ಕನ್ನಡಪ್ರಭ ವಾರ್ತೆ ಮಂಗಳೂರು
ಸಿದ್ದರಾಮಯ್ಯ ಅವರ ಆಡಳಿತ ನೋಡಿದರೆ ಅವರು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಕಾಂಗ್ರೆಸ್ ಮುಖ್ಯಮಂತ್ರಿಯೋ ಎಂಬ ಅನುಮಾನ ಬರುತ್ತಿದೆ. ಮಾತ್ರವಲ್ಲ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿಎಂ ಕುರ್ಚಿ ಕಸಿಯುವ ಭೀತಿಯಲ್ಲಿ ಸಿದ್ದರಾಮಯ್ಯ ಅವರು ಬೆಂಗಳೂರು ಬಿಟ್ಟು ಹೊರಗಡೆ ಹೋಗಲು ಹಿಂಜರಿಯುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಟೀಕಿಸಿದ್ದಾರೆ.ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಮತ್ತು ಮುಸ್ಲಿಂ ಓಲೈಕೆ ವಿರೋಧಿಸಿ ರಾಜ್ಯ ಬಿಜೆಪಿ ಮಂಗಳೂರಿನಲ್ಲಿ ಬುಧವಾರ ಹಮ್ಮಿಕೊಂಡ ಪ್ರಥಮ ಹಂತದ ಜನಾಕ್ರೋಶ ಯಾತ್ರೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಪ್ರವಾಸಕ್ಕೆ ತೆರಳಿದರೆ ತನ್ನ ಸಿಎಂ ಕುರ್ಚಿಯನ್ನು ಡಿಕೆಶಿ ಕಸಿದುಬಿಡುವ ಭೀತಿಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಇನ್ನೊಂದೆಡೆ ರಾಜ್ಯ ಪ್ರವಾಸ ನಡೆಸಿದರೆ ಜನತೆ ತಲೆ ಬಗ್ಗಿಸಿ ಎಲ್ಲಿ ಬಡಿಗೆಯಲ್ಲಿ ಹೊಡೆಯುತ್ತಾರೋ ಎಂಬ ಆತಂಕ ಸಿಎಂ ಸಿದ್ದರಾಮಯ್ಯ ಅವರನ್ನು ಕಾಡಿದಂತಿದೆ ಎಂದು ವಿಜಯೇಂದ್ರ ಲೇವಡಿ ಮಾಡಿದರು.ಯಾವುದೇ ಶಾಸಕರಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ. ಶಾಸಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳುತ್ತಿದ್ದಾರೆ. ಶಾಸಕ ಬಿ.ಆರ್.ಪಾಟೀಲ್ ಅವರು ಗ್ಯಾರಂಟಿ ಯೋಜನೆಯಿಂದ ಅನುದಾನ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಆರ್.ವಿ.ದೇಶಪಾಂಡೆ ಅವರು ಶಾಸಕನಾಗಿ ಎರಡು ವರ್ಷವಾದರೂ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ 50ಕ್ಕೂ ಅಧಿಕ ವಸ್ತುಗಳ ಬೆಲೆ ಏರಿಕೆ ಅಗಿದೆ. ಮಾತೆತ್ತಿದರೆ ಕೇಂದ್ರ ಸರ್ಕಾರವನ್ನು ದೂರುತ್ತಾರೆ, ಪ್ರಧಾನಿ ಮೋದಿ ವಿರುದ್ಧ ಮಾತನಾಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಸಂಘರ್ಷದ ಹಾದಿ ತುಳಿದಿದ್ದೀರಿ, ಕರ್ನಾಟಕದಲ್ಲಿ ಇದು ಜನವಿರೋಧಿ ಮತ್ತು ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರವಾಗಿದೆ. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ಒನ್ ಆಗಿದೆ ಎಂದು ಅವರು ಆರೋಪಿಸಿದರು.ದೇಶದ್ರೋಹಿಗೆ ಗುಂಡಿಕ್ಕುತ್ತಿದ್ದೆವು:
