ಕಾಂಗ್ರೆಸ್‌ ಶಾಸಕರಿಗೆ ಸಿದ್ದು ಬಜೆಟ್‌ ಪಾಠ

KannadaprabhaNewsNetwork |  
Published : Mar 10, 2026, 02:45 AM IST
CM Meeting 3 | Kannada Prabha

ಸಾರಾಂಶ

ಕೇಂದ್ರ ಸರ್ಕಾರ ನಮಗೆ ಬರಬೇಕಿರುವ ನ್ಯಾಯಯುತ ಅನುದಾನ ನೀಡದ ಹಿನ್ನೆಲೆಯಲ್ಲಿ ಕೊರತೆ ಬಜೆಟ್‌ ಮಂಡನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಆದರೂ, ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ನಿಯಮ ಪಾಲನೆ ಮೂಲಕ ಉತ್ತಮ ಬಜೆಟ್‌ ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಸರ್ಕಾರ ನಮಗೆ ಬರಬೇಕಿರುವ ನ್ಯಾಯಯುತ ಅನುದಾನ ನೀಡದ ಹಿನ್ನೆಲೆಯಲ್ಲಿ ಕೊರತೆ ಬಜೆಟ್‌ ಮಂಡನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಆದರೂ, ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ನಿಯಮ ಪಾಲನೆ ಮೂಲಕ ಉತ್ತಮ ಬಜೆಟ್‌ ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನ ಮಂಡಲದಿಂದ ಸೋಮವಾರ ಏರ್ಪಡಿಸಲಾಗಿದ್ದ ಆಯವ್ಯಯ, ರಾಜಸ್ವಗಳ ಸಂಗ್ರಹಣೆ, ಅನುದಾನಗಳ ವರ್ಗೀಕರಣ ಹಾಗೂ ಆಯವ್ಯಯ ಅನುದಾನಗಳ ಬಳಕೆ ಮತ್ತು ನಿರ್ವಹಣೆ ಕುರಿತು ಶಾಸಕರಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

2026-27ನೇ ಸಾಲಿಗೆ ₹4.48 ಲಕ್ಷ ಕೋಟಿ ಬಜೆಟ್‌ ಮಂಡಿಸಲಾಗಿದೆ. 2025-26ನೇ ಸಾಲಿನಲ್ಲಿ ₹19 ಸಾವಿರ ಕೋಟಿ ಕೊರತೆ ಬಜೆಟ್‌ ಮಂಡಿಸಲಾಗಿತ್ತು. 2026-27ನೇ ಸಾಲಿನಲ್ಲಿ ₹22 ಸಾವಿರ ಕೋಟಿ ಕೊರತೆ ಬಜೆಟ್‌ ಮಂಡಿಸಲಾಗಿದ್ದು, ಇದು ವಿತ್ತೀಯ ಹೊಣೆಗಾರಿಕೆ ಅಧಿನಿಯಮದಂತೆ ಶೇ.3ಕ್ಕಿಂತ ಒಳಗಿದೆ. ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಿದ್ದ ಅನುದಾನ ಕೊರತೆಯೇ ಈ ಕೊರತೆ ಬಜೆಟ್‌ಗೆ ಕಾರಣ. ಇನ್ನು ಜಿಎಸ್‌ಟಿ ಸರಳೀಕರಣಕ್ಕೂ ಮುನ್ನ ಜಿಎಸ್‌ಟಿ ಬೆಳವಣಿಗೆ ದರ ಶೇ.10ರಷ್ಟಿತ್ತು. ಅದು ಈಗ ಶೇ.4ಕ್ಕೆ ಕುಸಿದಿದೆ. ಅದೇ ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಅದು ಮೈನಸ್‌ಗೆ ತಲುಪಿದೆ. ಆದರೂ, ಆರ್ಥಿಕ ಶಿಸ್ತು ಕಾಪಾಡುವಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಲಾಗಿದೆ. ಅದು ಬಜೆಟ್‌ನಲ್ಲಿ ಪ್ರತಿಬಿಂಬಿತವಾಗಿದೆ ಎಂದರು.

