ಸಿದ್ದು ಲಾಬಿಗೂ ರಡ್ಡಿ, ಎಚ್ಸಿಎಂಗೆ ಸಿಗದ ಸಚಿವ ಸ್ಥಾನ

KannadaprabhaNewsNetwork |  
Published : Jun 10, 2026, 01:45 AM IST
ಎಚ್‌.ಸಿ.ಮಹದೇವಪ್ಪ  | Kannada Prabha

ಸಾರಾಂಶ

ಬದಲಾದ ಕಾಲಗತಿಯಲ್ಲಿ ತಮ್ಮ ಅತ್ಯಾಪ್ತ ಹಾಗೂ ಬಹುಕಾಲದ ಒಡನಾಡಿ ಡಾ। ಎಚ್‌.ಸಿ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಕೊಡಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಪ್ರಯತ್ನ ನಡೆಸಿದರೂ ಹೈಕಮಾಂಡ್‌ ಅಡ್ಡಗಾಲು ಹಾಕಿರುವ ವಿಚಾರ ಬಹಿರಂಗಗೊಂಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬದಲಾದ ಕಾಲಗತಿಯಲ್ಲಿ ತಮ್ಮ ಅತ್ಯಾಪ್ತ ಹಾಗೂ ಬಹುಕಾಲದ ಒಡನಾಡಿ ಡಾ। ಎಚ್‌.ಸಿ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಕೊಡಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಪ್ರಯತ್ನ ನಡೆಸಿದರೂ ಹೈಕಮಾಂಡ್‌ ಅಡ್ಡಗಾಲು ಹಾಕಿರುವ ವಿಚಾರ ಬಹಿರಂಗಗೊಂಡಿದೆ.

ಮೊದಲ ಹಂತದ ಸಚಿವ ಸಂಪುಟ ರಚನೆ ಕುರಿತು ದೆಹಲಿಯಲ್ಲಿ ನಡೆದ ಹೈಕಮಾಂಡ್‌ ನಾಯಕರೊಂದಿಗಿನ ಸರಣಿ ಸಭೆಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತರಾದ ಮಾಜಿ ಸಚಿವ ಡಾ। ಎಚ್‌.ಸಿ.ಮಹದೇವಪ್ಪ, ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರಿಗೆ ಸಚಿವ ಸ್ಥಾನ ಕೊಡಿಸಲು ತೀವ್ರ ಪ್ರಯತ್ನ ನಡೆಸಿದರೂ ಅದು ಫಲ ನೀಡಿಲ್ಲ. ತನ್ನದೇ ಆದ ಮೂಲಗಳಿಂದ ಸಚಿವ ಮಹದೇವಪ್ಪ ಅವರ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ಹೈಕಮಾಂಡ್‌ ಸಿದ್ದರಾಮಯ್ಯ ಅವರ ಒತ್ತಡಕ್ಕೆ ಮಣಿದಿಲ್ಲ ಎಂದು ಮೂಲಗಳು ಹೇಳಿವೆ.

40 ವರ್ಷಗಳ ರಾಜಕೀಯ ಸಂಗಾತಿ:

ತಮ್ಮ 40 ವರ್ಷಗಳ ರಾಜಕೀಯ ಸಂಗಾತಿ, ಆಪ್ತ ಎಚ್.ಸಿ.ಮಹದೇವಪ್ಪ ಅವರಿಗೆ ಶತಾಯಗತಾಯ ಸಂಪುಟದಲ್ಲಿ ಅವಕಾಶ ಕೊಡಿಸಬೇಕು ಎಂದು ವರಿಷ್ಠರೊಂದಿಗೆ ತೀವ್ರ ಲಾಬಿ ನಡೆಸಿದರು. ಆದರೆ, ವರಿಷ್ಠರು ಮಹದೇವಪ್ಪ ಸರ್ಕಾರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇನ್ನು ಪಕ್ಷ ಬಲಪಡಿಸುವ ಕಡೆ ಗಮನ ಹರಿಸಲಿ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ತಿಳಿದು ಬಂದಿದೆ.