ರಾಜ್ಯದಲ್ಲಿ ಹಿಂದೂಗಳಿಗೆ ಅಪಮಾನ ಮಾಡುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಮಾಡಿದ ದೇಶದ್ರೋಹಿಗೆ ಮತ್ತೊಬ್ಬ ದೇಶದ್ರೋಹಿಗೆ ಮುತ್ತಿಡುತ್ತಾನೆ. ಯಡಿಯೂರಪ್ಪ ಸರ್ಕಾರ ಇದ್ದಿದ್ದರೆ ಆ ದೇಶದ್ರೋಹಿಗೆ ಅಲ್ಲೇ ಗುಂಡಿಕ್ಕುತ್ತಿದ್ದೆವು. ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡಬೇಕಿದೆ. ಸಿದ್ದರಾಮಯ್ಯ ಬಜೆಟ್‌ನಲ್ಲಿ ಮುಸ್ಲಿಮರಿಗೆ ಮೀಸಲಾತಿ ಕೊಡುತ್ತಿದ್ದಾರೆ. ಇಂತಹ ಹಿಂದೂ ವಿರೋಧಿ ಸರ್ಕಾರವನ್ನು ಬಿಜೆಪಿ ಕಾರ್ಯಕರ್ತರು ಕಿತ್ತು ಹಾಕುತ್ತಾರೆ ಎಂದು ವಿಜಯೇಂದ್ರ ಗುಡುಗಿದರು.ತಾರ್ಕಿಕ ಅಂತ್ಯ ವರೆಗೆ ಹೋರಾಟ:
ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಮಾತನಾಡಿ, ರಾಜ್ಯದ ಇತಿಹಾಸದಲ್ಲೇ ಸಿದ್ದು, ಡಿಕೆಶಿ ಅವರದ್ದು ಅತ್ಯಂತ ಭ್ರಷ್ಟ ಸರ್ಕಾರ. ಅಲ್ಲಾವುದ್ದೀನ್ ಖಿಲ್ಜಿ, ಮೊಹಮ್ಮದ್ ಬಿನ್ ತುಘಲಕ್‌ಗಿಂತ ಭ್ರಷ್ಟ ಸರ್ಕಾರ ಇದಾಗಿದೆ. ಸಿದ್ದರಾಮಯ್ಯ ಅವರು ಜನರ ಮೇಲೆ ಸವಾರಿ ನಡೆಸುತ್ತಿದ್ದಾರೆ. ಬಿಜೆಪಿಯ ಜನಾಕ್ರೋಶ ಪಾದಯಾತ್ರೆಯನ್ನು ಟೀಕಿಸುವ ಸಿದ್ದರಾಮಯ್ಯ, ಕಾಂಗ್ರೆಸಿಗರು ಹಿಂದೆ ಯಾಕೆ ಬಳ್ಳಾರಿ ಪಾದಯಾತ್ರೆ ನಡೆಸಿದ್ದರು ಎಂದು ಪ್ರಶ್ನಿಸಿದರು. ಸಿದ್ದು ಸರ್ಕಾರದ ವಿರುದ್ಧ ತಾರ್ಕಿಕ ಅಂತ್ಯ ವರೆಗೆ ಈ ಹೋರಾಟ ಮುಂದುವರಿಯಲಿದೆ ಎಂದರು.ಸಿದ್ದುಗೂ ಮುತ್ತಿಡುತ್ತಾರೆ!:
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಬಿಜೆಪಿ ಕಾರ್ಯಕರ್ತನನ್ನು ಕೊಂದ ಆರೋಪಿಗೆ ಕೋರ್ಟ್‌ಗೆ ಕರೆತಂದಾಗ ಮುತ್ತಿಡುತ್ತಾರೆ. ಸಿದ್ದರಾಮಯ್ಯ ನೀವು ಕೂಡ ಮಂಗಳೂರಿಗೆ ಬನ್ನಿ, ನಿಮಗೂ ಮುತ್ತಿಡುತ್ತಾರೆ ಎಂದು ಅಣಕಿಸಿದರು. ಐದು ಗ್ಯಾರಂಟಿಗಳಲ್ಲಿ ಐದು ವರ್ಷ ಕಳೆಯಲು ಆಟ ಆಡುತ್ತಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಕಾಪಾಡಲು ಇಲ್ಲಿನ ಹಣ ಹೋಗಬೇಕು. ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕೊಡಲು ಸಂವಿಧಾನ ಬದಲಾಯಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಇದೇ ಕಾಂಗ್ರೆಸಿಗರು ಸಂವಿಧಾನ ಬದಲಾಯಿಸಲು ಹೊರಟಿದ್ದಾರೆ ಎಂದು ಬಿಜೆಪಿ ಮೇಲೆ ಅನವಶ್ಯಕ ಗೂಬೆ ಕೂರಿಸುತ್ತಿದ್ದಾರೆ. ಹಾಗಾಗಿ ನಾವು ಇವತ್ತು ಜನರ ಬಳಿ ಹೋಗಬೇಕು. ಕಾಂಗ್ರೆಸ್ ಅಟ್ಟಹಾಸ ನಿಲ್ಲಿಸೋವರೆಗೆ ನಾವು ವಿರಮಿಸಬಾರದು ಎಂದರು.ನಮ್ಮ ಜೀವಕ್ಕೆ ಭದ್ರತೆ ಇಲ್ಲ:
ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ನಮ್ಮ ಜೀವಕ್ಕೆ ಭದ್ರತೆ, ಗ್ಯಾರಂಟಿ ಇಲ್ಲದ ಪರಿಸ್ಥಿತಿ ಕರ್ನಾಟಕದಲ್ಲಿ ಇದೆ. ಜಿಹಾದಿಗಳು ಎದ್ದು ನಿಂತು ಹಿಂದೂಗಳನ್ನು ಹತ್ಯೆ ಮಾಡುವ ಕೆಲಸ ನಡೆಯುತ್ತಿದೆ. ನಮ್ಮ ಯಾವುದೇ ಕಾರ್ಯಕರ್ತರು ಹೆದರಬೇಡಿ, ನಾವಿದ್ದೇವೆ. ಹಿಂದೂ ಕಾರ್ಯಕರ್ತರ ಮೇಲೆ ಒತ್ತಡ ತಂದು ಆತ್ಮಹತ್ಯೆ ಮಾಡಿಕೊಳ್ಳವಂತೆ ಮಾಡುತ್ತಿದ್ದಾರೆ. ಹೀಗಾಗಿ ಇದೆಲ್ಲಕ್ಕೂ ನಾವು ಉತ್ತರ ಕೊಡಬೇಕಿದೆ, ನಾವು ಸುಮ್ಮನೆ ಇರಬಾರದು. ನಮ್ಮ ಸರ್ಕಾರ ಬಂದರೆ ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ತೆಗೀತೇವೆ ಎಂದಿದ್ದೆವು. ಆದರೆ ಅದು ನಮ್ಮಿಂದ ಆಗಿಲ್ಲ, ಆದರೆ ಕಾಂಗ್ರೆಸ್ ಸರ್ಕಾರ ಅವರಿಗೆ ಬೇಕಾದವರ ಕೇಸ್ ವಾಪಸ್ ಪಡೆದಿದೆ ಎಂದರು.ಗ್ರಾಮ ಗ್ರಾಮಗಳಲ್ಲಿ ಹೋರಾಟ:
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸುನಿಲ್ ಕುಮಾರ್ ಮಾತನಾಡಿ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಏನೇನು ಅಭಿವೃದ್ಧಿ ಆಗಿಲ್ಲ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಟಿಪ್ಪು ಜಯಂತಿ, ಶಾದಿಭಾಗ್ಯ ನೀಡಿತ್ತು. ಈ ಎರಡು ವರ್ಷದಲ್ಲಿ ಬಿಟ್ಟಿ ಭಾಗ್ಯ, ಮುಸ್ಲಿಮರಿಗೆ ಶೇ.4ರ ಮೀಸಲಾತಿ ಬಿಟ್ಟರೆ ಹಿಂದುಗಳನ್ನು ಅವಹೇಳನ ಮಾಡುವ, ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ನಡೆಯುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಜನತೆ ಗ್ರಾಮ ಗ್ರಾಮಗಳಲ್ಲಿ ಹೋರಾಟ ನಡೆಸಲಿದ್ದಾರೆ ಎಂದರು. ಸಿದ್ದು ಸರ್ಕಾರ ವಿರುದ್ಧ ಹೋರಾಟ:ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಈ ಹೋರಾಟ ಆರಂಭ ಮಾತ್ರ, ದಪ್ಪ ಚರ್ಮದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾನಮರ್ಯಾದೆ ಕಳೆದುಕೊಂಡಿದೆ. ಸೋತ ಅಭ್ಯರ್ಥಿಗಳು ಕೂಡ ತಮ್ಮ ಲೆಟರ್‌ಹೆಡ್ ಬಳಸಿ ಅಧಿಕಾರಿಗಳ ವರ್ಗಾವಣೆ ಮಾಡಿಸುತ್ತಿದ್ದಾರೆ. ಗ್ರಾಮ, ಬೂತ್‌ಗಳಲ್ಲಿ ಹೋರಾಟ ನಡೆಯಬೇಕಿದ್ದು, ಸಿದ್ದು ಸರ್ಕಾರ ತೊಲಗಿಸುವ ವರೆಗೆ ಹೋರಾಟ ನಿಲ್ಲಬಾರದು ಎಂದರು.
ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಹರೀಶ್ ಪೂಂಜಾ, ಭಾಗೀರಥಿ, ಸಿಮೆಂಟ್ ಮಂಜು, ಕಿಶೋರ್ ಕುಮಾರ್, ವಿಧಾನ ಪರಿಷತ್ ಮುಖ್ಯ ಸಚೇತಕ ರವಿ ಕುಮಾರ್, ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಶಾಸಕರಾದ ಯೋಗೀಶ್ ಭಟ್, ಅಂಗಾರ, ಸಂಜೀವ ಮಠಂದೂರು, ಪ್ರೀತಂ ಗೌಡ, ಮೋನಪ್ಪ ಭಂಡಾರಿ, ಜಿಲ್ಲಾ ಪ್ರಭಾರಿ ಉದಯ ಕುಮಾರ್, ಮುಖಂಡರಾದ ರಾಜೇಶ್ ಕಾವೇರಿ, ದಿವಾಕರ್, ಯತೀಶ್ ಆರ್ವಾರ್, ಪ್ರೇಮಾನಂದ ಶೆಟ್ಟಿ, ಆಶಾ ತಿಮ್ಮಪ್ಪ ಮತ್ತಿತರರಿದ್ದರು.