ನಾವು ಹೆಚ್ಚು ಸಾಲ ಮಾಡುತ್ತಿದ್ದೇವೆ ಎಂಬ ಆರೋಪ ಮತ್ತು ಚರ್ಚೆಗಳು ಕೇಳಿಬರುತ್ತಿವೆ. ಆದರೆ, ಸಾಲವನ್ನು ಎಷ್ಟು ಬೇಕಾದರೂ ಮಾಡಲು ಸಾಧ್ಯವಿಲ್ಲ. ನಮ್ಮ ಜಿಎಸ್‌ಡಿಪಿಯ ಶೇ.25ಕ್ಕಿಂತ ಒಳಗೆ ಸಾಲ ಮಾಡಬೇಕಿದೆ. ಅದಕ್ಕೆ ತಕ್ಕಂತೆ ನಾವು ಸಾಲ ಮಾಡಿ ಆರ್ಥಿಕ ಶಿಸ್ತು ಕಾಪಾಡಿದ್ದೇವೆ. ನಮ್ಮ ಸಾಲದ ಬಗ್ಗೆ ಮಾತನಾಡುವ ವಿರೋಧ ಪಕ್ಷಗಳು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ ಮಾಡಲಾಗಿರುವ ಸಾಲದ ಬಗ್ಗೆಯೂ ತಿಳಿಸಬೇಕು. 2014ರವರೆಗೆ ದೇಶದ ಸಾಲ ₹53.11 ಲಕ್ಷ ಕೋಟಿಗಳಿತ್ತು. ಈಗ ಅದು ₹218 ಲಕ್ಷ ಕೋಟಿಗೆ ತಲುಪಿದೆ. ಇನ್ನು, 2026-27ನೇ ಸಾಲಿಗೆ ನಮ್ಮ ಸರ್ಕಾರವು ₹1.32 ಲಕ್ಷ ಕೋಟಿ ಸಾಲ ಮಾಡುತ್ತಿದ್ದು, ಒಟ್ಟು ₹8.24 ಲಕ್ಷ ಕೋಟಿ ಆಗಲಿದೆ. ಈ ಸಾಲ ನಿಯಮದಂತೆಯೇ ಮಾಡಲಾಗುತ್ತಿದೆ ಎಂದು ತಿಳಿಸಿದರು.

2017ರಿಂದ 2022ರವರೆಗೆ ಜಿಎಸ್‌ಟಿ ಪರಿಹಾರವಾಗಿ ಶೇ.14ರಷ್ಟನ್ನು ನೀಡಲಾಗುತ್ತಿತ್ತು. ಆದರೆ, 2022ರಿಂದ ಅದನ್ನು ನಿಲ್ಲಿಸಲಾಗಿದೆ. ದೇಶದಲ್ಲೇ ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯ 2ನೇ ಸ್ಥಾನದಲ್ಲಿ ರಾಜ್ಯದ ಜಿಡಿಪಿ ಶೇ.8.1ರಷ್ಟಿದೆ. ಅದರ ಜತೆಗೆ ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುದಾನವನ್ನೂ ಸಮರ್ಪಕವಾಗಿ ನೀಡುತ್ತಿಲ್ಲ. ಹೀಗೆ ಪ್ರತಿ ಅನುದಾನವನ್ನೂ ಕೇಂದ್ರ ಸರ್ಕಾರ ತಡೆ ಹಿಡಿದಿದ್ದು, ಅದನ್ನು ಸಮರ್ಪಕವಾಗಿ ಕೊಟ್ಟಿದ್ದರೆ ಆರ್ಥಿಕ ಕೊರತೆ ಸೃಷ್ಟಿಯಾಗುತ್ತಿರಲಿಲ್ಲ. ಅಲ್ಲದೆ, ಪಿಂಚಣಿ ಯೋಜನೆಗಾಗಿಯೇ ರಾಜ್ಯ ₹11 ಸಾವಿರ ಕೋಟಿ ಖರ್ಚು ಮಾಡುತ್ತಿದ್ದು, ಕೇಂದ್ರ ಸರ್ಕಾರ ಕೇವಲ ₹550 ಕೋಟಿ ನೀಡುತ್ತದೆ ಎಂದರು.2026-27ನೇ ಸಾಲಿನಲ್ಲಿ ₹1.25 ಲಕ್ಷ ಕೋಟಿ ವಾಣಿಜ್ಯ ತೆರಿಗೆ, ₹29 ಸಾವಿರ ಕೋಟಿ ಮುದ್ರಾಂಕ ಶುಲ್ಕ, ₹15,500 ಕೋಟಿ ಮೋಟಾರು ವಾಹನ ತೆರಿಗೆ, ₹45 ಸಾವಿರ ಕೋಟಿ ಅಬಕಾರಿ ಶುಲ್ಕ ಸಂಗ್ರಹದ ಗುರಿ ಹೊಂದಲಾಗಿದೆ. ಇವುಗಳನ್ನು ಹೊರತುಪಡಿಸಿ ತೆರಿಗೇತರ ಆದಾಯ ಹೆಚ್ಚಿಸಲೂ ಗುರಿ ನಿಗದಿ ಮಾಡಲಾಗಿದೆ. ಇನ್ನು, ಕೇಂದ್ರ ಸರ್ಕಾರದ ತೆರಿಗೆ ಆದಾಯದಲ್ಲಿ 73 ಸಾವಿರ ಕೋಟಿ ರು.ಗಳನ್ನು 2026-27ನೇ ಸಾಲಿನಲ್ಲಿ ನೀಡಬೇಕು. ಈ ಎಲ್ಲ ಆದಾಯಗಳಿಂದ ಬಜೆಟ್‌ ಅನುಷ್ಠಾನ ಮಾಡಲಾಗುವುದು ಎಂದು ವಿವರಿಸಿದರು.

ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎಚ್‌.ಕೆ. ಪಾಟೀಲ್‌, ಡಾ। ಜಿ.ಪರಮೇಶ್ವರ್‌, ಎನ್‌.ಎಸ್‌. ಬೋಸರಾಜು, ಕಾಂಗ್ರೆಸ್‌ನ ಬಹುತೇಕ ಎಲ್ಲ ಶಾಸಕರು, ವಿಧಾನಪರಿಷತ್‌ ಸದಸ್ಯರು ಇದ್ದರು.

---

ಮಾಹಿತಿ ತಿಳಿದುಕೊಳ್ಳಿ

ಶಾಸಕರು ಕೇವಲ ಬಜೆಟ್ ಪುಸ್ತಕ ನೋಡದೆ ಯಾವೆಲ್ಲ ಉದ್ದೇಶಕ್ಕೆ ಎಷ್ಟು ಹಣ ಖರ್ಚು ಮಾಡಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಆದಾಯ ವೆಚ್ಚ, ಬದ್ಧತಾ ವೆಚ್ಚ, ಯೋಜನಾ ವೆಚ್ಚ ಸೇರಿದಂತೆ ಯಾವ ವೆಚ್ಚಗಳು ಎಷ್ಟಿದೆ ಎಂಬುದನ್ನು ಅರಿಯಬೇಕು. ಆಗ ಬಜೆಟ್‌ ಬಗ್ಗೆ ತಿಳುವಳಿಕೆ ಬರಲಿದೆ. ಇನ್ನು, ಈ ಬಜೆಟ್‌ನಲ್ಲಿ ಬಿಟ್ಟ ಅಂಶಗಳು ಮತ್ತು ಹೆಚ್ಚುವರಿ ಖರ್ಚುಗಳಿಗೆ ಸಪ್ಲಿಮೆಂಟ್‌ ಮತ್ತು ಪರಿಷ್ಕೃತ ಎಸ್ಟಿಮೇಟ್‌ ಮಾಡಲಾಗುವುದು.

-ಸಿದ್ದರಾಮಯ್ಯ, ಮುಖ್ಯಮಂತ್ರಿ.

----

ಬಿಜೆಪಿ- ಜೆಡಿಎಸ್‌ ಶಾಸಕರು ಗೈರು:

ವಿಧಾನ ಮಂಡಲದಿಂದ ಆಯೋಜಿಸಲಾಗಿದ್ದ ಕಾರ್ಯಾಗಾರಕ್ಕೆ ವಿರೋಧ ಪಕ್ಷದ ನಾಯಕರಾದ ಆರ್‌. ಅಶೋಕ್‌, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಎಲ್ಲರನ್ನೂ ಆಹ್ವಾನಿಸಲಾಗಿತ್ತು. ಆದರೆ, ಬಿಜೆಪಿ-ಜೆಡಿಎಸ್‌ನ ಯಾವೊಬ್ಬ ಶಾಸಕರೂ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿಲ್ಲ. ಬಿಜೆಪಿ ಉಚ್ಚಾಟಿತ ಶಾಸಕ ಶಿವರಾಮ ಹೆಬ್ಬಾರ್‌ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1 ಅಪಘಾತಕ್ಕೆ 4 ಪ್ರಮಾಣ ಪತ್ರ: ಕೋರ್ಟ್‌ ದಿಗ್ಭ್ರಮೆ
ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಮುಂಚೂಣಿಗೆ: ಮಂಜುನಾಥ್