ಎಚ್.ಸಿ.ಮಹದೇವಪ್ಪ ಅವರು ಆರು ಬಾರಿ ಶಾಸಕ, ನಾಲ್ಕು ಬಾರಿ ಸಚಿವರಾಗಿರುವ ಅನುಭವ ಇರುವ ವ್ಯಕ್ತಿ. ಜನತಾದಳ ಹಾಗೂ ಜೆಡಿಎಸ್‌ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಜತೆಯಿದ್ದ ಅವರು 1994-95ರಲ್ಲಿ ದೇವೇಗೌಡ, ಜೆ.ಎಚ್.ಪಟೇಲ್‌ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಬಳಿಕ 2004ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲೂ ಸಚಿವರಾಗಿದ್ದ ಅವರು ಸಿದ್ದರಾಮಯ್ಯ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದರಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ತಮ್ಮನ್ನು ಅನುಸರಿಸಿದ ಎಚ್.ಸಿ.ಮಹದೇವಪ್ಪ ಅವರನ್ನು ಎಂದೂ ಬಿಟ್ಟುಕೊಡದ ಸಿದ್ದರಾಮಯ್ಯ ಅವರು 2013-18ರಲ್ಲಿ ತಾವು ಮುಖ್ಯಮಂತ್ರಿ ಆದಾಗ ಲೋಕೋಪಯೋಗಿ ಇಲಾಖೆಯಂತಹ ಮಹತ್ವದ ಖಾತೆ ನೀಡಿದ್ದರು. 2023ರಲ್ಲಿ ಮುಖ್ಯಮಂತ್ರಿ ಆದಾಗಲೂ ಸಮಾಜ ಕಲ್ಯಾಣ ಇಲಾಖೆಯಂಥ ಪ್ರಭಾವಿ ಹಾಗೂ ದಲಿತ, ಶೋಷಿತ ವರ್ಗಗಳ ಪರ ಕೆಲಸ ಮಾಡುವಂತಹ ಖಾತೆ ನೀಡಿದ್ದರು.

ತಾವು ಮುಖ್ಯಮಂತ್ರಿ ಆಗಿದ್ದ ಎಂಟೂ ವರ್ಷ ಪ್ರಮುಖ ಖಾತೆ ಮಹದೇವಪ್ಪ ಅವರಿಗೆ ವಹಿಸಿದ್ದರು. ಜತೆಗೆ 2024ರ ಲೋಕಸಭೆ ಚುನಾವಣೆಯಲ್ಲಿ ಮಹದೇವಪ್ಪ ಪುತ್ರ ಸುನಿಲ್‌ಬೋಸ್‌ ಅವರಿಗೆ ಟಿಕೆಟ್‌ ಕೊಡಿಸಿ ಸಂಸದರಾಗಿ ಗೆಲ್ಲಿಸಿಕೊಂಡು ಬಂದಿದ್ದರು. ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕವೂ ಮಹದೇವಪ್ಪ ಅವರಿಗೆ ಪ್ರಮುಖ ಖಾತೆ ವಹಿಸಲು ಬ್ಯಾಟ್ ಮಾಡಿದರು. ಆದರೆ, ಹೈಕಮಾಂಡ್‌ ಒಪ್ಪಿಲ್ಲ ಎಂದು ತಿಳಿದುಬಂದಿದೆ.

ಹಿಂದೆಯೇ ಅಡ್ಡಗಾಲು ಹಾಕಲಾಗಿತ್ತು:

ವಾಸ್ತವವಾಗಿ ಎಚ್.ಸಿ.ಮಹದೇವಪ್ಪ ಅವರು 2018ರ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ 2023ರಲ್ಲೇ ಸಚಿವ ಸ್ಥಾನ ನೀಡಲು ಅಡ್ಡಗಾಲು ಹಾಕಲಾಗಿತ್ತು. ಆದರೆ, ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸ್ನೇಹಿತನನ್ನು ಪಟ್ಟು ಹಿಡಿದು ಸಂಪುಟಕ್ಕೆ ತೆಗೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಇನ್ನು 2013-18ರ ತಮ್ಮ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ಅವರಿಗೂ ಸಚಿವ ಸ್ಥಾನ ಕೊಡಿಸಲು ಸಿದ್ದರಾಮಯ್ಯ ತೀವ್ರ ಪ್ರಯತ್ನ ನಡೆಸಿದರು. 2023ರಲ್ಲಿ ತಾವು ಮುಖ್ಯಮಂತ್ರಿ ಆದಾಗ ರಾಯರೆಡ್ಡಿ ಅವರನ್ನು ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದ ಸಿದ್ದರಾಮಯ್ಯ, ಪ್ರಸ್ತುತ ಸಚಿವ ಸ್ಥಾನ ಕೊಡಿಸಲು ಕಸರತ್ತು ನಡೆಸಿದರು. ಆದರೆ, ಈ ಪ್ರಯತ್ನಕ್ಕೂ ವರಿಷ್ಠರು ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಂಗ ತಾರತಮ್ಯದ ವಿರುದ್ಧ ಒಕ್ಕೊರಲಿನ ಹೋರಾಟ ಅಗತ್ಯ
4 ವಿಧಗಳಲ್ಲಿ ತ್ಯಾಜ್ಯ ವಿಂಗಡಿಸದಿದ್ದರೆ ಪ್ರಕರಣ ದಾಖಲಿಸಿ ದಂಡ