ತಿಲಕ್‌ರಾಜ್ ಕೃಷ್ಣಾಪುರ ನಿರೂಪಿಸಿದರು.ದ.ಕ. ಜಿಲ್ಲೆ ಕರ್ನಾಟಕದಲ್ಲಿ ಇಲ್ಲವೇ?
ರಾಜ್ಯದ ಮುಖ್ಯಮಂತ್ರಿ ಆದ ಮೇಲೆ ಎಷ್ಟು ಬಾರಿ ಮಂಗಳೂರಿಗೆ ಭೇಟಿ ಕೊಟ್ರೀ, ಎಷ್ಟು ಅನುದಾನ ಕೊಟ್ರೀ? ದ.ಕ. ಜಿಲ್ಲೆ ಕರ್ನಾಟಕದಲ್ಲಿ ಇಲ್ಲವೇ ಎಂದು ಸಿದ್ದರಾಮಯ್ಯ ಅವರನ್ನು ವಿಜಯೇಂದ್ರ ಪ್ರಶ್ನಿಸಿದರು.ಯಡಿಯೂರಪ್ಪ ಸಿಎಂ ಆಗಿದ್ದಾಗ ದ.ಕ. ಜಿಲ್ಲೆಗೆ 19,500 ಕೋಟಿ ರು. ಅನುದಾನ ಕೊಟ್ಟಿದ್ದಾರೆ ಎಂದು ಕ್ಷೇತ್ರವಾರು ಅನುದಾನ ನೀಡಿದ ಅಂಕಿಅಂಶ ಪ್ರಸ್ತುತಪಡಿಸಿದರು. ಪುಣ್ಯಾತ್ಮ ಸ್ಪೀಕರ್ ಒಬ್ಬರು ಇದ್ದಾರೆ, ನಮ್ಮ ಶಾಸಕರು ಪ್ರತಿಭಟನೆ ಮಾಡಿದರೆ ಅಮಾನತು ಮಾಡುತ್ತಾರೆ. ಕಾನೂನು ಬಾಹಿರವಾಗಿ ನಮ್ಮನ್ನು ಹೊರಗಡೆ ಓಡಿಸಿದ್ದಾರೆ ಎಂದು ಛೇಡಿಸಿದರು.
ಮೆರವಣಿಗೆ ಮೂಲಕವೂ ಬಿಜೆಪಿ ಜನಾಕ್ರೋಶ
ಬಿಜೆಪಿ ಮಂಗಳೂರಿನಲ್ಲಿ ಹಮ್ಮಿಕೊಂಡ ರಾಜ್ಯ ಸರ್ಕಾರ ವಿರುದ್ಧದ ಜನಾಕ್ರೋಶ ಯಾತ್ರೆಗೆ ಮೆರವಣಿಗೆ ಮೂಲಕ ನಗರದ ಅಂಬೇಡ್ಕರ್ ವೃತ್ತದಲ್ಲಿ ಚಾಲನೆ ನೀಡಲಾಯಿತು. 83 ವಯಸ್ಸಿನ ಬಿಜೆಪಿ ಹಿರಿಯ ಕಾರ್ಯಕರ್ತೆ ವತ್ಸಲಾ ಕಾಮತ್ ಅವರು ಬಿಜೆಪಿ ಧ್ವಜವನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.ಬಳಿಕ ಯಾತ್ರೆಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಬೆಲೆ ಏರಿಕೆ, ಮುಸ್ಲಿಂ ಓಲೈಕೆ, ದಲಿತರ ಹಣ ಲೂಟಿ ವಿರುದ್ಧ ಘೋಷಣೆಗಳು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜನಾಕ್ರೋಶ ಯಾತ್ರೆಯ ಆರಂಭದಲ್ಲಿ ಮೈಕ್ ಮೂಲಕ ಘೋಷಣೆ ಮೊಳಗಿದರೆ ಅದರ ಹಿಂದಿನಿಂದ ರಾಜ್ಯ ಸರ್ಕಾರವನ್ನು ಮಹಿಷಾಸುರನಿಗೆ ಹೋಲಿಕೆ ಮಾಡಿ ಜನಸಾಮಾನ್ಯರನ್ನು ಸತಾಯಿಸುವ ದೃಶ್ಯವನ್ನು ಟ್ಯಾಬ್ಲೋ ಮೂಲಕ ಬಿಂಬಿಸಲಾಯಿತು.