ರೈತಪರ ಚಿಂತನೆ ಹೊಂದಿದ್ದ ದಿ.ಸಿದ್ದು ನ್ಯಾಮಗೌಡ

KannadaprabhaNewsNetwork | Published : Aug 6, 2024 12:42 AM

ಸಾರಾಂಶ

ರೈತ ನಾಯಕ ಎನಿಸಿಕೊಂಡಿದ್ದ ದಿ.ಸಿದ್ದು ನ್ಯಾಮಗೌಡರು,1988ರಲ್ಲಿ ಸಾವಿರಾರು ರೈತರನ್ನು ಒಗ್ಗೂಡಿಸಿ, ಕೃಷ್ಣಾಗೆ ಅಡ್ಡಲಾಗಿ ಭಾರತದ ಮೊದಲ ಖಾಸಗಿ ಅಣೆಕಟ್ಟು ನಿರ್ಮಿಸಲು ರೈತರನ್ನು ಪ್ರೇರೇಪಿಸಿದ ರೈತ ಬಂಧುವಾಗಿದ್ದರು ಎಂದು ಕಾರ್ಖಾನೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿ.ಮಾಧವರಾಜು ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ರೈತ ನಾಯಕ ಎನಿಸಿಕೊಂಡಿದ್ದ ದಿ.ಸಿದ್ದು ನ್ಯಾಮಗೌಡರು,1988ರಲ್ಲಿ ಸಾವಿರಾರು ರೈತರನ್ನು ಒಗ್ಗೂಡಿಸಿ, ಕೃಷ್ಣಾಗೆ ಅಡ್ಡಲಾಗಿ ಭಾರತದ ಮೊದಲ ಖಾಸಗಿ ಅಣೆಕಟ್ಟು ನಿರ್ಮಿಸಲು ರೈತರನ್ನು ಪ್ರೇರೇಪಿಸಿದ ರೈತ ಬಂಧುವಾಗಿದ್ದರು ಎಂದು ಕಾರ್ಖಾನೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿ.ಮಾಧವರಾಜು ಶ್ಲಾಘಿಸಿದರು.

ತಾಲೂಕಿನ ನಾದ ಕೆಡಿ ಗ್ರಾಮದಲ್ಲಿರುವ ಜಮಖಂಡಿ ಶುಗರ್ಸ್‌ ಯುನಿಟ್‌-2 ರಲ್ಲಿ ದಿ.ಸಿದ್ದು ನ್ಯಾಮಗೌಡ ಅವರ 75 ನೇ ಹುಟ್ಟುಹಬ್ಬದ ನಿಮಿತ್ಯ ಹಮ್ಮಿಕೊಂಡ ಆರೋಗ್ಯ ಉಚಿತ ತಪಾಸಣೆ, ರಕ್ತದಾನ ಶಿಬಿರ, ಕಣ್ಣು, ಶುಗರ್‌, ಬಿಪಿ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ರೈತರ ನಾಯಕ ಎಂದು ಕರೆಸಿಕೊಳ್ಳುತ್ತಿದ್ದ ನ್ಯಾಮಗೌಡರು ರೈತರ ವಿಚಾರದಲ್ಲಿ ಎಂದಿಗೂ ರಾಜಕೀಯ ಬೆರೆಸಲಿಲ್ಲ. ರೈತರು,ಸಾರ್ವಜನಿಕರ ಸಹಕಾರದಿಂದ ಅಂದಿನ ಸರ್ಕಾರಕ್ಕೆ ಸೆಡ್ಡು ಹೊಡೆದು ಚಿಕ್ಕಪಡಸಲಗಿಯಲ್ಲಿ 1989ರಲ್ಲಿ ಬ್ಯಾರೇಜ್‌ ನಿರ್ಮಿಸಿ ಅದಕ್ಕೆ ತಮ್ಮ ಹೆಸರನ್ನು ಇಟ್ಟುಕೊಳ್ಳದೆ, ಶ್ರಮ ಬಿಂದು ಸಾಗರ ಎಂದು ಹೆಸರನ್ನು ಇಡುವುದರ ಮೂಲಕ ನಿಸ್ವಾರ್ಥವನ್ನು ಮೆರೆದಿದ್ದಾರೆ. ಜನಾನುರಾಗಿ, ರೈತಪರ ಚಿಂತಕರಾಗಿ ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಮೂಡಿಸುವಂತೆ 1991ರಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿದ ಕಿರಿಯ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದರು.ಯಾರ ಮನ ನೋಯಿಸದ, ಎಲ್ಲರೂ ನನ್ನವರೆಂದು ಅಪ್ಪಿಕೊಳ್ಳುವ ಸರಳ ಜೀವನ ನಡೆಸಿದವರು. ಜಾತ್ಯಾತೀತ ಮನೋಭಾವ ಹೊಂದಿರುವ ದಿ.ಸಿದ್ದು ನ್ಯಾಮಗೌಡ ಅವರನ್ನು ಆ ಭಾಗದ ಜನರು ಬ್ಯಾರೇಜ್‌ ಸಿದ್ದು ಎಂದೇ ಕರೆಸಿಕೊಳ್ಳುವುದರ ಮಟ್ಟಿಗೆ ರೈತಪರ ಕಾಳಜಿ ಹೊಂದಿದ್ದರು ಎಂದರು.ಅಂದು ರೈತಪರ ಚಿಂತೆನೆಯೊಂದಿಗೆ ನಿರ್ಮಿಸಿದ ಬ್ಯಾರೇಜ್‌ ಇಂದು ಬೇಸಿಗೆ ಕಾಲದಲ್ಲಿ 3 ಟಿಎಂಸಿ ನೀರು ನಿಲ್ಲುವಂತಾಗಿದೆ. ಅಲ್ಲದೆ, ರೈತರ ಬಾಳಿಗೆ ಆಸರೆಯಾಗಿದೆ. ಜಮಖಂಡಿ, ನಾದ ಕೆಡಿ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಕಬ್ಬುಬೆಳೆಗಾರರಿಗೆ ಆಸರೆಯಾಗಿದ್ದಾರೆ. ಜತೆಗೆ ಸಾವಿರಾರು ಜನರಿಗೆ ಉದ್ಯೋಗ ನೀಡಿ, ಉದ್ಯೋಗದಾತ ಎನಿಸಿಕೊಂಡಿದ್ದಾರೆ ಎಂದು ತಿಳಿಸಿದರು.ಜಿಲ್ಲಾ ಸರ್ಕಾರಿ ರಕ್ತಘಟಕದ ಅಧಿಕಾರಿ ಎಂ.ಎಸ್.ಬಿರಾದಾರ, ಸುಮಿತ್ರಾ ಮಮದಾಪೂರ, ಎಂ.ಸೋಮಶೇಖರ, ಬಿ.ಬಿ.ಡೊರ್ಲೆ, ಎ.ಎಸ್‌.ಕರ್ಣಿ, ಎಂ.ಎಸ್‌.ಕೊತಿನಶೆಟ್ಟಿ, ಎಸ್‌.ಬಿ.ಮಾವಿನಹಳ್ಳಿ ಹಾಗೂ ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕ ವರ್ಗ, ಸಿಬ್ಬಂದಿ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕಬೇವನೂರದ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

Share this article