥಮ ಪುಣ್ಯಸ್ಮರಣೆ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಿದ್ಧೇಶ್ವರ ಶ್ರೀಗಳು ತೋರಿದ ನಿಸ್ವಾರ್ಥ ಸೇವೆ, ಸರಳ ಬದುಕನ್ನು ನಮ್ಮ ಬದುಕಲ್ಲಿ ಪ್ರಾಮಾಣಿಕವಾಗಿ ಅಳವಡಿಸಿಕೊಂಡರೆ ಸುಂದರ ಸಮಾಜದ ನಿರ್ಮಾಣ ಮಾಡಬಹುದು ಎಂದು ಬವಿವಿ ಸಂಘದ ಸದಸ್ಯ ಸಿದ್ರಾಮ ಮನಹಳ್ಳಿ ನುಡಿದರು.

ವಚನ ರಕ್ಷಕ ಗೆಳೆಯರ ಬಳಗ ವಿದ್ಯಾಗಿರಿ ಆಯೋಜಿಸಿದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಗುರುನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೀಳುವವರನ್ನು ಎಬ್ಬಿಸುವ ವಚನ ಮಾಡಿದ ವಚನ ರಕ್ಷಕ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯ. ವಿಶ್ವ ಕಂಡ ಶ್ರೇಷ್ಠ ಸಂತ ಸಿದ್ದೇಶ್ವರ ಬುದ್ದಿಗಳು ಬರದ ನಾಡನ್ನು ಸಮೃದ್ಧಿ ಮಾಡಿದ್ದು ಸಿದ್ದೇಶ್ವರ ಅಪ್ಪಂಗಳ ಕೊಡುಗೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ ಮಾತನಾಡಿ, ವಿಜಯಪುರ ಎರಡು ಗುಮ್ಮಟಗಳಿಗೆ ಪ್ರಸಿದ್ಧಿಯಾಗಿದೆ ವಿಶ್ವವಿಖ್ಯಾತ ಗೋಳಗುಮ್ಮಟ ಹಾಗೂ ಜ್ಞಾನ ಗುಮ್ಮಟ ತತ್ವಜ್ಞಾನಿ ಶ್ರೀ ಸಿದ್ದೇಶ್ವರ ಅಪ್ಪಂಗಳು ಎಂದರು. ಶ್ರೀಗಳ ಪ್ರವಚನವಿದ್ದಾಗ ಬಾಗಲಕೋಟೆಯ ಎಲ್ಲ ದಾರಿಗಳು ಬಂದು ಪ್ರವಚನ ಸ್ಥಳಕ್ಕೆ ಸೇರುತ್ತಿದ್ದವು ಎಂದು ನೆನಪಿಕೊಂಡರು.

ದಿವ್ಯ ಸಾನ್ನಿಧ್ಯವನ್ನು ವಿದ್ಯಾಗಿರಿಯ ಕನ್ನೂರು ಹಿರೇಮಠದ ಶ್ರೀ ವಿಶ್ವ ರಾಜೇಂದ್ರ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು.ಇದೇ ಸಂದರ್ಭದಲ್ಲಿ ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗೌರವಿಸಲಾಯಿತು. ಆಯೋಜಕರು ಸರಕಾರಿ ಶಾಲೆಯ ಹಾಗೂ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ನೋಟ ಬುಕ್, ಪೆನ್ನು ವಿತರಿಸಿದರು. ಬಡ ಮತ್ತು ದಿವ್ಯಾಂಗರಿಗೆ ಸಹಾಯ ಧನ ನೀಡಿದರು.

ಸಂಗೀತಗಾರರಾದ ಡಾ.ಸಿದ್ಧರಾಮಯ್ಯ ಮಠಪತಿ, ಡಾ.ಕಾಶಿಲಿಂಗ ಮಠ.ಡಾ.ರೇವಣಸಿದ್ದೇಶ್ವರ ಬೆಣ್ಣೂರು ಹಾಗೂ ಸಂತೋಷ ಗದ್ದನಕೇರಿ ಹಾಗೂ ಸಂಗಡಿಗರಿಂದ ಭಕ್ತಿಪೂರ್ವಕ ಸಂಗೀತ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ನಂತರ ಮಹಾಪ್ರಸಾದ ಏರ್ಪಡಿಸಲಾಗಿತ್ತು.

ಮುತ್ತು ಮಡಿವಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ ಹಂಜಿ ಸ್ವಾಗತಿಸಿದರು. ಮೋಹನ ದೇಶಪಾಂಡೆ ನಿರೂಪಿಸಿ, ವಂದಿಸಿದರು. ಗೋವಿಂದ ಖ್ಯಾದಿಕೇರಿ, ಶಿವಾನಂದ ಕುಂಬಾರ, ಶಂಕ್ರಯ್ಯ ಗಣಾಚಾರಿ, ಸಂಗಮೇಶ ಹೂಲಗೇರಿ, ಶ್ರೀಶೈಲ ಡೆಂಗಿ, ಹಣಮಂತ ತೆಗ್ಗಿ, ಸಂಗಪ್ಪಾ ಹಡಪದ ಹಾಗೂ ಈಶ್ವರ ಕುದರಿ ಕನ್ನೂರ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

Share this article