ಹಗರಣಗಳಿಂದಾಗಿ ಬುರ್ಖಾ ಧರಿಸಿರುವ ಸಿದ್ದು ಸರ್ಕಾರ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

KannadaprabhaNewsNetwork | Updated : Apr 22 2025, 06:34 AM IST

ಸಾರಾಂಶ

 ಹಗರಣಗಳ ಸುಳಿಯಲ್ಲೇ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರು ಬುರ್ಖಾ ಹಾಕಿಕೊಂಡು ಸುತ್ತಾಡುವ ಸ್ಥಿತಿ ತಲುಪಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

  ದಾವಣಗೆರೆ :  ಬೆಲೆ ಏರಿಕೆ, ಭ್ರಷ್ಟಾಚಾರ, ವಾಲ್ಮೀಕಿ ನಿಗಮದ ಹಗರಣ, ಮುಡಾ ಸೈಟ್ ಹಗರಣ, ಹನಿಟ್ರ್ಯಾಪ್‌ ಸೇರಿದಂತೆ ಹಗರಣಗಳ ಸುಳಿಯಲ್ಲೇ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರು ಬುರ್ಖಾ ಹಾಕಿಕೊಂಡು ಸುತ್ತಾಡುವ ಸ್ಥಿತಿ ತಲುಪಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಸೋಮವಾರ ಬಿಜೆಪಿಯಿಂದ ಮೂರನೇ ಹಂತದ ಜನಾಕ್ರೋಶ ಯಾತ್ರೆಯ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಮಹದೇವಪ್ಪ ನಿನಗೂ ಫ್ರೀ, ಕಾಕಾ ಪಾಟೀಲ ನಿನಗೂ ಫ್ರೀ ಅಂತಾ ಹೇಳಿ ಜನರನ್ನು ಭ್ರಮೆಯಲ್ಲಿಸಿದ್ದಾರೆ ಎಂದರು.

ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರ ನೀಡಿದ್ದ ಹಣದಿಂದಲೇ ರಾಜ್ಯದಲ್ಲಿ ಅಷ್ಟೋ ಇಷ್ಟೋ ಕೆಲಸ ಆಗುತ್ತಿವೆ, ಗುದ್ದಲಿ ಪೂಜೆ ನೆರವೇರುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ 2 ವರ್ಷದಲ್ಲಿ ಗುದ್ದಲಿಯನ್ನೇ ತೆಗೆದಿಟ್ಟಿದ್ದಾರೆ. ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ₹40 ಸಾವಿರ ಕೋಟಿಗಳನ್ನೂ ಗ್ಯಾರಂಟಿಗಳಿಗೆ ಬಳಸಿರುವ ಸಿದ್ದರಾಮಯ್ಯನವರೇ ಇದೇನಾ ಸಾಮಾಜಿಕ ನ್ಯಾಯವೇ ಎಂದು ಪ್ರಶ್ನಿಸಿದರು.

ಜಾತಿ, ಧರ್ಮಗಳ ಮಧ್ಯೆ ಕಂದಕ:

ಕಾಂಗ್ರೆಸ್ ಅಧಿಕಾರಕ್ಕೆ ಬರುಲು ಸಾಧ್ಯವಿಲ್ಲವೆಂಬ ಮಾಹಿತಿ ಸಿಗುತ್ತಲೇ 2018ರಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನೇ ಒಡೆಯಲೆತ್ನಿಸಿದ್ದರು ಸಿದ್ದರಾಮಯ್ಯ. ಈಗ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಜಾತಿ ಜನಗಣತಿ ವಿಚಾರ ಹರಿಯಬಿಟ್ಟು, ಜಾತಿ-ಧರ್ಮಗಳ ಮಧ್ಯೆ ಕಂದಕ ಸೃಷ್ಟಿ ಮಾಡುತ್ತಿದ್ದಾರೆ. ಪ್ರತ್ಯೇಕ ಧರ್ಮ ಮಾಡಲು ಹೊರಟಿದ್ದಕ್ಕೆ ಚುನಾವಣೆಯಲ್ಲಿ ಆಗ ಜನರು ತಕ್ಕ ಪಾಠ ಕಲಿಸಿದ್ದರು ಎಂದರು.

ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ.4ರಷ್ಟು ಮುಸ್ಲಿಮರಿಗೆ ಮೀಸಲಾತಿ, ಮುಸ್ಲಿಂ ಬಡ ಯುವತಿಯರ ಮದುವೆಗೆ ₹50 ಸಾವಿರ ಸಹಾಯಧನ, ಮುಸ್ಲಿಂ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ₹30 ಲಕ್ಷ ನೀಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇಂತಹ ಯೋಜನೆಗಳು ಹಿಂದುಗಳಿಗೆ ಯಾಕಿಲ್ಲ ಸಿದ್ದರಾಮಯ್ಯನವರೇ? ಹಿಂದುಗಳಲ್ಲಿ ಬಡ ಹೆಣ್ಣು ಮಕ್ಕಳಿಲ್ಲವೇ? ಹಿಂದುಗಳಲ್ಲಿ ಬಡ ಪ್ರತಿಭಾವಂತ ಮಕ್ಕಳಿಲ್ಲವೇ? ಮುಸ್ಲಿಮರಿಗೆ ನೀಡುವ ಯೋಜನೆ, ಘೋಷಣೆಗಳು ಯಾಕೆ ಹಿಂದುಗಳಿಗೆ ಇಲ್ಲ ಎಂದು ಅವರು ಪ್ರಶ್ನಿಸಿದರು.

ಜಾತಿ ಜನಗಣತಿ ಬಗ್ಗೆ ಅರಿವು ಮೂಡಿಸಲು ಹೋದರೆ ಕಾಂತರಾಜು ವರದಿ ಅನುಷ್ಠಾನಕ್ಕೆ ವಿಶೇಷ ಸಂಪುಟ ಸಭೆಯನ್ನು ಸಿಎಂ ಸಿದ್ದರಾಮಯ್ಯ ಕರೆಯುತ್ತಾರೆ. ಇಂತಹ ವರದಿ ಅನುಷ್ಠಾನಕ್ಕೆ ತರಲು ಸಾಧ್ಯವೇ ಇಲ್ಲ. ಸಿಎಂ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಇದು ಸಿದ್ದರಾಮಯ್ಯ ತೋರುತ್ತಿರುವ ದುರ್ಬುದ್ಧಿಯೇ ಹೊರತು, ಸದುದ್ದೇಶದಿಂದ ಕೂಡಿದ್ದಲ್ಲ.

- ಬಿ.ವೈ.ವಿಜಯೇಂದ್ರ, ರಾಜ್ಯಾಧ್ಯಕ್ಷ, ಬಿಜೆಪಿ

Share this article