ದಸರಾ ಬಳಿಕ ಸಿದ್ದರಾಮಯ್ಯ ರಾಜೀನಾಮೆ- ಡಿ.ಕೆ.ಶಿವಕುಮಾರ್ ಅಷ್ಟೇ ಅಲ್ಲ ಮುಖ್ಯಮಂತ್ರಿ ಹುದ್ದೆ ಮೇಲೆ ಏಳೆಂಟು ಟವಲ್: ಬಿವೈವಿ

KannadaprabhaNewsNetwork |  
Published : Oct 07, 2024, 01:35 AM ISTUpdated : Oct 07, 2024, 08:06 AM IST
BY Vijayendra

ಸಾರಾಂಶ

ಮುಡಾ ಅಕ್ರಮ ಸಂಬಂಧ ನಾಡಹಬ್ಬ ದಸರಾ ಬಳಿಕ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ.

 ಮೈಸೂರು : ಮುಡಾ ಅಕ್ರಮ ಸಂಬಂಧ ನಾಡಹಬ್ಬ ದಸರಾ ಬಳಿಕ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ. ಇದು ರಾಜಕೀಯ ಹೇಳಿಕೆಯಲ್ಲ. ನಮ್ಮ ಪಾದಯಾತ್ರೆಯ ಸಮಾರೋಪದಿಂದಲೇ ಅವರ ರಾಜೀನಾಮೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಯಾವುದೇ ಸಂದರ್ಭದಲ್ಲಿಯಾದರೂ ರಾಜೀನಾಮೆ ನೀಡಬಹುದು.

 ಹೈಕಮಾಂಡ್‌ ರಾಜೀನಾಮೆ ಪಡೆಯುವ ಚಿಂತನೆ ನಡೆಸಿದೆ. ಹೈಕಮಾಂಡ್ ಏನು ಚರ್ಚೆ ನಡೆಸುತ್ತಿದೆ ಎಂಬುದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ನಮ್ಮ ಉದ್ದೇಶ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಬೇಕು ಎಂಬುದಲ್ಲ. ಬದಲಾಗಿ ಭ್ರಷ್ಟ ಕಾಂಗ್ರೆಸ್ ಮುಖ್ಯಮಂತ್ರಿ ರಾಜ್ಯಕ್ಕೆ ಶಾಪವಾಗಿದ್ದು, ಅವರು ಕೆಳಗಿಳಿಯಬೇಕು ಎಂಬುದಷ್ಟೇ ಆಗಿದೆ ಎಂದರು.

ಡಿ.ಕೆ.ಶಿವಕುಮಾರ್ ಅಷ್ಟೇ ಅಲ್ಲ, ಏಳೆಂಟು ಜನ ಮುಖ್ಯಮಂತ್ರಿ ಹುದ್ದೆ ಮೇಲೆ ಟವಲ್ ಹಾಕಿ ಕೂತಿದ್ದಾರೆ. ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದು ನಮಗೆ ಗೊತ್ತಿಲ್ಲ. ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಆದರೆ, ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಸತ್ಯ ಎಂದರು.ಸಿದ್ದರಾಮಯ್ಯನವರು ಈಗ ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ‌. ಅಂತಹ ಕೆಟ್ಟ ಪರಿಸ್ಥಿತಿ ಅವರಿಗೆ ಬಂದೊದಗಿದೆ. ಮತ್ತೊಂದು ಕಡೆ ಸಚಿವರು ರಾಜ್ಯ ಪ್ರವಾಸ ಮಾಡುತ್ತಿಲ್ಲ. ಅಭಿವೃದ್ಧಿ ಕೆಲಸಗಳ ಮಾತೇ ಇಲ್ಲ. ಮೇಲ್ನೋಟಕ್ಕೆ ಕಾಂಗ್ರೆಸ್‌ನವರು ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿ ಇರುತ್ತಾರೆ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಸತೀಶ್ ಜಾರಕಿಹೊಳಿ ಅವರನ್ನು ದೆಹಲಿಗೆ ಸಿದ್ದರಾಮಯ್ಯ ಅವರೇ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಮುಡಾದಿಂದ ಪಡೆದ ಹದಿನಾಲ್ಕು ಸೈಟುಗಳನ್ನು ಮರಳಿ ಕೊಡಬೇಕಾದರೆ 64 ಕೋಟಿ ರು.ಕೊಡಿ ಎನ್ನುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಯಾಕೆ ಏಕಾಏಕಿ ಸೈಟು ಹಿಂದಿರುಗಿಸಿದ್ದಾರೆ? ಮುಡಾ ಪ್ರಕರಣ ಕೇವಲ 14 ಸೈಟ್ ವಿಚಾರದ್ದಲ್ಲ, ಸಾವಿರಾರು ಕೋಟಿ ರು. ಇದರಲ್ಲಿ ಲೂಟಿಯಾಗಿದೆ. ಈ ಬಗ್ಗೆ ಸದನದಲ್ಲಿ ಚರ್ಚೆ ಆಯಿತು. ಆಗ ಯಾವುದೇ ಹಗರಣವೇ ಆಗಿಲ್ಲ, ಅದರ ಬಗ್ಗೆ ಚರ್ಚೆಯ ಅವಶ್ಯಕತೆಯೇ ಇಲ್ಲ ಎಂದರು. 

ಬಳಿಕ ಮುಖ್ಯಮಂತ್ರಿ ಅವರೇ ತನಿಖೆಗೆ ಆದೇಶಿಸಿದರು ಎಂದು ಹೇಳಿದರು.ಈಗ ಸಿದ್ದರಾಮಯ್ಯ ಅವರ ಸ್ಥಿತಿ ಎಲ್ಲಿಗೆ ಬಂತು? ಈಗ ಹೇಗೆ ಸಲೀಸಾಗಿ 14 ನಿವೇಶನಗಳನ್ನು ವಾಪಸ್‌ ಕೊಟ್ಟರು. ಸಿದ್ದರಾಮಯ್ಯ ಅವರಿಗೆ ಈಗ ಜ್ಞಾನೋದಯವಾಗಿದೆ. 14 ಸೈಟ್ ಅವರ ಬುಡಕ್ಕೇ ಬಂದಿದೆ ಎಂಬ ಅರಿವಾಗಿದೆ ಎಂದರು.ಇದೇ ವೇಳೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿಲ್ಲ ಎಂಬ ಜೆಡಿಎಸ್‌ ಮುಖಂಡ ಜಿ.ಟಿ.ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಜಿ.ಟಿ.ದೇವೇಗೌಡರನ್ನು ಕೇಳಿಕೊಂಡು ಬಿಜೆಪಿಯವರು ಮೈಸೂರು ಚಲೋ ಪಾದಯಾತ್ರೆ ಮಾಡಿಲ್ಲ. ಅದು ವಿಪಕ್ಷಗಳ ಜವಾಬ್ದಾರಿ. ಭ್ರಷ್ಟ ಮುಖ್ಯಮಂತ್ರಿ, ಭ್ರಷ್ಟ ಸರ್ಕಾರದ ವಿರುದ್ಧ ನಾವು ಪ್ರಾಮಾಣಿಕ ಹೋರಾಟ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